ಬೆಳೆ ಹಾನಿ, ರೈತರಿಗೆ ಹೆಚ್ಚಿನ ಪರಿಹಾರ: ಬಿ.ಸಿ. ಪಾಟೀಲ್

0
974

ಕಲಬುರಗಿ, ಆ. 26:ಇತ್ತೀಚಿನ ಅತಿವೃಷ್ಟಿಯಿಂದ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ದಾಖಲೆ ಪ್ರಮಾಣದಲ್ಲಿ 1.11 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ. ಉಳಿದಂತೆ ಗದಗ ಜಿಲ್ಲೆಯಲ್ಲಿ 93 ಸಾವಿರ ಹೆಕ್ಟೇರ್, 83 ಸಾವಿರ ಹೆಕ್ಟೇರ್ ಧಾರವಾಡದಲ್ಲಿ ಹಾನಿಯಾಗಿದೆ. ಒಣ ಬೇಸಾಯದ ಪ್ರತಿ ಹೆಕ್ಟೇರ್ ಗೆ 6,800 ರೂ. ಗಳಿಂದ 13,600 ರೂ.ಗಳಿಗೆ, ನೀರಾವರಿ ಪ್ರದೇಶದ ಪ್ರತಿ ಹೆಕ್ಟೇರ್ ಗೆ 13,000 ರೂ. ಗಳಿಂದ 25,000 ರೂ. ಗಳಿಗೆ ಹಾಗೂ ತೋಟಗಾರಿಕೆ ಪ್ರದೇಶದ ಪ್ರತಿ ಹೆಕ್ಟೇರ್ ಗೆ 18,000 ರೂ. ಗಳಿಂದ 28,000 ರೂ. ಗಳಿಗೆ ಹೆಚ್ಚಿಸಿದೆ. ಎನ್.ಡಿ.ಆರ್.ಎಫ್. ಮಾರ್ಗಸೂಚಿ ಮೀರಿ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ಅನ್ನದಾತನಿಗೆ ನಮ್ಮ ಸರ್ಕಾರ ನೀಡುತ್ತಿದೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಅವರು ಕಲಬುರಗಿ ಹೊರವಲಯದ ಕೋಟನೂರ(ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತ ಪಿ.ಎಂ.ಕಿಸಾನ್ ಯೋಜನೆಯಡಿ ಕೇಂದ್ರದ 6 ಸಾವಿರ ರೂ. ಜೊತೆ ರಾಜ್ಯದಿಂದ 4 ಸಾವಿರ ರೂ. ಸೇರಿಸಿ ವಾರ್ಷಿಕ 10 ಸಾವಿರ ರೂ. ನೀಡಲಾಗುತ್ತಿದೆ. ಕೃಷಿ ಪದವಿ ಕಾಲೇಜಿನಲ್ಲಿ ರೈತರ ಮಕ್ಕಳ ಮೀಸಲಾತಿ ಶೇ. 40 ರಿಂದ ಶೇ.50ಕ್ಕೆ ಹೆಚ್ಚಿಸಿದ ಪರಿಣಾಮ ಕಳೆದ ವರ್ಷ 184 ಮಕ್ಕಳು ಹೆಚ್ಚುವರಿಯಾಗಿ ಪ್ರವೇಶಾತಿ ಪಡೆದಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ಕೃಷಿ ಪರಿಕರಗಳ ಗುಣಮಟ್ಟ ಖಾತ್ರಿಪಡಿಸಿಕೊಂಡು ಬೀಜ ಅಧಿನಿಯಮ, ರಸಗೊಬ್ಬರ ನಿಯಂತ್ರಣ, ಕೀಟನಾಶಕ ಕಾಯ್ದೆಗಳ ಸಮರ್ಪಕ ಅನುಷ್ಠಾನಕ್ಕಾಗಿ ರಾಜ್ಯದಲ್ಲಿ ಕೃಷಿ ಇಲಾಖೆ ಅಧೀನದಡಿ 2014ರಲ್ಲಿ ಜಾಗೃತ ಕೋಶ ಸ್ಥಾಪಿಸಲಾಗಿದೆ. ಈ ಕೋಶವು ಬೆಂಗಳೂರು, ಬೆಳಗಾವಿ ವಲಯದಲ್ಲಿ ಮಾತ್ರ ಇತ್ತು. ನಾನು ಅಧಿಕಾರ ವಹಿಸಿದ ಮೇಲೆ ಇತ್ತೀಚೆಗೆ ಮೈಸೂರಿನಲ್ಲಿ ಇಂದು ಕಲಬುರಗಿಯಲ್ಲಿ ಕಚೇರಿ ತೆರೆಯಲಾಗಿದೆ.
ಇದರಿಂದ ರಾಜ್ಯದ ಪ್ರತಿ ಕಂದಾಯ ವಿಭಾಗಕ್ಕೆ ಜಾಗೃತ ಕಚೇರಿ ತೆರೆದಂತಾಗಿದೆ ಎಂದ ಕೃಷಿ ಸಚಿವರು, ಕಳೆದ 3 ವರ್ಷದಲ್ಲಿ 28.35 ಕೋಟಿ ರೂ. ಮೌಲ್ಯದ ಕೃಷಿ ಪರಿಕರಗಳು ಜಪ್ತಿ ಮಾಡಿ 304 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಮೊಕದಮ್ಮೆ ಹೂಡಿದೆ. ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕ ಕಾಯ್ದೆ ಉಲ್ಲಂಘನೆ ಮಾಡಿದ 232 ಕೃಷಿ ಮಾರಾಟಗಾರರ ಪರವಾನಿಗೆ ಅಮಾನತ್ತು ಮಾಡಿ, 25 ಪರವಾನಿಗೆ ರದ್ದುಪಡಿಸಿದೆ ಎಂದು ಸಚಿವರು ವಿವರಿಸಿದರು.
10 ಲಕ್ಷ ಮಕ್ಕಳಿಗೆ 569 ಕೋಟಿ ರೂ.:
ರೈತರ ಬಗ್ಗೆ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಕ ಸಚಿವ ಸಂಪುಟದಲ್ಲಿ ಅನ್ನದಾತನ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದು, ಕಳೆದ ವರ್ಷ 10 ಲಕ್ಷ ಮಕ್ಕಳಿಗೆ 569 ಕೋಟಿ ರೂ. ಬ್ಯಾಂಕ್ ಖಾತೆಗೆ ಪಾವತಿಸಿದೆ. ಇತ್ತೀಚೆಗೆ ಈ ಯೋಜನೆ ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಿದ್ದು, ರಾಜ್ಯದ 6 ಲಕ್ಷ ಮಕ್ಕಳು ಇದರ ಪ್ರಯೋಜನೆ ಪಡೆಯಲಿದ್ದಾರೆ ಎಂದರು.
ರೈತರಿಗೆ ಡೀಸಲ್ ಸಬ್ಸಿಡಿ;
ರೈತ ಸಾಲ-ಸೂಲ ಮಾಡಿ ಹಣ ತಂದು ಬೀಜ, ರಸಗೊಬ್ಬರವನ್ನು ಭೂಮಿತಾಯಿಗೆ ಹಾಕಿದರೂ ಕೆಲವೊಮ್ಮೆ ಅತಿವೃಷ್ಟಿ ಅಥವಾ ಮಳೆರಾಯನ ಅವಕೃಪೆಯಿಂದ ಬೆಳೆದ ಬೆಳೆ ಕೈಗೆ ಸಿಗದೆ ಸಂಕಷ್ಟಕ್ಕೆ ಸಿಲುಕಿರುತ್ತಾನೆ. ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು ಕರಾವಳಿಯಲ್ಲಿ ದೋಣಿ ಚಲಾಯಿಸುವ ಮೀನುಗಾರರಿಗೆ ನೀಡುವ ಮಾದರಿಯಲ್ಲಿಯೇ ಟ್ರಾಕ್ಟರ್ ಮೂಲಕ ಉಳುಮೆ ಮಾಡುವ ರೈತರಿಗೆ ಒಂದು ಎಕರೆಗೆ 250 ರೂ. ಗಳಂತೆ ಗರಿಷ್ಠ 5 ಎಕರೆಗೆ 1,250 ರೂ. ಡೀಸೆಲ್ ಸಬ್ಸಿಡಿ ಸೆಪ್ಟೆಂಬರ್ ತಿಂಗಳಿನಿAದ ನೀಡಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಅವರು ಮಾತನಾಡಿ, ಕೃಷಿ ಕುಟುಂಬದಿoದ ಬಂದಿರುವ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಅಧಿಕಾರ ಸ್ವೀಕರಿಸಿದ ನಂತರ ರಾಜ್ಯದಲ್ಲಿ ರಸಗೊಬ್ಬರ, ಬೀಜದ ಕೊರತೆಯಿಲ್ಲ. ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ರೂವಾರಿ ಇವರಾಗಿದ್ದಾರೆ. ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಅತಿವೃಷ್ಟಿಗೆ ಬೆಳೆ ಹಾನಿಯಾಗಿದ್ದು, ಸರ್ವೆ ಕಾರ್ಯ ನಡೆದಿದೆ. ಸರ್ವೆ ಮುಗಿದ ಕೂಡಲೆ ರೈತರಿಗೆ ಬೆಳೆ ಪರಿಹಾರ ನೀಡಲಾಗುವುದು ಎಂದರು.
ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕರಾದ ಶಶೀಲ ಜಿ. ನಮೋಶಿ, ಸುನೀಲ ವಲ್ಯಾಪೂರೆ, ಬಿ.ಜಿ.ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ, ಕೃಷಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ್, ಕೃಷಿ ಆಯುಕ್ತ ಬಿ.ಶರತ್, ಅಪರ ನಿರ್ದೇಶಕ ದಿವಾಕರ್, ಜಾಗೃತ ಕೋಶದ ಅಪರ ನಿರ್ದೇಶಕ ಅನುಪ ಕುಮಾರ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಕಲಬುರಗಿ ನೂತನ ಜಾಗೃತ ಕೋಶದ ಜಂಟಿ ನಿರ್ದೇಶಕ ರಾಮಕೃಷ್ಣ ಕೆ. ಸೇರಿದಂತೆ ಮೊದಲಾದವರು ಇದ್ದರು. ಪ್ರಭಾರಿ ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್ ಸ್ವಾಗತಿಸಿದರು.

Total Page Visits: 1336 - Today Page Visits: 1

LEAVE A REPLY

Please enter your comment!
Please enter your name here