ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ: ಆರೋಗ್ಯ ಸಚಿವ ಶ್ರೀರಾಮುಲು ಮೌನಕ್ಕೆ ಶರಣಾಗಿದ್ಯಾಕೆ?

0
839

ಬೆಂಗಳೂರು, ಜು. 25: ರಾಜ್ಯದಲ್ಲಿ 2008ರಲ್ಲಿ ಮೊದಲ ಬಾರಿಗೆ ಆರೋಗ್ಯ ಇಲಾಖೆಯಿಂದ ಆ ಯೋಜನೆಯನ್ನು ಜಾರಿಗೆ ತಂದಾಗ ಕುಹಕವಾಡಿದವರೇ ಹೆಚ್ಚು. ವಿರೋಧ ಪಕ್ಷದವರು ಮಾತ್ರವಲ್ಲ. ಆಡಳಿತ ಪಕ್ಷ ಬಿಜೆಪಿಯಲ್ಲಿಯೂ ವ್ಯಂಗ್ಯವಾಡಿದ್ದವರಿಗೂ ಕೊರತೆ ಇರಲಿಲ್ಲ. ಇದೆಲ್ಲ ಆಗೋದೇನ್ರಿ? ಟೈರ್ ಸವೆಯವರೆಗು ಓಡಿಸ್ತಾರೆ. ಆಮೇಲೆ ಯಾವುದೊ ಒಂದು ಸರ್ಕಾರಿ ಆಸ್ಪತ್ರೆ ಎದುರು ನಿಲ್ಲಿಸುತ್ತಾರೆ. ಅಲ್ಲಿಗೆ ದುಡ್ಡು ಹೊಡೆಯಲು ಮಾಡಿದ ಮತ್ತೊಂದು ಯೋಜನೆ ಕೊನೆಯಾಗುತ್ತದೆ ನೋಡ್ತಾಯಿರಿ ಎಂದು ಬಿಜೆಪಿಯವರೆ ಮಾತನಾಡಿ ಕೊಂಡಿದ್ದರು.
ಆದರೆ ಅದು ದುಡ್ಡು ಹೊಡೆಯಲು ಮಾಡಿದ ಯೋಜನೆಯಲ್ಲ ಎಂದು ಮುಂದಿನ ಆರು ತಿಂಗಳುಗಳಲ್ಲಿಯೇ ವ್ಯಂಗ್ಯವಾಡಿದ್ದವರಿಗೆ ಅರ್ಥವಾಗಿತ್ತು. ಅದು ಬೇರಾವುದೊ ಯೋಜನೆ ಅಲ್ಲ. ತುರ್ತು ಚಿಕಿತ್ಸೆ ಒದಗಿಸಲು ಜಾರಿಗೆ ತಂದಿದ್ದ ‘ಆರೋಗ್ಯ ಕವಚ’ (108) ತುರ್ತು ಸೇವಾ ಯೋಜನೆ. ಹೀಗೆ ನವೆಂಬರ್ 1, 2008ರಂದು ಜಾರಿಗೆ ಬಂದಿದ್ದ ಯೋಜನೆ ಹಿಂದೆ ಇದ್ದಿದ್ದು ಸಾಮಾನ್ಯ ನಗರಸಭೆ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿದ್ದ ಅಂದಿನ ಹಾಗೂ ಇಂದಿನ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು. ಬಡವರ ಕಷ್ಟ, ಆಸ್ಪತ್ರೆಗೆ ಹೋಗಲು ಪರದಾಡುವ ಸ್ಥಿತಿಯನ್ನು ಕಣ್ಣಾರೆ ಕಂಡು ಅನುಭವಿಸಿದ್ದ ಶ್ರೀರಾಮುಲು ಅವರಿಗೆ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರುವ ಉತ್ಸಾಹವಿತ್ತು, ಬದ್ಧತೆಯಿತ್ತು. ಹೀಗಾಗಿ ಕಳೆದ 12 ವರ್ಷಗಳಲ್ಲಿ ಕೋಟ್ಯಂತರ ಕನ್ನಡಿಗರಿಗೆ ತುರ್ತು ಆರೋಗ್ಯ ವ್ಯವಸ್ಥೆ ಒದಗಿಸುವಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರ ಕೊಡುಗೆಯನ್ನು ನೆನೆಯಲೇ ಬೇಕಾಗುತ್ತದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಎರಡನೆಯ ಅವಧಿಗೆ ಅಧಿಕಾರಕ್ಕೆ ಬಂದಾಗ ಸಹಜವಾಗಿಯೆ ಶ್ರೀರಾಮುಲು ಅವರಿಗೆ ಮತ್ತೆ ಆರೋಗ್ಯ ಇಲಾಖೆಯನ್ನು ಹಂಚಿಕೆ ಮಾಡಲಾಗಿದೆ. ಜೊತೆಗೆ ಅವರು ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ರಾಜ್ಯದಲ್ಲಿ ಕೊರೊನಾ ವೈರಸ್ ಮಹಾಮಾರಿ ಕಾಣಿಸಿಕೊಂಡಿತು. ಅದೇ ಸಂದರ್ಭದಲ್ಲಿ ಪೂರ್ವನಿರ್ಧಾರಿತವಾಗಿದ್ದ ಪುತ್ರಿಯ ಮದುವೆಯನ್ನು ಅಪ್ಪನಾಗಿ ಮಾಡಿದ ಶ್ರೀರಾಮುಲು ಅವರು, ರಾಜ್ಯದ ಆರೋಗ್ಯ ಸಚಿವರಾಗಿ ಅಧಿಕಾರಿಗಳ ಸಭೆ ಸೇರಿದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನ ಕೊಟ್ಟಿದ್ದರು.
ರಾಜ್ಯದಲ್ಲಿ ಕೋವಿಡ್-19 ಸೋಂಕಿತರು ದೃಢಪಟ್ಟ ಬಳಿಕ ರಾಜ್ಯ ಸಚಿವ ಸಂಪುಟದ ಬಹುತೇಕ ಸದಸ್ಯರು ಮನೆ ಹಿಡಿದು ಕುಳಿತಿದ್ದರು. ವಿಧಾನ ಮಂಡಳ ಬಜೆಟ್ ಅಧಿವೇಶನ ಅರ್ಧಕ್ಕೆ ಮೊಟಕಾಗುತ್ತಿದ್ದಂತೆಯೆ ಶ್ರೀರಾಮುಲು ಅವರು ಮೊದಲು ಮಾಡಿದ್ದ ಕೆಲಸವೆಂದರೆ, ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿದ್ದು. ಮೊದಲ ಹಂತದ ಲಾಕ್‌ಡೌನ್ಸ ಮಯದಲ್ಲಿಯೆ ಶ್ರೀರಾಮುಲು ಅವರು 19 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಆಯಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪರಿಶೀಲನಾ ಸಭೆಯನ್ನೂ ಮಾಡಿದ್ದರು. ಕೋವಿಡ್ ಸೋಂಕಿತರಲ್ಲಿ ಭರವಸೆ, ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲಿಗರಾಗಿ ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ಆಗಿದ್ದ ಸೋಂಕಿತರನ್ನು ಪಿಪಿಇ ಕಿಟ್ ಧರಿಸಿ ಭೇಟಿಯಾಗಿದ್ದರು. ಆ ಮೂಲಕ ಇಡೀ ರಾಜ್ಯದ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಿದ್ದರು. ಪಾರದರ್ಶಕವಾಗಿ ಇಲಾಖೆಗೆ ಬೇಕಾದ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಖರೀದಿ ಮಾಡಲು ಸೂಚಿಸಿದ್ದರು.
ಆದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರು ಸೈಲೆಂಟಾಗಿದ್ದಾರೆ. ತಾವಾಯಿತು, ತಮ್ಮ ಇಲಾಖೆಯ ಕೆಲಸವಾಯಿತು ಎಂಬAತೆ ಇದ್ದಾರೆ. ಇದಕ್ಕೆ ಕಾರಣ ಬಿಜೆಪಿಯಲ್ಲಿನ ಒಣ ರಾಜಕೀಯ ಹಾಗೂ ಆರೋಗ್ಯ ಇಲಾಖೆಯಲ್ಲಿ ಇತರರ ಹಸ್ತಕ್ಷೇಪ ಎನ್ನಲಾಗಿದೆ. ಆರೋಗ್ಯ ಇಲಾಖೆಯ ಸಚಿವರಾಗಿ ಶ್ರೀರಾಮುಲು ಅವರು ಇದ್ದರೂ, ಕೂಡ ಕೋವಿಡ್ ಟಾಸ್ಕ್ಫೋರ್ಸ್ ಉಸ್ತುವಾರಿಯನ್ನು ಬೇರೆಯವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಂಚಿಕೆ ಮಾಡಿದ್ದರು. ಅದು ವರ್ಕೌಟ್ ಆಗದೇ ಇದ್ದಾಗ ಮತ್ತೆ ಶ್ರೀರಾಮುಲು ಅವರಿಗೆ ಬೆಂಗಳೂರು ಹೊರತು ಪಡಿಸಿ ಉಳಿದ ಜಿಲ್ಲೆಗಳ ಕೋವಿಡ್ ಉಸ್ತುವಾರಿ ಕೊಡಲಾಯ್ತು. ಆದರೂ ಕೂಡ ಅವರ ಇಲಾಖೆಯಲ್ಲಿ ಅನ್ಯರ ಹಸ್ತಕ್ಷೇಪ ನಿಂತಿಲ್ಲ. ಹೀಗಾಗಿ ಶ್ರೀರಾಮುಲು ಅವರೇ ಒಂದು ಬಾರಿ ಸಂಪುಟ ಸಭೆಯಲ್ಲಿ ಎಲ್ಲವನ್ನೂ ವಿವರಿಸಿದ್ದರು.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಮಾಡಲಾಗಿದ್ದ 4,167 ಕೋಟಿ ರೂಪಾಯಿಗಳ ಖರೀದಿಯಲ್ಲಿ ಸುಮಾರು 2000 ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಪ ಮಾಡುತ್ತಲೇ ಬಂದಿದ್ದರು. ಆದರೆ ಸಂಪುಟದ ಇತರ ಹಿರಿಯ ಸಚಿವರು ಭ್ರಷ್ಟಾಚಾರದ ಆರೋಪದ ಬಗ್ಗೆ ಆರೋಗ್ಯ ಇಲಾಖೆ ಸಚಿವರು ಸ್ಪಷ್ಟನೆ ಕೊಡುತ್ತಾರೆ ಎಂದು ಶ್ರೀರಾಮುಲು ಅವರತ್ತ ಬೆರಳು ತೋರಿಸಿ ಸುಮ್ಮನಾಗಿದ್ದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಡಿದ್ದ ಆರೋಪದಲ್ಲಿ ಆರೋಗ್ಯ ಇಲಾಖೆಯಿಂದ ವ್ಯಯಿಸಲಾಗಿದ್ದ ಸುಮಾರು 290 ಕೋಟಿ ರೂಪಾಯಿಗಳಿಗೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಸ್ಪಷ್ಟನೆ ಕೊಟ್ಟು ದಾಖಲೆಗಳನ್ನು ಒದಗಿಸಿದ್ದರು. ಆದರೆ ಯಾವಾಗ ಸಿದ್ದರಾಮಯ್ಯ ಅವರು ಗೃಹ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳಿಂದ ಆಗಿದ್ದ 4,167 ಕೋಟಿ ರೂಪಾಯಿಗಳ ಕುರಿತಂತೆ ಇಲಾಖಾವಾರು ದಾಖಲೆಗಳನ್ನು ಬಿಡುಗಡೆ ಮಾಡಿದರೊ ಆಗ ಇಡೀ ಬಿಜೆಪಿ ಸರ್ಕಾರದಲ್ಲಿ ಸಂಚಲನ ಉಂಟಾಯ್ತು. ತರಾತುರಿಯಲ್ಲಿ ಸ್ವತಃ ಸಿಎಂ ಸುದ್ದಿಗೋಷ್ಠಿ ಮಾಡಲು ಮುಂದಾಗಿದ್ದರು. ಯಾಕೆಂದರೆ ಎಲ್ಲ ಇಲಾಖೆಗಳಿಗೂ ಹಣಕಾಸು ಸಚಿವರೂ ಆಗಿರುವ ಯಡಿಯೂರಪ್ಪ ಅವರೇ ಅನುಮೋದನೆ ಕೊಡಬೇಕು. ಹೀಗಾಗಿ ಸಿದ್ದರಾಮಯ್ಯ ಅವರ ಮಾಡಿದ್ದ ಆರೋಗಳು ಅಂತಿಮವಾಗಿ ಯಡಿಯೂರಪ್ಪ ಅವರು ಹೊಂದಿರುವ ಕಣಕಾಸು ಇಲಾಖೆಗೆ ಬಂದು ನಿಲ್ಲುತ್ತವೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸ್ಪಷ್ಟನೆ ಕೊಡಲು ಮುಂದಾದಾಗ ಸಂಬAಧಿಸಿದ ಇಲಾಖೆಗಳ ಸಚಿವರುಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಅವರ ಆರೋಪವನ್ನು ಅಲ್ಲಗಳೆದರು. ಆದರೆ ಬಹುತೇಕ ಆರ್. ಅಶೋಕ್, ಡಾ. ಅಶ್ವಥ್ ನಾರಾಯಣ, ಡಾ. ಸುಧಾಕರ್ ಎಲ್ಲರೂ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಿದರೆ ಹೊರತು, ಯಾರೂ ಕೂಡ ಸಿದ್ದರಾಮಯ್ಯ ಅವರು ಕೇಳಿದ್ದ ದಾಖಲೆಗಳನ್ನು ಬಿಡುಗಡೆ ಮಾಡಲಿಲ್ಲ. ಹೀಗಾಗಿ ನಂತರ ಮತ್ತೆ ಸಿದ್ದರಾಮಯ್ಯ ಅವರು ನಾನು ಕೇಳಿರುವುದು ಬರಿ ಆರೋಗ್ಯ ಇಲಾಖೆಯ ದಾಖಲೆಗಳನ್ನು ಅಲ್ಲ. ಜೊತೆಗೆ ಉಳಿದೆಲ್ಲ ಇಲಾಖೆಗಳಲ್ಲಿ ಮಾಡಿರುವ ಖರೀದಿ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು. ಅದಕ್ಕೆ ಪ್ರತಿಯಾಗಿ ಉಳಿದ ಸಚಿವರು ತಮ್ಮ ಇಲಾಖೆಗಳ ದಾಖಲೆ ಬಿಡುಗಡೆ ಮಾಡಲಿಲ್ಲ. ಬದಲಿಗೆ ಮೈತ್ರಿ ಸರ್ಕಾರ ಕಾಲದಲ್ಲಿ ಮಾಡಲಾಗಿದೆ ಎನ್ನಲಾದ ವೆಂಟಿಲೇಟರ್‌ಗಳ ಖರೀದಿಯನ್ನು ಪ್ರಸ್ತಾಪ ಮಾಡಿದರು. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ನಾನೇನು ಮೈತ್ರಿ ಸರ್ಕಾರದಲ್ಲಿ ಮಂತ್ರಿ ಆಗಿದ್ದೇ ಏನ್ರಿ? ಅಂತಾ ಮರು ಪ್ರಶ್ನೆ ಮಾಡುವುದರೊಂದಿಗೆ ಬಿಜೆಪಿ ಸರ್ಕಾರಕ್ಕೆ ಮತ್ತೊಂದು ರೀತಿಯ ಮುಜುಗುರ ಉಂಟಾಯ್ತು.

ಈ ಮಧ್ಯೆ ಸಿಎಂ ಸೂಚನೆಯ ಹೊರತಾಗಿಯೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಸುದ್ದಿಗೋಷ್ಠಿಯಲ್ಲಿ ಸೈಲಂಟಾಗಿದ್ದರು. ಹೀಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು ಮೌನವಹಿಸಿದ್ದು ಯಾಕೇ ಎಂಬ ಪ್ರಶ್ನೆ ಉದ್ಬವವಾಗಿದೆ. ಹೋರಾಟದ ಮೂಲಕವೇ ರಾಜಕೀಯ ಪ್ರವೇಶ ಮಾಡಿದ್ದ ಶ್ರೀರಾಮುಲು ಅವರು, ಕಾಂಗ್ರೇಸ್ ಭದ್ರಕೊಟೆಯಾಗಿದ್ದ ಬಳ್ಳಾಯರಿಯನ್ನು ಕಾಂಗ್ರೆಸ್ ಮುಕ್ತ ಮಾಡಿದ್ದು ರಾಷ್ಟ್ರಮಟ್ಟದಲ್ಲಿಯೂ ಸದ್ದು ಮಾಡಿತ್ತು. ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಪ್ರಭಾವಿ ನಾಯಕರಾದ ಕೆ. ಸಿ. ಕೋಂಡಯ್ಯ, ಅಲ್ಲಂ ವೀರಭದ್ರಪ್ಪ , ಕೋಳೂರು ಬಸನಗೌಡ, ದಿವಾಕರ್ ಬಾಬು ಅಂಥವರ ವಿರುದ್ದ ಹೋರಾಟ ಮಾಡುತ್ತಾ ಬಳ್ಳಾರಿ ಜಿಲ್ಲೆಯ ಪ್ರತಿಯೊಂದು ಹಳ್ಳಿಗೂ ಭೇಟಿಕೊಟ್ಟು ಬಿಜೆಪಿ ಪಕ್ಷವನ್ನು ಕಟ್ಟಿ ಕಾಂಗ್ರೇಸ್ ಭದ್ರಕೊಟೆಯನ್ನು ಛಿದ್ರ ಮಾಡಿ ಬಿಜೆಪಿ ಭದ್ರ ನೆಲೆಯೂರುವಂತೆ ಮಾಡಿದ್ದು ಶ್ರೀರಾಮುಲು ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ ಸಚಿವ ಶ್ರೀರಾಮುಲು ಅವರ ಆರೋಗ್ಯ ಇಲಾಖೆಯಲ್ಲಿ ಅನ್ಯರ ಹಸ್ತಕ್ಷೇಪ ಹೆಚ್ಚಾಗಿದೆ ಎನ್ನಲಾಗುತ್ತಿದೆ. ರಾಜ್ಯ ಕೋವಿಡ್ ಸಂಕಷ್ಟ ಎದುರಿಸುತ್ತಿರುವಾಗ ತೆಗೆದುಕೊಳ್ಳುವ ಪ್ರತಿಯೊಂದು ನಿರ್ದಾರದಲ್ಲಿಯೂ ಹಸ್ತಕ್ಷೇಪ ವಾಗುತ್ತಿದೆ. ಹೀಗಾಗಿ ಗೊಂದಲ ಉಂಟಾಗಿದೆ. ಇನ್ನು ಕೋವಿಡ್ ನಿರ್ವಹಣೆ ಮಾಡುವುದಾಗಿ ಬೆಂಗಳೂರು ಜವಾಬ್ದಾರಿ ತೆಗೆದುಕೊಂಡಿದ್ದ ಟಾಸ್ಕ್ಫೋರ್ಸ್ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವರ ಬಗ್ಗೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೆ.

ಒಟ್ಟಾರೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಅನ್ಯರ ಹಸ್ತಕ್ಷೇಪದ ನೇರ ಪರಿಣಾಮವಾಗುತ್ತಿರುವುದು ಮಾತ್ರ ರಾಜ್ಯದ ಜನತೆಯ ಮೇಲೆ. ನಾಡಿದ್ದು ಜುಲೈ 27ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮತ್ತೆ ರಾಜ್ಯದಲ್ಲಿ 2011ರ ಪರಿಸ್ಥಿತಿ ಮರುಕಳಿಸುವುದರಲ್ಲಿ ಅನುಮಾನವಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಚ್ಚರಿಕೆಯ ನಡೆಯನ್ನು ಇಡಬೇಕಾದ ಅಗತ್ಯ ಹಿಂದೆAದಿಗಿAತಲೂ ಈಗ ಹೆಚ್ಚಾಗಿದೆ!

LEAVE A REPLY

Please enter your comment!
Please enter your name here