ಜೈಲಿನಲ್ಲಿದ್ದ ಪತಿಗೆ ಗಾಂಜಾ ಕೊಡಲು ಹೋಗಿ ಸಿಕ್ಕಿಬಿದ್ದ ಪತ್ನಿ

0
528

ಕಲಬುರ್ಗಿ, ಆ.2- ಜೀನ್ಸ್ ಪ್ಯಾಂಟಿನಲ್ಲಿ ಗಾಂಜಾ ತುಂಬಿ ಹೊಲಿಗೆ ಹಾಕುವ ಮೂಲಕ ಎಲ್ಲರ ಕಣ್ಣು ತಪ್ಪಿಸಿ ಪತಿಗೆ ಮಾದಕವನ್ನು ತಲುಪಿಸಲು ಯತ್ನಿಸಿದ ಮಹಿಳೆಯ ಕೈಚಳಕವನ್ನು ನಗರದ ಕೇಂದ್ರ ಕಾರಾಗೃಹದ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ.
ಪತಿ- ಪತ್ನಿ ಮಧ್ಯೆ ಸಾಮರಸ್ಯವಿದ್ದಷ್ಟು ಜೀವನ ಸುಖಕರವಾಗಿರುತ್ತದೆ. ಆದಾಗ್ಯೂ, ಈ ದಂಪತಿ ನಡುವೆ ಕೊಂಚ ಸಾಮರಸ್ಯ ಹೆಚ್ಚಾಗಿಯೇ ಇದ್ದಂತಿದೆ. ಏಕೆಂದರೆ, ಜೈಲಿನಲ್ಲಿ ಖೈದಿಯಾಗಿರುವ ಪತಿಗೆ ಗಾಂಜಾ ಕೊಡಲು ಹೋಗಿ ಮಹಿಳೆಯೊಬ್ಬರು ಸಿಕ್ಕಿಬಿದ್ದಿದ್ದಾರೆ. ನಗರದ ಕೇಂದ್ರ ಕಾರಾಗೃಹದಲ್ಲಿ ಖೈದಿಯಾಗಿರುವ ಪತಿಯನ್ನು ಭೇಟಿ ಮಾಡುವ ಸೋಗಿನಲ್ಲಿ ಬಂದು ಗಾಂಜಾ ಕೊಡಲು ಯತ್ನಿಸಿದ್ದಾಳೆ. ಬಳಿಕ ಸಿಬ್ಬಂದಿಗೆ ತನ್ನ ಕೈಚಳಕ ಗೊತ್ತಾಗುತ್ತಿದ್ದಂತೆಯೇ ಪರಾರಿಯಾಗಿದ್ದಾಳೆ.
ಪ್ರಕರನವೊಂದರಲ್ಲಿ ಜೈಲುವಾಸ ಅನುಭವಿಸುತ್ತಿರುವ ಜಾಲೇಂದ್ರನಾಥ್ ಕಾವಳೆ ಎಂಬಾತನಿಗೆ ಗಾಂಜಾ ಪೂರೈಕೆ ಮಾಡಲು ಪ್ರಯತ್ನಿಸಿದ ಆತನ ಪತ್ನಿ ಸುನೀತಾ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಕಳೆದ ಸೋಮವಾರ ಸಂಜೆ 5-15ಕ್ಕೆ ಪತಿಯನ್ನು ಭೇಟಿ ಮಾಡಲು ಜೈಲಿಗೆ ಆಗಮಿಸಿದ ಸುನೀತಾ ಸಂದರ್ಶನದ ಚೀಟಿ ಪಡೆದಿದ್ದಳು. ಬರುವಾಗ ಪತಿಗಾಗಿ ಎರಡು ಜೀನ್ಸ್ ಪ್ಯಾಂಟ್ ಕೂಡ ತಂದಿದ್ದಾಳೆ. ಜೀನ್ಸ್ ಪ್ಯಾಂಟ್‌ನ ಬೆಲ್ಟ್ ಪಟ್ಟಿಯಲ್ಲಿ ಗಾಂಜಾ ಇಟ್ಟು ಅನುಮಾನ ಬರದಂತೆ ಕೈ ಹೊಲಿಗೆ ಹಾಕಿದ್ದಾಳೆ. ಪತಿಗೆ ಕೊಡುವ ಮುನ್ನ ಜೈಲು ಭದ್ರತಾ ಸಿಬ್ಬಂದಿ ಕೈಗೆ ಪರಿಶೀಲನೆಗಾಗಿ ಒಪ್ಪಿಸಿದ್ದಾಳೆ. ಬಳಿಕ ತಾನೂ ಹೆಣ್ಣು ಮಕ್ಕಳ ತಪಾಸಣೆ ಕೋಣೆಗೆ ಹೋಗಿ ತಪಾಸಣೆಗೆ ಒಳಗಾಗಿದ್ದಾಳೆ. ಇತ್ತ ಪ್ಯಾಂಟ್ ಪರಿಶೀಲಿಸಿದ ಜೈಲು ಭದ್ರತಾ ಸಿಬ್ಬಂದಿಗೆ ಪ್ಯಾಂಟಿನ ಬೆಲ್ಟ್ ಪಟ್ಟಿ ಉಬ್ಬಿಸಿಕೊಂಡAತೆ ಕಂಡಿದೆ. ಅನುಮಾನಗೊಂಡು ಕತ್ತರಿಸಿ ನೋಡಿದಾಗ ಗಾಂಜಾ ಪತ್ತೆಯಾಗಿದೆ. ಭದ್ರತಾ ಸಿಬ್ಬಂದಿ ತನ್ನ ಗುಟ್ಟು ರಟ್ಟು ಮಾಡಿರುವ ವಿಷಯ ಅರಿತ ಸುನೀತಾ ನಿಧಾನವಾಗಿ ಅಲ್ಲಿಂದ ಯಾರಿಗೂ ಗೊತ್ತಾಗದಂತೆ ಪರಾರಿಯಾಗಿದ್ದಾಳೆ ಎಂದು ಜೈಲಾಧಿಕಾರಿಗಳು ದೂರಿನಲ್ಲಿ ವಿವರಿಸಿದ್ದಾರೆ.
ಸುನೀತಾ ಪಡೆದ ಸಂದರ್ಶನದ ಚೀಟಿ, ಆಕೆಯ ಆಧಾರ್ ಕಾರ್ಡ್ ಝೆರಾಕ್ಸ್ ಪ್ರತಿ, ಎರಡು ಜೀನ್ಸ್ ಪ್ಯಾಂಟ್, ಪ್ಯಾಂಟಿನಲ್ಲಿ ದೊರೆತ 15 ಗ್ರಾಮ್ ಗಾಂಜಾ ಆಧರಿಸಿ ಆಕೆಯ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಅಧಿನಿಯಮ 2022ರ ಕಲಂ 42ರಲ್ಲಿ ಹಾಗೂ ಎನ್‌ಡಿಪಿಎಸ್ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವಂತೆ ಜೈಲಾಧಾರಿಗಳು ಫರತಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೋಲಿಸರು ಈ ಕುರಿತು ತನಿಖೆ ಮುಂದುವರೆಸಿದ್ದಾರೆ.

LEAVE A REPLY

Please enter your comment!
Please enter your name here