ಕಲಬುರಗಿ,ಮೇ.6:ಕಲಬುರಗಿ ಜಿಲ್ಲಾ ಪಂಚಾಯತಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ 2018ನೇ ಬ್ಯಾಚಿನ ಐ.ಎ.ಎಸ್. ಅಧಿಕಾರಿ ಡಾ. ಗಿರೀಶ್ ಡಿ. ಬದೋಲೆ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಸಿ.ಇ.ಓ ಡಾ.ದಿಲೀಷ್ ಶಶಿ ಅವರು ಡಾ.ಗಿರೀಶ್ ಡಿ. ಬದೋಲೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಡಾ.ಗಿರೀಶ್ ಡಿ. ಬದೋಲೆ ಮೂಲತ ಮಹಾರಾಷ್ಟ್ರ ಜಿಲ್ಲೆಯ ಓಸ್ಮಾನಾಬಾದ ಜಿಲ್ಲೆಯ ಉಮರ್ಗಾ ತಾಲೂಕಿನ ಕಸಗಿ ಗ್ರಾಮದವರು. ಎಂ.ಬಿ.ಬಿ.ಎಸ್. ಪದವಿಧರರಾಗಿರುವ ಇವರು ಓ.ಎನ್.ಜಿ.ಸಿ (ಆಯಿಲ್ ಅಂಡ್ ನ್ಯಾತುರಲ್ ಗ್ಯಾಸ್ ಕಾರ್ಪೋರೇಷನ್ ಲಿ.) ಸಂಸ್ಥೆಯ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಐ.ಎ.ಎಸ್. ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿರುವ ಇವರು ಕಲಬುರಗಿಗೆ ವರ್ಗವಾಗುವ ಮುನ್ನ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು.
ನಿರ್ಗಮಿತ ಸಿ.ಇ.ಓ ಡಾ.ದಿಲೀಷ್ ಶಶಿ ಅವರು ಸುಮಾರು 15 ತಿಂಗಳು ಕಲಬುರಗಿಯಲ್ಲಿ ಕಾರ್ಯನಿರ್ವಹಿಸಿ ಸಿಬ್ಬಂದಿ ಮತ್ತು ಅಡಳಿತ ಸುಧಾರಣಾ ಇಲಾಖೆಯ ಇ-ಗವರ್ನೆನ್ಸ್ ವಿಭಾಗದ ಇ-ಸಿಡಿಎಸ್ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ.
ಎA.ಬಿ.ಬಿ.ಎಸ್. ವೈದ್ಯರೇ ಸಿ.ಇ.ಓ ಗಳು:
ನಿರ್ಗಮಿತ ಸಿ.ಇ.ಓ ಡಾ.ದಿಲೀಷ್ ಶಶಿ, ಹಿಂದಿದ್ದ ಡಾ.ಪಿ.ರಾಜಾ ಹಾಗೂ ಈಗ ಅಧಿಕಾರ ಸ್ವೀಕರಿಸಿರುವ ಡಾ. ಗಿರೀಶ್ ಡಿ. ಬದೋಲೆ ಅವರು ಎಂ.ಬಿ.ಬಿ.ಎಸ್ ಪದವೀಧರರಾಗಿರುವುದು ಜಿಲ್ಲೆಯ ಮಟ್ಟಿಗೆ ವಿಶೇಷವಾಗಿದೆ.