ಹಳೆ ತೊಗರಿ ಮಾರಾಟಕ್ಕೆ ಮುಂದಾಗಿರುವ ನಫೆಡ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

0
1027

ಕಲಬುರಗಿ, ಜ. 9: ಕಳೆದ ವರ್ಷದ ದಾಸ್ತಾನು ಇರುವ ತೊಗರಿ ಏಕಾಏಕಿ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಮಾರಲು ಹೊರಟಿರುವ ಕುತಂತ್ರ ಬುದ್ಧಿಯ ನಫೆಡ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಸರಕಾರವನ್ನು ಆಗ್ರಹಿಸಿದ್ದಾರೆ.
ನಫೆಡ(ರಾಷ್ಟ್ರೀಯ ಕೃಷಿ ಮಾರುಕಟ್ಟೆ ಒಕ್ಕೂಟ) ಅಧಿಕಾರಿಗಳು ಕಳೆದ ವರ್ಷದ ದಾಸ್ತಾನು ಇರುವ ನೂರಾರು ಕ್ವಿಂಟಾಲ್ ತೊಗರಿಯನ್ನು ಕಡಿಮೆ ಬೆಲೆಯಲ್ಲಿ ದಾಲಮಿಲ್ ಗಳಿಗೆ ಮಾರುತ್ತಿದ್ದಾರೆ.ಈಗಾಗಲೇ ರಾಶಿ ಮಾಡಿರುವ ರೈತರ ಹೊಸ ತೊಗರಿಯನ್ನು ಕಾರ್ಖಾನೆ ಮಾಲೀಕರು ಕಡಿಮೆ ಬೆಲೆಗೆ ಕೊಳ್ಳುತ್ತಿದ್ದಾರೆ.ಇದರಿಂದ ತೊಗರಿ ಬೆಲೆ ಧಿಡೀರನೆ ಕುಸಿದಿದೆ.
ಅತಿವೃಷ್ಟಿಯಿಂದ ತೊಂದರೆ ಅನುಭವಿಸುತ್ತಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆಯುವ ಸಾಹಸ ಮಾಡುತ್ತಿದ್ದಾರೆ. ಕಳೆದ ಬಾರಿ ರಾಶಿ ಆಗಿರುವ ತೊಗರಿ ಇಷ್ಟು ದಿನ ದಾಸ್ತಾನು ಮಾಡಿಟ್ಟುಕೊಳ್ಳುವ ಉದ್ದೇಶ ಏನು? ರೈತರ ತೊಗರಿ ಮಾರುಕಟ್ಟೆಗೆ ಬರುವ ಸಂದರ್ಭದಲ್ಲಿ ಹಳೆ ತೊಗರಿ ಮಾರಾಟಕ್ಕೆ ತಂದಿರುವ ಅಧಿಕಾರಿಗಳ ಮತ್ತು ದಳ್ಳಾಳಿಗಳ ಹಾಗೂ ಖರೀದಿಸುತ್ತಿರುವ ದಾಲಮಿಲ್ ಮಾಲಿಕರ ಒಳಒಪ್ಪಂದ ಆಗಿದೆ.ಕಳೆದ ಬಾರಿ ರೈತರಿಂದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ ಗೆ 6100 ರೂ ನೀಡಿ ಖರೀದಿಸಿ ಈಗ 5200 ರೂಪಾಯಿಗೆ ಮಾರಾಟ ಮಾಡುತ್ತಿರುವುದರಿಂದ ಸರ್ಕಾರಕ್ಕೂ ನಷ್ಟ ಉಂಟಾಗುತ್ತಿದೆ.
ರೈತರನ್ನು ಆರ್ಥಿಕವಾಗಿ ಕುಗ್ಗಿಸುವ ಹುನ್ನಾರ ನಡೆಯುತ್ತಿದೆ.ತೊಗರಿ ಬೆಳೆ ಭಾರಿ ಮಳೆಯಿಂದಾಗಿ ಇಳುವರಿ ಕಡಿಮೆ ಬರುತ್ತಿದೆ.ಬೆಳೆದಷ್ಟು ಬೆಳೆಗೆ ಒಳ್ಳೆ ಬೆಲೆ ನೀರಿಕ್ಷಿಸಿರುವ ಈ ಭಾಗದ ರೈತರಿಗೆ ಅಧಿಕಾರಿಗಳು ಈ ರೀತಿ ಮೋಸ ಮಾಡಲು ಹೊರಟಿರುವುದು ಅನ್ಯಾಯ.
ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರ ದಾಸ್ತಾನು ಮಾಡಿರುವ ತೊಗರಿ ಮಾರಾಟವನ್ನು ತಡೆದು ತಪ್ಪಿತಸ್ಥ ನಫೆಡ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದುಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Total Page Visits: 1308 - Today Page Visits: 1

LEAVE A REPLY

Please enter your comment!
Please enter your name here