ವಿವಿಧೆಡೆ ಅಬಕಾರಿ ದಾಳಿ: 5 ಲಕ್ಷ ರೂ. ಮೌಲ್ಯದ ಮದ್ಯ ಹಾಗೂ ವಾಹನಗಳ ವಶ

0
1287

ಕಲಬುರಗಿ.ಡಿ.21:ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟವನ್ನು ನಿಷೇಧಿಸಲಾಗಿದೆ. ಅಬಕಾರಿ ಅಧಿಕಾರಿಗಳು ತಾಲೂಕಿನಲ್ಲಿ ವಿವಿಧೆಡೆ ದಾಳಿ ನಡೆಸಿ ಒಟ್ಟು 5 ಲಕ್ಷ ರೂ.ಗಳ ಮೌಲ್ಯದ ಮದ್ಯ ಹಾಗೂ ವಾಹನಗಳನ್ನು ಜಪ್ತಿಪಡಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ ಎಂದು ಕಲಬುರಗಿ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಳಂದ ತಾಲೂಕಿನ ಸಂಗೋಳಗಿ (ಜಿ) ಗ್ರಾಮದ ಹತ್ತಿರ ವಾಹನಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ 12.960 ಲೀಟರ್ ಸ್ವದೇಶಿ ಮದ್ಯ ಹಾಗೂ 5.850 ಲೀಟರ್ ಬಿಯರ್‌ನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿ ಜಪ್ತಿಪಡಿಸಿಕೊಂಡು ಆಳಂದ ವಲಯದ ಅಬಕಾರಿ ನಿರೀಕ್ಷಕ ಶ್ರೀಶೈಲ್ ಆವಜಿ ಅವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಲಬುರಗಿ ತಾಲೂಕಿನ ಬೇಲೂರ ಕ್ರಾಸ್ ಹತ್ತಿರದಲ್ಲಿ ವಾಹನಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ 17.100 ಲೀಟರ್ ಸ್ವದೇಶಿ ಮದ್ಯವನ್ನು ಸಾಗಾಟ ಮಾಡುತ್ತಿರುವವರನ್ನು ಪತ್ತೆ ಮಾಡಿ ಕಲಬುರಗಿ ವಲಯ ನಂ.1ರ ಅಬಕಾರಿ ನಿರೀಕ್ಷಕ ಬಾಲಕೃಷ್ಣ ಎಂ. ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕಲಬುರಗಿ ನಗರದ ಗಂಜ್ ಏರಿಯಾದಲ್ಲಿ ವಾಹನಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ 17.280 ಲೀಟರ್ ಸ್ವದೇಶಿ ಮದ್ಯವನ್ನು ಸಾಗಾಟ ಮಾಡುತ್ತಿರುವವರನ್ನು ಪತ್ತೆ ಮಾಡಿ, ಕಲಬುರಗಿ ವಲಯ ನಂ.1ರ ಅಬಕಾರಿ ಉಪ ನಿರೀಕ್ಷಕ ಬಸವರಾಜ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕಲಬುರಗಿ ನಗರದ ಮಿಜಗುರಿ ಹತ್ತಿರದಲ್ಲಿ ವಾಹನಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ 8.640 ಲೀಟರ್ ಸ್ವದೇಶಿ ಮದ್ಯವನ್ನು ಸಾಗಾಟ ಮಾಡುತ್ತಿರುವವರನ್ನು ಪತ್ತೆ ಮಾಡಿ, ಕಲಬುರಗಿ ವಲಯ ನಂ.1ರ ಅಬಕಾರಿ ಉಪ ನಿರೀಕ್ಷಕರಾದ ಪ್ರಿಯಾಂಕ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಜೇವರ್ಗಿ ಹೊರ ವಲಯದಲ್ಲಿ ಗಸ್ತು ಮಾಡುತ್ತಿದ್ದಾಗ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವ ವಾಹನಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಪತ್ತೆಯಾದ 25.920 ಲೀಟರ್ ಮದ್ಯವನ್ನು ಪತ್ತೆ ಮಾಡಿ, ಜೇವರ್ಗಿ ಅಬಕಾರಿ ನಿರೀಕ್ಷಕರಾದ ವನಿತಾ ಸಿತಾಳೆ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಯಡ್ರಾಮಿ ತಾಲೂಕಿನ ಮಾಗಣಗೇರಾ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವ ವಾಹನಗಳನ್ನು ಪರಿಶೀಲಿಸುವಾಗ ಟೋಯೋಟಾ ಇನ್ನೋವಾ ಕಾರಿನಲ್ಲಿ 43.200 ಲೀಟರ್ ಮದ್ಯ ಹಾಗೂ 31.200 ಲೀಟರ್ ಬಿಯರ್‌ನ್ನು ಪತ್ತೆ ಮಾಡಿ, ಜೇವರ್ಗಿ ವಲಯದ ಅಬಕಾರಿ ನಿರೀಕ್ಷಕರಾದ ವನಿತಾ ಸಿತಾಳೆ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕಲಬುರಗಿ ವಿಭಾಗದ (ಜಾರಿ ಮತ್ತು ತನಿಖೆ) ಅಬಕಾರಿ ಜಂಟಿ ಆಯುಕ್ತ ಎಸ್.ಕೆ. ಕುಮಾರ ಹಾಗೂ ಅಬಕಾರಿ ಉಪ ಆಯುಕ್ತರಾದ ಶಶಿಕಲಾ ಎಸ್. ಒಡೆಯರ್ ಅವರ ಆದೇಶ ಹಾಗೂ ಅಬಕಾರಿ ಉಪ ಅಧೀಕ್ಷಕ ಮಹ್ಮದ್ ಇಸ್ಮಾಯಿಲ್ ಇನಾಮದಾರ್ ಅವರ ನೇತೃತ್ವದಲ್ಲಿ ಈ ಅಬಕಾರಿ ದಾಳಿಯನ್ನು ಕೈಗೊಳ್ಳಲಾಗಿದೆ. ಈ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯಾದ್ಯಂತ ತನಿಖೆ ಕಾರ್ಯವನ್ನು ಚುರುಕುಗೊಳಿಸಿ ಮೇಲ್ಕಂಡAತೆ ಅಕ್ರಮ ಮದ್ಯ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here