ಕಲಬುರಗಿ ಡಿ 9: ಲಂಚ ಸ್ವೀಕಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಘಟಕದ (ಸಿಅರ್‌ಇಸೆಲ್ )ಡಿವೈಎಸ್ಪಿ ವಿಜಯಲಕ್ಷ್ಮಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ವಿಶೇಷ ಸತ್ರ ನ್ಯಾಯಾಧೀಶ ಆರ್.ಜೆ ಸತೀಶ್ ಸಿಂಗ್ ಅವರು ತೀರ್ಪು ನೀಡಿದ್ದಾರೆ.
ವಿಜಯಲಕ್ಷ್ಮಿ 2015 ರಲ್ಲಿ ಶಹಾಬಾದ್ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ವೇಳೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಜಪ್ತಿ ಮಾಡಿದ್ದ ವಾಹನ ಬಿಡಲು 25 ಸಾವಿರ ರೂಪಾಯಿ ಲಂಚ ಕೇಳಿದ್ದ ಆರೋಪದ ಹಿನ್ನೆಲೆ ರಾಜು ಎಂಬ ವ್ಯಕ್ತಿ ಲೋಕಾಯುಕ್ತರ ಮೊರೆ ಹೋಗಿದ್ದರು.
ಲಂಚ ಪಡೆಯುವ ವೇಳೆ ವಿಜಯಲಕ್ಷ್ಮಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಸದ್ಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿಗೆ ಶಿಕ್ಷೆ ವಿಧಿಸಲಾಗಿದೆ. 4 ವರ್ಷ ಜೈಲು ಶಿಕ್ಷೆ ಜೊತೆಗೆ 10 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಆದೇಶದ ನಂತರ ಪೊಲೀಸರು ವಿಜಯಲಕ್ಷ್ಮಿ ಅವರನ್ನು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.