ಸರ್ವಾಧಿಕಾರಿ ಶರಣು ಮೋದಿ ನಡೆ ವಿರುದ್ಧ ಹೋರಾಟ:ನರಿಬೋಳ

0
1143

ಕಲಬುರಗಿ,ಅ.24-ಸರ್ವಾಧಿಕಾರಿ ಧೋರಣೆ ತಳೆಯುತ್ತಿರುವ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾದ ಶರಣಕುಮಾರ ಮೋದಿ ಅವರು ತಮ್ಮನ್ನು ಕೇಳದೇ ಏನನ್ನು ಯಾರು ಮಾಡಬಾರದು ಹಾಗೂ ಹೇಳಿಕೆ ನೀಡಬಾರದು ಎಂದು ಹಿಟ್ಲರ್‌ನಂತೆ ವರ್ತಿಸುತ್ತಿರುವುದನ್ನು ವೀರಶೈವ ಮಹಾಸಭಾದ ಕಾರ್ಯಕಾರಣಿ ಸದಸ್ಯ ಹಾಗೂ ಜಿಲ್ಲಾ ಗೌರವಾಧ್ಯಕ್ಷ ಎಂ. ಎಸ್. ಪಾಟೀಲ್ ನರಿಬೋಳ ಅವರು ಖಂಡಿಸಿದ್ದಾರೆ.
ಮೋದಿ ಅವರ ನಡೆಯು ಸಮಾಜದ ಮುಖಂಡರಲ್ಲಿ ಅಸಮಾಧಾನವನ್ನುಂಟು ಮಾಡುತ್ತಿದ್ದು, ಅವರ ಈ ನಡೆಯ ವಿರುದ್ಧ ಹೋರಾಟ ನಡೆಸಬೇಕಾದದ್ದು ಅನಿವಾರ್ಯವಾಗುತ್ತದೆ ಎಂದು ಅವರು ಗುಡುಗಿದ್ದಾರೆ.
ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ನಾನೇ ಎಲ್ಲ, ನನ್ನಿಂದಲೇ ಎಲ್ಲ ಎಂಬ ವರ್ತನೆ ನಮಗೆ ಬೇಸರ ತಂದಿದೆ. ಸಮಾಜ ಮತ್ತು ಸಮಾಜದ ಮುಖಂಡರ ಹಿತದೃಷ್ಟಿಯಿಂದ ಪತ್ರಿಕಾ ಹೇಳಿಕೆಗಳನ್ನು ನೀಡಿದರೆ, ನನ್ನ ಅನುಮತಿ ಇಲ್ಲದೆ ಯಾರೂ ಹೇಳಿಕೆಗಳನ್ನು ನೀಡಬಾರದು ಎಂದು ಆದೇಶ ಹೊರಡಿಸುವುದರ ಮೂಲಕ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದ ಸರಿಯಲ್ಲ ಎಂದಿದ್ದಾರೆ ನರಿಬೋಳ.
ನಗರದಲ್ಲಿ ನಿರ್ಮಾಣ ಮಾಡುತ್ತಿರುವ ವೀರಶೈವ ಲಿಂಗಾಯತ ಮಹಿಳಾ ವಸತಿ ನಿಲಯದ ಗುತ್ತಿಗೆಯನ್ನು ಸಮಾಜದವರಿಗೆ ನೀಡದೆ ತಮ್ಮ ಆತ್ಮಿಯ ಸ್ನೇಹಿತರಿಗೆ ನೀಡುವುದರ ಮೂಲಕ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರಿಂದ ಸಮಾಜದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಆದ್ದರಿಂದ ಸಮಾಜದ ಮುಖಂಡರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಬೆಂಗಳೂರಿನಲ್ಲಿರುವ ಮಹಾಸಭಾದ ಕೇಂದ್ರ ಕಚೇರಿಗೆ ತೆರಳಿ ಹೋರಾಟ ನಡೆಸಬೇಕಾದದ್ದು ಅನಿವಾರ್ಯವಾಗುತ್ತದೆ ಎಂದರು.
ಮುAದಿನ ತಿಂಗಳು 20ರ ನಂತರ ರಾಜ್ಯದ ವಿವಿಧ ಜಿಲ್ಲಾ ಮತ್ತು ತಾಲೂಕ ಘಟಕಗಳ ಚುನಾವಣೆ ನಡೆಯಲಿದ್ದು, ಅದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಘಟಕಕ್ಕೂ ಚುನಾವಣೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಸೋಮವಾರದಿಂದ ಜಿಲ್ಲೆಯ ಸಮಾಜದ ಎಲ್ಲಾ ಪ್ರಮುಖರನ್ನು ಭೇಟಿ ಮಾಡಿ ಈ ವಿಷಯವನ್ನು ಅವರ ಗಮನಕ್ಕೆ ತಂದು ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಹೋರಾಟ ನಡೆಸಬೇಕಾದದ್ದು ಅನಿವಾರ್ಯವಾಗುತ್ತದೆ ಎಂದು ಮನವರಿಕೆ ಮಾಡುವುದಾಗಿ ತಿಳಿಸಿದರು.
ಸಮಾಜದ ಸದಸ್ಯರಾದ ಶರಣಬಸಪ್ಪ, ತಾತಾಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here