ಕಲಬುರಗಿ.ಅ.16: ಕಲಬುರಗಿ ಜಿಲ್ಲಾ ಪ್ರವಾಸದಲ್ಲಿರುವ ಕಂದಾಯ ಸಚಿವ ಅರ್.ಅಶೋಕ ಅವರು ಶುಕ್ರವಾರ ಭೀಮಾ ನದಿಯಿಂದ ಪ್ರವಾಹಕ್ಕೊಳಗಾದ ಜೇವರ್ಗಿ ತಾಲೂಕಿನ ಫಿರೋಜಾಬಾದ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಅವರು ಸಂತ್ರಸ್ತರಿಗೆ ಗುಣಮಟ್ಟದ ಆಹಾರ ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಳಜಿ ಕೇಂದ್ರದಲ್ಲಿ ಅಡುಗೆ ತಯ್ಯಾರಿಕೆ ಕಾರ್ಯವನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು ಸಂತ್ರಸ್ತರಿಗೆ ಅನ್ನ, ಸಾಂಬಾರ್ ನೀಡಿದರೆ ಸಾಲದು. ಜೊತೆಗೆ ಮೊಟ್ಟೆ, ಪಲ್ಯಾ ಸೇರಿದಂತೆ ಗುಣಮಟ್ಟದ ಆಹಾರ ಪೂರೈಸಬೇಕು. ಕೋವಿಡ್-19 ಸಂದರ್ಭ ಇದಾಗಿರುವುದರಿಂದ ಸಂತ್ರಸ್ತರಿಗೆ ಸ್ಯಾನಿಟೈಸ್ ನೀಡುವುದಲ್ಲದೆ ಎಲ್ಲೆಡೆ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದರು.
ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭದಲ್ಲಿ ಅಧಿಕಾರಿ-ಸಿಬ್ಬಂದಿಗಳು 24 ಗಂಟೆ ಕಾರ್ಯನಿರ್ವಹಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ. ಪ್ರವಾಹ ಸಂದರ್ಭದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಕೂಡಿ ಗ್ರಾಮ ಪಂಚಾಯತಿಯ ಗ್ರಾಮ ಲೆಕ್ಕಾಧಿಕಾರಿ ಶ್ರೀಮಂತ ಅವರನ್ನು ತಕ್ಷನದಿಂದಲೆ ಜಾರಿಗೆ ಬರುವಂತೆ ಅಮಾನತ್ತುಗೊಳಿಸುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ ಸಿದ್ದರಾಯ ಭೋಸಗಿ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಶಾಸಕ ಡಾ.ಅಜಯ ಸಿಂಗ್ ಮಾತನಾಡಿ ಭೀಮಾ ನದಿ ಪ್ರವಾಹದಿಂದ ಜೇವರ್ಗಿ ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದಲ್ಲದೆ ಗ್ರಾಮಗಳಿಗೆ ನೀರು ನುಗ್ಗಿದೆ. ಅಧಿಕಾರಿಗಳಿಂದ ಕೂಡಲೆ ಸಮೀಕ್ಷೆ ನಡೆಸಿ ಹೆಚ್ಚಿನ ಪ್ರಮಾಣದಲ್ಲಿ ರೈತಾಪಿ ವರ್ಗಕ್ಕೆ ಪರಿಹಾರ ನೀಡಬೇಕು ಎಂದು ಕಂದಾಯ ಸಚಿವರಲ್ಲಿ ಮನವಿ ಮಾಡಿಕೊಂಡರು.