ಕಲಬುರಗಿ,ಆ.19-ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಹಾಳಾದ ಹೆಸರು, ತೊಗರಿ, ಉದ್ದು, ಸೇರಿದಂತೆ ಮುಂತಾದ ಬೆಳೆಗಳ ಬಗ್ಗೆ ಕೂಡಲೇ ಜಂಟಿ ಸಮೀಕ್ಷೆ ನಡೆಸುವುದರೊಂದಿಗೆ ರೈತರ ನೆರವಿಗೆ ಬರಬೇಕೆಂದು ಸರಕಾರವನ್ನು ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಅವರು ಆಗ್ರಹಿಸಿದ್ದಾರೆ.
ಅವರಿಂದಿಲ್ಲಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಬೆಳೆ ಹಾನಿಯಾದ ರೈತರಿಗೆ ಎನ್.ಡಿ.ಆರ್.ನವರ ಪರಿಹಾರ ರಾಜ್ಯ ಸರಕಾರ ಪ್ರತ್ಯೇಕವಾಗಿ ಪ್ರತಿ ಏಕರೆಗೆ 10 ಸಾವಿರ ರೂ. ಪರಿಹಾರ ನೀಡಬೇಕು, ಕಳೆದ ಬಾರಿಯಂತೆ ಐದಾರು ಸಾವಿರ ರೂ. ನೀಡಬಾರದೆಂದು ಹೇಳಿದ ಅವರು ರೈತರ ಬೆಳೆಗಳಾದ ಉದ್ದು, ಹೆಸರು ಈಗಾಗಲೇ ಮಾರುಕಟ್ಟೆಗೆ ಬರುತ್ತಿದ್ದು, ಕೂಡಲೇ ಈ ಬೆಳೆಗಳ ಖರೀದಿಗೆ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ವಿಳಂಬ ತೋರಿದರೆ ರೈತರ ಬೆಳೆಗಳು ಮಧ್ಯವರ್ತಿಗಳ ಪಾಲಾಗಿ ಸಣ್ಣ ಮತ್ತು ಅತೀ ಸಣ್ಣ ರೈತರು ನಷ್ಟ ಅನುಭವಿಸಿದಂತಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ. ಆರ್. ಪಾಟೀಲ್, ಈ ಬಾರಿ ಉತ್ತಮ ಮುಂಗಾರು ಮಳೆಯಾಗಿದ್ದು, ರೈತರ ಮಖದಲ್ಲಿ ಮಂದಹಾಸ ಮೂಡಿದೆ. ಹೆಸರು, ಉದ್ದು ಉತ್ತಮವಾಗಿ ಬೆಳೆದಿದ್ದು, ಪ್ರತಿಬಾರಿ 20-25 ಸಾವಿರ ಹೆಕ್ಟರ್ ಬೆಳೆಯುತ್ತಿದ್ದ ಉದ್ದು ಈ ಬಾರಿ 63 ಸಾವಿರ ಹೆಕ್ಟರ್ ಹಾಗೂ 35 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಹೆಸರು ಬೆಳೆದಿದ್ದು, ಹಲವು ಕಡೆ ಅತೀವೃಷ್ಟಿಯಿಂದ ಬೆಳೆಗಳು ಹಾಳಾಗಿದ್ದು, ರೈತರ ಬೆಳೆಗಳಿಗೆ ಸರಕಾರ ಕೂಡಲೇ ಬೆಂಬಲ ಬೆಲೆಯನ್ನು ಘೋಷಿಸಿ, ಖರೀದಿ ಕೇಂದ್ರಗಳಲ್ಲಿ ಇಷ್ಟೆ ಪ್ರಮಾಣದಲ್ಲಿ ಖರೀದಿಯ ಮೀತಿಯನ್ನು ಹೆರದೆ ವೀರಳವಾಗಿ ಬೆಳೆದ ಈ ಭಾಗದ ರೈತರ ಬೆಳೆಗಳನ್ನು ಖರೀದಿಸಿ, ಸಂಕಷ್ಟದಲ್ಲಿದ್ದ ರೈತರಿಗೆ ನೆರವು ಒದಗಿಸಬೇಕು ಎಂದು ಅವರು ಕೂಡಾ ಸರಕಾರವನ್ನು ಒತ್ತಾಯಿಸಿದರು.