ಕಲಬುರಗಿ,ಏ.22- ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ 545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರಿಗೆ ಬಗೆದಷ್ಟು ಮಾಹಿತಿಗಳು ಲಭ್ಯವಾಗುತ್ತಿವೆ. ಪರೀಕ್ಷೆಯಲ್ಲಿ ಬ್ಲೂ ಟೂತ್ ಬಳಕೆ ಮಾಡಿರುವುದು ಬಹಿರಂಗವಾಗಿದ್ದು, ಇದು ಇಡೀ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಅಕ್ರಮದ ಹೆಜ್ಜೆ ಜಾಡನ್ನು ಬೆನ್ನತ್ತಿರುವ ಸಿಐಡಿ ಪೊಲೀಸರು, ಇನ್ನಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಗರದ ನಿವಾಸಿ ವಿಶಾಲ್ ಶಿರೂರ ಎಂಬ ಅಭ್ಯರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಲಾಗಿದೆ.
ಹಗರಣದ ಕೇಂದ್ರ ಸ್ಥಾನವಾಗಿರುವ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲೇ ಈತ ಪರೀಕ್ಷೆ ಬರೆದಿರುವುದು ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಪರೀಕ್ಷೆ ಬರೆಯುವ ಸಲುವಾಗಿ ವಿಶಾಲ್ ಬ್ಲೂ ಟೂತ್ ಬಳಕೆ ಮಾಡಿರುವ ಸಂಶಯ ವ್ಯಕ್ತವಾಗಿದೆ. ಹೀಗಾಗಿ,ಪಿಎಸ್‌ಐ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. ಇದುವರೆಗೂ ಸಿಐಡಿ ಪೊಲೀಸರು ಓಎಂಆರ್ ಶೀಟ್‌ನಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿದ್ದರು. ಆದರೆ, ಈಗ ಪರೀಕ್ಷೆಗೆ ಬ್ಲೂ ಟೂತ್ ಬಳಸಿರುವುದು ಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ಸಿಐಡಿ ಪೊಲೀಸರು ಮತ್ತೊಂದು ಹೆಜ್ಜೆ ಮುಂದೆ ಸಾಗಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿ ಬ್ಲೂ ಟೂತ್ ಬಳಸಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆಯೂ ತನಿಖೆಯನ್ನು ಚುರುಕುಗೊಳಿಸಲು ಸಿಐಡಿ ಮುಂದಾಗಿದೆ.
ಪ್ರಕರಣಕ್ಕೆ ಸಂಬAಧಿಸಿದAತೆ ಇದುವರೆಗೂ 12 ಜನರನ್ನು ಬಂಧಿಸಲಾಗಿದೆ. ನಿನ್ನೆ ಬಂಧಿಸಲಾದ ಶಾಸಕ ಎಂ.ವೈ ಪಾಟೀಲ ಅವರ ಅಂಗರಕ್ಷಕ ಹಯ್ಯಾಳಿ ದೇಸಾಯಿಯನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.