ಕಲಬುರಗಿ,ಅಕ್ಟೋಬರ್.17:ಕೋರಳ್ಳಿ ಡ್ಯಾಂದಿAದ ನೀರು ಹರಿದ ಪರಿಣಾಮ ಹಾನಿಗೊಳಗಾದ ಆಳಂದ ತಾಲೂಕಿನ ಭೂಸನೂರ ಮತ್ತು ಕೋರಳ್ಳಿ ಗ್ರಾಮಗಳ ರಸ್ತೆ, ಸೇತುವೆ ಹಾಗೂ ಹೊಲಗಳಿಗೆ ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣ ಮಾಲಾಜಿ ಅವರು ಇತ್ತೀಚೆಗೆ ಭೇಟಿ ನೀಡಿ ವೀಕ್ಷಿಸಿದರು.
ಪ್ರವಾಹದಿಂದ ರಸ್ತೆ ಮತ್ತು ಸೇತುವೆಗಳು ಕೆಟ್ಟು ಹೋಗಿದ್ದು, ಸರಿಪಡಿಸುವಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಿಗೆ ಸೂಚಿಸಿದರು. ರೈತರ ಬೆಳೆ ಹಾನಿಯ ಬಗ್ಗೆ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸರ್ವೇ ಮಾಡಿ ವರದಿ ನೀಡಬೇಕು ಎಂದು ಸೂಚಿಸಿದರು.
ಕೊರಳ್ಳಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಅಧ್ಯಕ್ಷರು ನಿರಾಶ್ರಿತರ ಸಮಸ್ಯೆ ಆಲಿಸಿ ಮಾತನಾಡಿ ಸಂತ್ರಸ್ತರಿಗೆ ಗುಣಮಟ್ಟದ ಊಟ ಹಾಗೂ ಮೂಲಸೌಕರ್ಯ ಕಲ್ಪಿಸುವಂತೆ ಕಾಳಜಿ ಕೇಂದ್ರದ ಉಸ್ತುವಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಗುರುಶಾಂತಗೌಡ ಶಾಲಿವಾಹನ ಪಾಟೀಲ, ಜಿಲ್ಲಾ ಪಂಚಾಯತ ಸದಸ್ಯ ಹರ್ಷನಂದ ಸುಭಾಷ್ ಗುತ್ತೆದಾರ, ಆಳಂದ ತಹಶೀಲ್ದಾರರು, ಜಂಟಿ ಕೃಷಿ ನಿರ್ದೇಶಕ ರತೆಂದ್ರನಾಥ ಸುಗೂರು, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಪ್ರಭುರಾಜ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಮುಖಂಡರುಗಳಾದ ಹಣಮಂತರಾಯ ಮಲಾಜಿ, ರಾಜಶೇಖರ ಮಲಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.