ಕಲಬುರಗಿ, ಜು. 15:ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಒಬ್ಬನನ್ನು ಬಂಧಿಸುವ ವೇಳೆ ಇಂದು ಬೆಳಿಗ್ಗೆ ಪೊಲೀಸ್ ಫೈರಿಂಗ್ ನಡೆದ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ.

ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ನೀಡಿದ ಮಾಹಿತಿಯಂತೆ, ಪರಾರಿಯಾಗಿದ್ದ ಸಂತೋಷ್ ಎಂಬ ಕೈದಿ ಕಪನೂರು ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಲು ಮುಂದಾದಾಗ, ಆತ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾನೆ.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮೊದಲು ಗಾಳಿಯಲ್ಲಿ ಎಚ್ಚರಿಕೆಯ ಗುಂಡು ಹಾರಿಸಿದ್ದು, ಬಳಿಕ ಆತ್ಮರಕ್ಷಣೆಗಾಗಿ ಆರೋಪಿಯ ಬಲ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ.
ಗಾಯಗೊಂಡ ಕೈದಿ ಸಂತೋಷ್ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಕಲಬುರಗಿ ಜಿಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೈಲಿನಿಂದ ಪರಾರಿಯಾಗಿರುವ ಉಳಿದ ಇಬ್ಬರು ಕೈದಿಗಳಿಗಾಗಿ ಕಲಬುರಗಿ ನಗರ, ಜಿಲ್ಲಾ ಹಾಗೂ ಬೀದರ್ ಪೊಲೀಸರ ವಿಶೇಷ ತಂಡಗಳು ತೀವ್ರ ಶೋಧ ಕಾರ್ಯಾಚರಣೆ ಮುಂದುವರೆಸಿವೆ.
ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.



