ಹಲ್ಲೆ ಪ್ರಕರಣ ಮುಚ್ಚಿ ಹಾಕಲು ಸುಳ್ಳು ಸಾಕ್ಷಿಗಳ ಸೃಷ್ಟಿ: ಸಚಿವ ಖರ್ಗೆ ವಿರುದ್ಧ ಮಣಿಕಂಠ್ ರಾಠೋಡ್ ಕಿಡಿ

0
609

ಕಲಬುರ್ಗಿ, ಡಿ.7- ನನ್ನ ಮೇಲಿನ ಹಲ್ಲೆ ಪ್ರಕರಣವನ್ನು ಮುಚ್ಚಿ ಹಾಕಲು ಪೋಲಿಸರು ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ನನ್ನ ಮೇಲೆ ಇಲ್ಲದ ಆರೋಪವನ್ನು ಹೊರಿಸಿದ್ದಾರೆ ಎಂದು ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾ ಭವನದಲ್ಲಿ ಗುರುವಾರ ಬೆಳಿಗ್ಗೆ 11-30ಕ್ಕೆ ಸುದ್ದಿಗೋಷ್ಠಿ ಮಾಡುವುದಕ್ಕೂ ಬಿಡದೇ ನಿವಾಸದಲ್ಲಿ ಪೋಲಿಸರು ಬಂಧಿಸಿಕೊAಡು ಹೋಗುವ ಸಂದರ್ಭದಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ ಮಣಿಕಂಠ್ ರಾಠೋಡ್ ಅವರು, ಪೋಲಿಸರು ಮತ್ತು ಸಚಿವರು ರೂಪಿಸಿದ ಸಂಚನ್ನು ವಿವರಿಸಿದ್ದಾರೆ.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಕರ್ತವ್ಯದಲ್ಲಿದ್ದರೂ ಸಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹುಟ್ಟುಹಬ್ಬದ ಅಂಗವಾಗಿ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಹಾರಿಸುವುದು ಮತ್ತು ಬ್ಯಾಟಿಂಗ್ ಮಾಡುವುದರ ಕುರಿತು ನಾನು ವಿಡಿಯೋ ಹಾಕಿದ್ದರಿಂದ ವರಿಷ್ಠಾಧಿಕಾರಿಗಳು ಘಟನೆ ಆಗಿ 18 ದಿನಗಳ ನಂತರ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ನನ್ನ ಮೇಲಿನ ಹಲ್ಲೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆಯವರು ಯಾವುದೇ ಪ್ರಜ್ಞೆ ಇರಲಾರದೇ, ಆಧಾರವಿಲ್ಲದೇ ಬೆಳಗಾವಿಯ ಸುವರ್ಣ ಸೌಧದಲ್ಲಿ ನನ್ನ ಹಾಗೂ ನನ್ನ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಮೊಟ್ಟ ಮೊದಲನೇಯದಾಗಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ 33 ಪ್ರಕರಣಗಳನ್ನು ದಾಖಲಿಸಲಾಗಿದೆ. ಸಚಿವರು ತಮ್ಮ ಪುಡಾರಿಗಳನ್ನು ಬಿಟ್ಟು ಪ್ರಕರಣ ದಾಖಲಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿರುವ ಅವರು, ನನ್ನ ಮೇಲೆ ಅಕ್ಕಿ ಕಳ್ಳ ಎಂದು ಸಚಿವ ಖರ್ಗೆಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದಾಗ್ಯೂ, ನನ್ನ ಮೇಲೆ ಹಾಕಿರುವ ಸುಳ್ಳು ಇಸಿ ಆಕ್ಟ್ ಕಾಯ್ದೆ ಪ್ರಕರಣಗಳನ್ನು ಉಚ್ಛ ನ್ಯಾಯಾಲಯದಲ್ಲಿ ಸುಳ್ಳು ಎಂದು ಪರಿಗಣಿಸಿ ಬಿಡುಗಡೆ ಮಾಡಲಾಗಿದೆ. ಸಣ್ಣ ಮಕ್ಕಳ ಹಾಲಿನ ಪೌಡರ್ ಕುರಿತು ಪದೇ ಪದೇ ಸಚಿವರು ಮಾತನಾಡುತ್ತಾರೆ. ಆ ಪ್ರಕರಣಕ್ಕೂ ಯಾದಗಿರಿ ಜಿಲ್ಲಾ ಸತ್ರ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂಬರುವ ದಿನಗಳಲ್ಲಿ ನಾನು ಸುದ್ದಿಗೋಷ್ಠಿ ಮಾಡಬೇಕಾದರೆ ನನ್ನ ಹತ್ತಿರ ಇರುವ ಎಲ್ಲ ದಾಖಲೆಗಳ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇನೆ. ಸ್ಪಷ್ಟವಾಗಿ ಅಧ್ಯಯನ ಮಾಡಿ ಸುದ್ದಿಗೋಷ್ಠಿ ಮಾಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಸವಾಲು ಹಾಕಿದ ಮಣಿಕಂಠ್ ರಾಠೋಡ್ ಅವರು, ಪದೇ ಪದೇ ಮಣಿಕಂಠ್ ರಾಠೋಡ್‌ಗೆ ಟಿಕೆಟ್ ನೀಡಿದ್ದಾರೆ ಎಂದು ಆರೋಪಿಸುತ್ತಿರುವುದು ಭಯವೇ ಕಾರಣವಾಗಿದೆ. ನಿಮ್ಮ ಎದುರಾಳಿಯಾಗಿ ಸ್ಪರ್ಧಿಸಬಾರದು ಎಂಬ ಮಾತುಗಳು ಅವರಿಂದ ಬಂದಿದೆ. ಮತ್ತೊಮ್ಮೆ ಶಿಕ್ಷಕರಾಗಿ ಪಾಠ ಹೇಳುವ ರೀತಿಯನ್ನು ಬಿಟ್ಟು ಪಂಚ ರಾಜ್ಯಗಳ ಚುನಾವಣೆಯಲ್ಲಿ ನಿಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ. ಹಾಗಾಗಿ ನನ್ನ ಪಕ್ಷದ ನಾಯಕರ ಕುರಿತು ಮಾತನಾಡುವ ನೈತಿಕತೆ ಇಲ್ಲ ಎಂದು ಹರಿಹಾಯ್ದಿದ್ದಾರೆ.
ರಾಜ್ಯದ ಸಚಿವರಾಗಿ, ತಮ್ಮ ಕ್ಷೇತ್ರದ ಗುಂಡಗುರ್ತಿ ಗ್ರಾಮದ ಶಾಲಾ ವಿದ್ಯಾರ್ಥಿಗಳಿಗೆ ಸರಿಯಾಗಿ ಆಹಾರ ಸಿಗುತ್ತಿಲ್ಲ ಎಂದು ತಮ್ಮ ಪಕ್ಷದವರೇ ಟೀಕಿಸುತ್ತಿದ್ದಾರೆ. ಅದರಂತೆ ಎಂಎಸ್‌ಪಿಸಿ (ಸ್ಕೀಮ್) ಆಹಾರ ಧಾನ್ಯಗಳ ವಿತರಣೆಯಲ್ಲಿ ನಿಮ್ಮ ಕಾರ್ಯಕರ್ತರಿಗೆ ಲೂಟಿ ಮಾಡುವುದಕ್ಕೆ ಬಿಟ್ಟಿದ್ದೀರಿ. ಟೆಂಡರ್‌ದಲ್ಲಿಯೂ ಸಹ ಪರಸ್ಪರರು ಕಿತ್ತಾಡಿಕೊಂಡಿದ್ದಾರೆ. ಮೊದಲು ಕ್ಷೇತ್ರದ ಜನತೆಯ ಸೇವೆ ಸಲ್ಲಿಸುವತ್ತ ಗಮನಹರಿಸಿ ನಂತರ ಬೇರೆ ವಿಷಯಗಳ ಕುರಿತು ಟೀಕೆ ಮಾಡಿ ಎಂದು ಅವರು ಕಿಡಿಕಾರಿದ್ದಾರೆ.
ಸಚಿವ ಖರ್ಗೆಯವರು ಥರ್ಡ್ ಕ್ಲಾಸ್ ಎಂದು ಟೀಕಿಸಿ ನನಗೆ ಬಹುದೊಡ್ಡ ಬಹುಮಾನ ಕೊಟ್ಟಿದ್ದಾರೆ. ಅದು ನಿಮ್ಮ ತಂದೆಯವರ ಕೊಡುಗೆ. ನಿಮ್ಮ ತಂದೆ ಸತತವಾಗಿ ಏಳು ಬಾರಿ ಗುರುಮಿಠಕಲ್ ಕ್ಷೇತ್ರದಲ್ಲಿ ಶಾಸಕರಾಗಿದ್ದರು. ಆ ಕ್ಷೇತ್ರದವನೇ ನಾನಾಗಿದ್ದೇನೆ ಎಂದು ತಿರುಗೇಟು ನೀಡಿದ ಅವರು, ಸಚಿವ ಖರ್ಗೆಯವರು ಪದೇ ಪದೇ ಅವರ ಮನೆಯವರ ಭಾವಚಿತ್ರವನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ನಾನು ಪೋಸ್ಟ್ ಮಾಡಿದ್ದು ಜಿಲ್ಲಾಧಿಕಾರಿಗಳ ಭಾವಚಿತ್ರ. ಅವರ ಮನೆಯವರ ಭಾವಚಿತ್ರವನ್ನು ಹಾಕಿಲ್ಲ ಹಾಗೂ ಅವರಿಗೆ ಯಾವುದೇ ರೀತಿಯಲ್ಲಿ ಅವಮಾನ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪದೇ ಪದೇ ತಾಳ್ಮೆ ಪರೀಕ್ಷಿಸಬೇಡಿ ಎಂದು ಹೇಳುವ ಮೂಲಕ ಭಯಭೀತಿಗೆ ಒಳಗಾಗಿದ್ದೀರಿ. ಎದುರಾಳಿಗಳ ಮೇಲೆ ಪ್ರಕರಣಗಳನ್ನು ದಾಖಲಿಸಿದರೆ ಭಯಭೀತಿಗೊಳ್ಳುತ್ತಾರೆ ಎಂಬ ಪ್ರಯತ್ನ ಮಾಡುತ್ತಿದ್ದೀರಿ. ಇಂತಹ ಸುಳ್ಳು ಪ್ರಕರಣಗಳಿಗೆ ನಾನು ಹೆದರುವುದಿಲ್ಲ ಎಂದು ರಾಠೋಡ್ ಅವರು ಸಚಿವ ಖರ್ಗೆಯವರಿಗೆ ಎಚ್ಚರಿಸಿದ್ದಾರೆ.
ನನ್ನ ಮೇಲಿನ ಹಲ್ಲೆ ಪ್ರಕರಣವನ್ನು ಪೋಲಿಸರ ಮೂಲಕ ಒತ್ತಾಯಪೂರ್ವಕವಾಗಿ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದು, ನನಗೆ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ. ಪ್ರಕರಣ ಮುಚ್ಚಿ ಹಾಕಿದರೂ ಸಹ ಎದೆಗುಂದದೇ ಸತ್ಯಕ್ಕಾಗಿ ನ್ಯಾಯದ ಪರವಾಗಿ ನ್ಯಾಯಾಲಯದಲ್ಲಿ ನನ್ನ ಹೋರಾಟ ಮುಂದುವರೆಸುವೆ ಎಂದು ಮಣಿಕಂಠ್ ರಾಠೋಡ್ ಅವರು ಗುಡುಗಿದ್ದಾರೆ.

LEAVE A REPLY

Please enter your comment!
Please enter your name here