ಗ್ರಾಮ ಪಂಚಾಯಿತಿ ಸದಸ್ಯೆ ಅಪಹರಣ ಯತ್ನದ ಹಿಂದೆ ಶಾಸಕ ಅಲ್ಲಮಪ್ರಭು ಪಾಟೀಲ್ ಕೈವಾಡ : ಕ್ರಮಕ್ಕೆ ರೇವೂರ್ ಆಗ್ರಹ

0
726

ಕಲಬುರ್ಗಿ, ಆ.3- ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮತ್ತು ತಾಲ್ಲೂಕಿನ ಸಿಂದಗಿ(ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಆಗಸ್ಟ್ 4ರಂದು ಜರುಗಲಿದ್ದು, ಆ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯೆಯನ್ನು ಎಂಟ್ಹತ್ತು ಜನರು ಅಪಹರಿಸಲು ಯತ್ನಿಸಿದ ಪ್ರಕರಣದ ಹಿಂದೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಕೈವಾಡವಿದ್ದು, ಕೂಡಲೇ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಮಾಜಿ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಒತ್ತಾಯಿಸಿದರು.

ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬುಧವಾರ ಮಧ್ಯಾಹ್ನ 2-30ಕ್ಕೆ ಸಿಂದಗಿ(ಬಿ) ಗ್ರಾಮದ ಜಮೀನಿನಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಮತಿ ನಾಗಮ್ಮ ಗಂಡ ತುಕ್ಕಣ್ಣ ಕೋಂಡೆದ್ ಅವರು ಪುತ್ರನೊಂದಿಗೆ ಕೆಲಸ ಮಾಡುತ್ತಿದ್ದಾಗ ಎಂಟ್ಹತ್ತು ಜನರು ಬಂದು ತಾವು ಪೋಲಿಸರು ಎಂದು ಸುಳ್ಳು ಹೇಳಿ ಅವರಿಗೆ ಹೆದರಿಸಿ ಪೋಲಿಸ್ ಠಾಣೆಗೆ ಬನ್ನಿ ಎಂದು ಬಲವಂತದಿAದ ಅವರನ್ನು ಅಪಹರಿಸಲು ಯತ್ನಿಸಿದರು. ಆಗ ಒಬ್ಬಾತ ಚಾಕು ಹಚ್ಚಿ ಮಹಿಳೆಯನ್ನು ಬಲವಂತವಾಗಿ ಕರೆದೊಯ್ಯುವಾಗ ಅದನ್ನು ತಡೆದ ಪುತ್ರ ಮಲ್ಲಿಕಾರ್ಜುನ್‌ನಿಗೂ ಸಹ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ನಂತರ ಕೊಂಡೇದ್ ಕುಟುಂಬಸ್ಥರು ಅಲ್ಲಿಗೆ ಬಂದಾಗ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿಸಿದರು.
ಸಿಂದಗಿ (ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಆಗಸ್ಟ್ 4ರಂದು ಜರುಗಲಿದೆ. ಗ್ರಾಮ ಪಂಚಾಯಿತಿಯ ಒಟ್ಟು 20 ಸದಸ್ಯ ಬಲದಲ್ಲಿ ಕಾಂಗ್ರೆಸ್ಸಿಗರು ಮತ್ತು ಬಿಜೆಪಿಯವರು ತಲಾ ಹತ್ತು ಜನ ಸದಸ್ಯರಿದ್ದು, ಹೀಗಾಗಿ ಬಿಜೆಪಿ ಬೆಂಬಲಿತ ಸದಸ್ಯೆಯನ್ನು ಅಪಹರಿಸಲು ಕಾಂಗ್ರೆಸ್ಸಿಗರೇ ಯತ್ನಿಸಿದ್ದಾರೆ. ಇದರಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಕೈವಾಡವಿದ್ದು, ಈ ಕುರಿತು ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಮತಿ ನಾಗಮ್ಮ ಗಂಡ ತುಕ್ಕಣ್ಣ ಕೋಂಡೆದ್ ಅವರು ಸಬ್ ಅರ್ಬನ್ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಆಯ್ಕೆಯಾದ ನಂತರ ದಕ್ಷಿಣ ಕ್ಷೇತ್ರದಲ್ಲಿ ಕೊಲೆ, ಸುಲಿಗೆ, ಅಪಹರಣ ಸೇರಿದಂತೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಅಕ್ರಮ ಮರಳು ಸಾಗಣೆಯೂ ಸಹ ಮಿತಿಮೀರಿದೆ ಎಂದು ದೂರಿದ ಅವರು, ಕೂಡಲೇ ನಗರ ಪೋಲಿಸ್ ಆಯುಕ್ತ ಚೇತನ್ ಆರ್., ಅವರು ಈ ಕುರಿತು ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪಶ್ಚಿಮ್ ಬಂಗಾಳ್‌ದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿದ್ದ ಭೀತಿಯು ಈಗ ದಕ್ಷಿಣ ಕ್ಷೇತ್ರದಲ್ಲಿಯೂ ಸಹ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಉಂಟಾಗಿದೆ. ಕಾಂಗ್ರೆಸ್ಸಿಗರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಇಂತಹ ಅಪಹರಣ ಯತ್ನದಂತಹ ಕುಕೃತ್ಯಕ್ಕೆ ಕೈ ಹಾಕಿದ್ದಾರೆ. ಈ ಕುರಿತು ನಗರ ಪೋಲಿಸ್ ಆಯುಕ್ತರಿಗೂ ಸಹ ಸೂಕ್ತ ತನಿಖೆಗೆ ಕೋರಿ ಮನವಿ ಸಲ್ಲಿಸುವೆ. ಬಿಜೆಪಿ ಮಹಿಳಾ ಮೋರ್ಚಾ ಸಹ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಹಾಪೌರ ವಿಶಾಲ್ ದರ್ಗಿ ಮತ್ತು ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here