ಅಪ್ಪುಗೌಡ ಸೋಲಿಸಿ ಅಲ್ಲಮಪ್ರಭು ಪಾಟೀಲ್ ಪರಾಕ್ರಮ: ಕಲಬುರ್ಗಿ ದಕ್ಷಿಣ ಕ್ಷೇತ್ರದಲ್ಲಿ ರೇವೂರ್ ಕುಟುಂಬದ ಪಾರುಪತ್ಯ ಅಂತ್ಯ..!!

0
1026

ಕಲಬುರ್ಗಿ, ಮೇ.13- ಕಳೆದ ಎರಡು ದಶಕಗಳಿಂದಲೂ ದಕ್ಷಿಣ ಕ್ಷೇತ್ರದಲ್ಲಿ ರೇವೂರ್ ಕುಟುಂಬವು ಹೊಂದಿದ್ದ ಪಾರುಪತ್ಯವನ್ನು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಅಂತ್ಯಗೊಳಿಸಿದೆ. ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸಬೇಕಿದ್ದ ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಅವರು 21048 ಬೃಹತ್ ಮತಗಳ ಅಂತರದಿAದ ಪರಾಭವಗೊಳಿಸಿದ್ದಾರೆ. ಇದರಿಂದಾಗಿ ಅಲ್ಲಮಪ್ರಭು ಪಾಟೀಲ್ ಅವರು ಅಪ್ಪಗೌಡರಿಂದ ಕಳೆದ ಬಾರಿಯ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 14 ಜನ ಅಭ್ಯರ್ಥಿಗಳಿದ್ದು, ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಅವರು 87345 ಹಾಗೂ ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು 66297 ಮತಗಳನ್ನು ಪಡೆದರು. ಇನ್ನುಳಿದಂತೆ ಜಾತ್ಯಾತೀತ ಜನತಾದಳದ ಕೃಷ್ಣಾರೆಡ್ಡಿ ಅವರು 1409 ಹಾಗೂ ಆಮ್ ಆದ್ಮಿ ಪಕ್ಷದ ಸಿದ್ದು ಪಾಟೀಲ್ ತೆಗನೂರ್ ಅವರು ಕೇವಲ 245 ಮತಗಳನ್ನು ಪಡೆದರು. ಬಹುಜನ ಸಮಾಜ ಪಕ್ಷದ 464, ಇಂಡಿಯನ್ ಮೂವಮೆಂಟ್ ಪಾರ್ಟಿಯ ಮೊಹ್ಮದ್ ಅಸ್ಲಮ್ ಮನಿಯಾರ್ ಅವರು 74, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯನಿಸ್ಟ್) ಪಕ್ಷದ ಮಹೇಶ್ ಎಸ್.ಬಿ., ಅವರು 98, ಕರ್ನಾಟಕ ರಕ್ಷಣಾ ಸಮಿತಿಯ ವಿಜಯ್ ಜಾಧವ್ ಅವರು 58, ಪಕ್ಷೇತರರಾದ ನಾಗಯ್ಯ ಗುತ್ತೇದಾರ್ ಜಿ. ಟೈಲರ್ ಅವರು 90, ಎಂ.ಡಿ. ಮಕಬೂಲ್‌ಖಾನ್ ಅವರು 73, ಮೊಹ್ಮದ್ ಹುಸೇನ್ (ಮೊಹ್ಮದ್) ಅವರು 65, ಶರಣಬಸಪ್ಪ ಪಪ್ಪಾ ಅವರು 1058, ಶಶಿಧರ್ ಬಿ.ಕೆ. ನಾಗನಹಳ್ಳಿ ಅವರು 497, ಸುಧಾಕರ್ ಅವರು 518 ಮತಗಳನ್ನು ಪಡೆದು ಪರಾಭವಗೊಂಡರು.
ಕಳೆದ ಎರಡು ಬಾರಿಯ ಚುನಾವಣೆಗಳಲ್ಲಿ ಬಿಜೆಪಿಯಿಂದ ಗೆದ್ದು ಬೀಗಿದ್ದ ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರ ವಿರುದ್ಧ ಒಂದು ಹಂತದಲ್ಲಿ ಅಲೆ ಎದ್ದಿತ್ತು. ಅದನ್ನು ನಿವಾರಿಸಿಕೊಂಡು ಹೋಗಲು ಸಾಕಷ್ಟು ಯತ್ನಿಸಿದರೂ ಸಹ ರೇವೂರ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾತ್ ಕೊಡಲಿಲ್ಲ. ಕೊನೆಯ ಹಂತದವರೆಗೂ ರೇವೂರ್ ಅವರ ಪರ ಪ್ರಚಾರಕ್ಕೆ ಬಾರದೇ ಯಡಿಯೂರಪ್ಪ ಅವರು ಅಂತರ ಕಾಯ್ದುಕೊಂಡರು.
ಇನ್ನು ರೇವೂರ್ ಅವರ ಪರವಾಗಿ ಕೇಂದ್ರ ಸಚಿವೆ ಶ್ರೀಮತಿ ಸ್ಮೃತಿ ಇರಾನಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನಟಿ ಶೃತಿ ಮುಂತಾದವರು ಪ್ರಚಾರ ಮಾಡಿದ್ದು ವ್ಯರ್ಥವಾಯಿತು. ಈ ಮಧ್ಯೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಕೊನೆಯ ಹಂತದಲ್ಲಿ ಅಲ್ಲಮಪ್ರಭು ಪಾಟೀಲ್ ಅವರ ಪರವಾಗಿ ಬಿರುಸಿನ ಪ್ರಚಾರ ಮಾಡಿದರು. ಈ ಚುನಾವಣೆಯಲ್ಲಿ ಅಲ್ಲಮಪ್ರಭು ಪಾಟೀಲ್ ಅವರನ್ನು ಸೋಲಿಸಿದರೆ ನಾನು ಎರಡನೇ ಬಾರಿ ಸೋತಂತೆ ಎಂಬ ಭಾವುಕತನದಿಂದ ಹೇಳಿಕೆ ನೀಡಿದ್ದು ಮತದಾರರ ಮೇಲೆ ಪರಿಣಾಮ ಬೀರಿತು.
ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ ಕುರಿತು ತೀವ್ರ ಗೊಂದಲವಿತ್ತು. ಒಂದು ಹಂತದಲ್ಲಿ ಅರ್ಜಿ ಹಾಕಿದ ಏಳು ಜನ ಅಭ್ಯರ್ಥಿಗಳು ಕಳೆದ ಬಾರಿ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅಲ್ಲಮಪ್ರಭು ಪಾಟೀಲ್ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು ಎಂದು ಕೋರಿದ್ದರು. ಆದಾಗ್ಯೂ, ಅಲ್ಲಮಪ್ರಭು ಪಾಟೀಲ್ ಅವರಿಗೆ ಟಿಕೆಟ್ ದೊರಕಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರ ಕೃಪಾಕಟಾಕ್ಷ ಎಂಬ ಕಾರಣದಿಂದ ಟಿಕೆಟ್ ಆಕಾಂಕ್ಷಿಗಳೆಲ್ಲರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅಲ್ಲಮಪ್ರಭು ಪಾಟೀಲ್ ಅವರ ಪರ ಒಗ್ಗಟ್ಟಿನ ಪ್ರಚಾರವನ್ನು ಆರಂಭಿಸಿದರು. ಅಲ್ಲದೇ ಅಲ್ಲಮಪ್ರಭು ಪಾಟೀಲ್ ಅವರು ಪರಾಭವಗೊಂಡರೂ ಸಹ ದಕ್ಷಿಣ ಕ್ಷೇತ್ರದ ಮತದಾರರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರಿAದ ಅವರ ಗೆಲುವಿಗೆ ಪೂರಕವಾಯಿತು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.
ಇನ್ನು ಬಿಜೆಪಿ ಟಿಕೆಟ್ ಪಡೆಯಲು ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಸಾಕಷ್ಟು ಹರಸಾಹಸ ಪಟ್ಟರು. ಒಂದು ಹಂತದಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಅಭಿಪ್ರಾಯವೂ ಕಾರ್ಯಕರ್ತರಲ್ಲಿ ವ್ಯಕ್ತವಾಗಿತ್ತು. ಆದಾಗ್ಯೂ, ಟಿಕೆಟ್ ಸಿಕ್ಕರೂ ಸಹ ರೇವೂರ್ ಅವರು ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳಲು ವಿಫಲವಾದರು. ತಮ್ಮ ಬೆಂಬಲಿಗ ಪಡೆಯೊಂದಿಗೆ ಮೊದಲಿನಂತೆ ಚುನಾವಣೆ ಎದುರಿಸಿದರೂ ಸಹ ಈ ಬಾರಿ ಅವರಿಗೆ ಮತದಾರರು ಕೈ ಹಿಡಿಯಲಿಲ್ಲ. ಹೀಗಾಗಿ ಹ್ಯಾಟ್ರಿಕ್ ವಿಜಯ ಪತಾಕೆ ಹಾರಿಸುವುದರಿಂದ ತಪ್ಪಿಸಿಕೊಳ್ಳಬೇಕಾಯಿತು.
ಈ ಹಿಂದೆ ದಿ. ಚಂದ್ರಶೇಖರ್ ಪಾಟೀಲ್ ರೇವೂರ್ ಅವರು ಎರಡು ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ನಂತರ ಅವರ ಆಕಸ್ಮಿಕ ನಿಧನದಿಂದಾಗಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಾಗ ಬಿಜೆಪಿ ಶಶೀಲ್ ಜಿ. ನಮೋಶಿ ಅವರಿಗೆ ಟಿಕೆಟ್ ಕೊಟ್ಟಿದ್ದರಿಂದ ಅಸಮಾಧಾನಗೊಂಡ ರೇವೂರ್ ಕುಟುಂಬದವರು ಜೆಡಿಎಸ್ ಸೇರಿ ಶ್ರೀಮತಿ ಅರುಣಾದೇವಿ ಪಾಟೀಲ್ ಅವರಿಗೆ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ನಂತರದ ಎರಡು ಚುನಾವಣೆಗಳಲ್ಲಿ ಬಿಜೆಪಿಯಿಂದ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರೇ ಗೆದ್ದಿದ್ದರು. ಮೂರನೇ ಬಾರಿಗೆ ಅವರು ಪರಾಭವಗೊಂಡಿದ್ದು, ರೇವೂರ್ ಕುಟುಂಬದ ಪಾರುಪತ್ಯ ದಕ್ಷಿಣ ಕ್ಷೇತ್ರದಲ್ಲಿ ತಪ್ಪಿದಂತಾಗಿದೆ.
ದಕ್ಷಿಣ ಕ್ಷೇತ್ರದಲ್ಲಿ ರೇವೂರ್ ಕುಟುಂಬವನ್ನು ಸೋಲಿಸಲು ಮಾಜಿ ಶಾಸಕ ಕೈಲಾಶನಾಥ್ ಪಾಟೀಲ್ ಮತ್ತು ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರು ಸ್ಪರ್ಧಿಸಿದರೂ ಸಹ ಅವರೇ ಸೋಲು ಅನುಭವಿಸುವಂತಾಯಿತು. ಸೋತರೂ ಸಹ ಛಲ ಬಿಡದೇ ದಕ್ಷಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದಲ್ಲದೇ ಜನರೊಂದಿಗೆ ಬೆರೆತು ಕೆಲಸ ಮಾಡಿದ್ದು ಅಲ್ಲಮಪ್ರಭು ಪಾಟೀಲ್ ಅವರ ಭರ್ಜರಿ ಗೆಲುವಿಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here