ಬಿಜೆಪಿಯಿಂದ ಕಲ್ಯಾಣ ಕರ್ನಾಟಕ ಭಾಗದ ಮೇಲೆ ದ್ವೇಷದ ರಾಜಕೀಯ:ರಣದೀಪಸಿಂಗ್ ಸುರ್ಜೇವಾಲ್

0
570

(ಮನೀಷ ಪತ್ರಿಕೆ ವಾರ್ತೆ)
ಕಲಬುರ್ಗಿ, ಡಿ.1- ಕಲ್ಯಾಣ ಕರ್ನಾಟಕದ ಜನರ ಮೇಲೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರವು ಹಗೆತನ ಸಾಧಿಸುತ್ತಿದೆ. ಇದನ್ನು ತಡೆಯಲು ನಗರದಲ್ಲಿ ಡಿಸೆಂಬರ್ 10ರಂದು ಜರುಗಲಿರುವ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆಯವರ ಬೃಹತ್ ಅಭಿನಂದನಾ ಸಮಾವೇಶದಲ್ಲಿ ಜನಾಂದೋಲನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ್ ಅವರು ಹೇಳಿದರು.
ಬುಧವಾರ ನಗರದ ಐವಾನ್ ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವೇಷ, ಬೇಧ ಭಾವದ ಮೂಲಕ ಈ ಭಾಗದ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಈ ಮಹತ್ವದ ಪ್ರದೇಶಕ್ಕೆ ಸಂವಿಧಾನಬದ್ಧವಾಗಿ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂಬ ವಿರೋಧವನ್ನು ಬಿಜೆಪಿ ವ್ಯಕ್ತಪಡಿಸಿತ್ತು ಎಂದರು.
ಬಿಜೆಪಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವುದರ ವಿರುದ್ಧ ನಿಂತಿತ್ತು. ಆಗಿನ ಬಿಜೆಪಿ ಅಧ್ಯಕ್ಷರೂ ಹಾಗೂ ಉಪ ಪ್ರಧಾನಿ ಆಗಿದ್ದ ಲಾಲ್‌ಕೃಷ್ಣ ಅಡ್ವಾಣಿ ಅವರು ಕಲಬುರ್ಗಿಯಿಂದ ವಿಜಯನಗರದವರೆಗೂ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ವಿರೋಧಿಸಿ, ವರದಿಯನ್ನು ತಿರಸ್ಕರಿಸಿದ್ದರು, ಆದಾಗ್ಯೂ, ಕಾಂಗ್ರೆಸ್ ಪಕ್ಷ ಈ ಭಾಗದ ಜನರಿಗೆ ವಿಶೇಷ ಸ್ಥಾನಮಾನ ನೀಡಲು ಸಂಕಲ್ಪ ಮಾಡಿ 2013ರಲ್ಲಿ ಅದನ್ನು ಮಾಡಿ ತೋರಿಸಿದೆವು. ನಾವು ದೇಶದ ಎಲ್ಲ ಪಕ್ಷಗಳನ್ನು ಒಗ್ಗೂಡಿಸಿ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲ ಪಕ್ಷಗಳ ಒಪ್ಪಿಗೆ ಪಡೆದು 371(ಜೆ) ವಿಶೇಷ ಸ್ಥಾನಮಾನ ನೀಡುವಲ್ಲಿ ಯಶಸ್ವಿಯಾದೆವು ಎಂದು ಅವರು ಹೇಳಿದರು.
ಈ ದೇಶದ ಎರಡು ಕಡೆ ಅತೀ ಹೆಚ್ಚು ಒಣ ಪ್ರದೇಶಗಳಿವೆ. ಒಂದು ರಾಜಸ್ತಾನ್ ಮತ್ತು ಇನ್ನೊಂದು ಕಲ್ಯಾಣ ಕರ್ನಾಟಕ. ಇಲ್ಲಿನ ಜನರು ಶ್ರಮಜೀವಿಗಳು, ಧೈರ್ಯ ಶಾಲಿಗಳಾದರೂ ಪ್ರಾಕೃತಿಕ ಅನಾನುಕೂಲ ಹಾಗೂ ನೀರಿನ ಕೊರತೆ ಹೆಚ್ಚಾಗಿದೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರು ಒಟ್ಟಾಗಿ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ಆರಂಭಿಸಿದರು. ಸ್ವಾತಂತ್ರö್ಯ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದ ದೊಡ್ಡ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ.
ಈ ಭಾಗದಲ್ಲಿ ತುಂಗಭದ್ರಾ ಆಣೆಕಟ್ಟು, ರಾಯಚೂರಿನಲ್ಲಿ ರಾಜೀವಗಾಂಧಿ ಥರ್ಮಲ್ ಕೇಂದ್ರ, ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ, ಇಎಸ್‌ಐ ಆಸ್ಪತ್ರೆ ನಿರ್ಮಾಣ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ, ವಿಶೇಷ ಸ್ಥಾನಮಾನ ನೀಡುವುದರವರೆಗೂ ಎಲ್ಲವನ್ನೂ ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಅವರು ತಿಳಿಸಿದರು.
ಈ ವಿಶೇಷ ಸ್ಥಾನಮಾನ ಪರಿಣಾಮ ಈ ಭಾಗದ ಸುಮಾರು 40,000 ಮಕ್ಕಳಿಗೆ ವೈದ್ಯಕೀಯ ಸೀಟುಗಳು ಲಭಿಸಿವೆ. ಕಾಂಗ್ರೆಸ್ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ 30 ಸಾವಿರ ಯುವಕರಿಗೆ ಸರ್ಕಾರಿ ನೌಕರಿ ನೀಡಲಾಗಿದೆ. ಈಗ ಎಲ್ಲ ಕಾರ್ಯಗಳನ್ನು ಬಿಜೆಪಿ ಪ್ರಶ್ನೆ ಮಾಡುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ಈ ಭಾಗದ ಅಭಿವೃದ್ಧಿಗೆ ಹೊಸ ಯಜ್ಞ ಆರಂಭವಾಗಬೇಕಾಗಿದೆ. ಇದರಿಂದ ಈ ಭಾಗದ ಜನರಿಗೆ ಉದ್ಯೋಗ, ಶಿಕ್ಷಣ ಸಿಗುವಂತೆ ಆಗಬೇಕು. ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿಐ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ. ಪಾಟೀಲ್, ಪಕ್ಷದ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತು ಎಲ್ಲ ನಾಯಕರ ನೇತೃತ್ವದಲ್ಲಿ ಡಿಸೆಂಬರ್ 10ರಂದು ಹೊಸ ಸಂಕಲ್ಪದಿAದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಯಜ್ಞ ಆರಂಭಿಸಬೇಕಾಗಿದೆ ಎಂದು ಅವರು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿದ 40 ಸಾವಿರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಆರೋಗ್ಯ, ಶಿಕ್ಷಣ, ಉದ್ಯೋಗ, ವಿದ್ಯುತ್, ನೀರಿನ ವಿಚಾರದಲ್ಲಿ ಹಲವು ಭಾಗಗಳಲ್ಲಿ ಸಮಸ್ಯೆಗಳು ಇವೆ. ಈ ಭಾಗದಲ್ಲಿ ಬಡವರು, ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಒಂದನೇ ತರಗತಿಯಿಂದ 8ನೇ ತರಗತಿಯವರೆಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ದಶಕಗಳಿಂದ ಕಾಂಗ್ರೆಸ್ ಸರ್ಕಾರ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಮೋದಿ ಸರ್ಕಾರವು ನಿಲ್ಲಿಸಿದೆ. ಆ ಮೂಲಕ ಬಡವರಿಂದ ಶಿಕ್ಷಣದ ಹಕ್ಕು ಕಸಿಯಲಾಗಿದೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬಿಜೆಪಿ ಸರ್ಕಾರ ನಿರ್ಲಕ್ಷö್ಯ ವಹಿಸಿದೆ. ಕಾಗದದ ಮೇಲೆ ಮೀಸಲಾತಿ ಹೆಚ್ಚಳ ಮಾಡಿದರೆ ಸಾಲದು, ಅದನ್ನು ಸಂವಿಧಾನದಲ್ಲಿ ಸೇರಿಸಬೇಕು. ಈ ಭಾಗದ ರಕ್ಷಣೆಗಾಗಿ ನಾವು ಸಂವಿಧಾನದಲ್ಲಿ ಬದಲಾವಣೆ ತಂದಿದ್ದೇವೆ. ನಾವು ಕೂಡ ವಿಶೇಷ ಸ್ಥಾನಮಾನ ಅಸಾಧ್ಯ ಎಂದು ಭಾವಿಸಿದ್ದರೆ ಇದು ಸಾಧ್ಯವಾಗುತ್ತಿತ್ತೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಈಗ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರ ಕೇವಲ ಆಸೆ ತೋರಿಸುವ ರೀತಿಯಲ್ಲಿ ಲಾಲಿಲಾಪ್ ಮಾಡಿಕೊಂಡಿದೆ. ಈ ವಿಚಾರವಾಗಿ ಬೊಮ್ಮಾಯಿ ಸರ್ಕಾರದ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕಸದ ಬುಟ್ಟಿಗೆ ಎಸೆದಿದೆ. ಹೀಗಾಗಿ ಪರಿಶಿಷ್ಟರ ಮೀಸಲಾತಿ ಹೆಚ್ಚಳ ಬಿಜೆಪಿಯಿಂದ ಅಸಾಧ್ಯ. ಇದು ಕೇವಲ ಕಾಂಗ್ರೆಸ್ಸಿನಿAದ ಮಾತ್ರ ಸಾಧ್ಯ. ಅದನ್ನು ನಾವು ಮಾಡಲು ಕಟಿಬದ್ಧ ಎಂದು ಅವರು ಹೇಳಿದರು.
ಬಡವರು, ರೈತರು, ಯುವಕರು, ಮಹಿಳೆಯರ ಮೇಲೆ ಆಗುತ್ತಿರುವ ಪ್ರಹಾರದ ವಿರುದ್ಧ ನಾವು ಜನಾಂದೋಲನ ರೂಪಿಸುತ್ತೇವೆ. ಆ ಹಿನ್ನೆಲೆಯಲ್ಲಿ ಇದೇ ಡಿಸೆಂಬರ್ 10ರಂದು ನಗರದಲ್ಲಿ ಖರ್ಗೆಯವರ ಅಭಿನಂದನಾ ಕಾರ್ಯಕ್ರಮದ ನಿಮಿತ್ಯ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಸಮಾವೇಶಕ್ಕೆ ಜನರನ್ನು ಕರೆತರಲು ಪಕ್ಷದ ಅಧ್ಯಕ್ಷರು ಸೂಚನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಜನರ ಬದುಕಿನ ಜತೆ ಚೆಲ್ಲಾಟ ಆಡುವುದು ಬಿಜೆಪಿ ಕೆಲಸ. ಆದಾಗ್ಯೂ, ಕಾಂಗ್ರೆಸ್ಸಿನದು ಜನರ ಬದುಕು ಕಟ್ಟುವ ಕೆಲಸವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಜನರ ಜೊತೆ ಬಿಜೆಪಿ ಸರ್ಕಾರ ಆಡುತ್ತಿರುವ ಚೆಲ್ಲಾಟವನ್ನು ನಿಲ್ಲಿಸಬೇಕಾಗಿದೆ. ಬಿಜೆಪಿ ಸಮಾಜ ಒಡೆದರೆ ನಾವು ಸಮಾಜವನ್ನು ಒಂದುಗೂಡಿಸುತ್ತೇವೆ ಎಂದು ಅವರು ಹೇಳಿದರು.
ರಾವಣ ಟೀಕೆಗೆ ಸಮರ್ಥನೆ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣನಿಗೆ ಹೋಲಿಸಿದ್ದನ್ನು ಸಮರ್ಥಿಸುವುದಾಗಿ ರಣದೀಪ್‌ಸಿಂಗ್ ಸುರ್ಜೇವಾಲ್ ಅವರು ತಿಳಿಸಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಬೆಲೆ ಏರಿಕೆಗಳಿಂದ ದೇಶದ ಜನಸಾಮಾನ್ಯರು ತತ್ತರಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗಳು ಕಡಿಮೆಯಾದರೂ ಸಹ ದೇಶದಲ್ಲಿ ಮಾತ್ರ ತೈಲ ಬೆಲೆಗಳು ಗಗನಕ್ಕೇರಿವೆ. ಅಡಿಗೆ ಅನಿಲ ಬೆಲೆಯೂ ಸಹ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿದೆ. ನಿರುದ್ಯೋಗ ಹೆಚ್ಚಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಸಹ ಕೇಂದ್ರ ಸರ್ಕಾರವು ವಿಫಲವಾಗಿದೆ. ಕೇವಲ ಬಾಯಿ ಮಾತಿನಲ್ಲಿಯೇ ಸಾಧನೆಗಳನ್ನು ಹೇಳುತ್ತಾರೆಯೇ ಹೊರತು, ಕಾರ್ಯರೂಪಕ್ಕೆ ಇಲ್ಲ. ಹಾಗಾಗಿ ಖರ್ಗೆಯವರು ಪ್ರಧಾನಿಯವರಿಗೆ ರಾವಣನಿಗೆ ಹೋಲಿಕೆ ಮಾಡಿದ್ದರಲ್ಲಿ ತಪ್ಪೇನಿಲ್ಲ ಎಂದು ಅವರು ಸಮರ್ಥಿಸಿದರು.
ಪ್ರತಿಯೊಬ್ಬರೂ ಮುಖ್ಯಮಂತ್ರಿಗಳೇ: ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಈಗಲೇ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಇದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರ್ಜೇವಾಲ್ ಅವರು, ರಾಜ್ಯದಲ್ಲಿನ ಭ್ರಷ್ಟ 40 ಪರ್ಸೆಂಟೇಜ್ ಸರ್ಕಾರವನ್ನು ಕಿತ್ತೊಗೆದು ಅಧಿಕಾರಕ್ಕೆ ಬರಲು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರೂ ಸಹ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಕನ್ನಡ ಕಲಿಯುವೆ: ಮತ್ತೊಬ್ಬರು ಕನ್ನಡದಲ್ಲಿ ಮಾತನಾಡುವುದನ್ನು ನಾನು ತಿಳಿದುಕೊಳ್ಳುತ್ತೇನೆ. ಅದೇ ರೀತಿ ನಾನು ಕನ್ನಡದಲ್ಲಿ ಮಾತನಾಡಲೂ ಸಹ ಆರಂಭಿಸಿರುವೆ. ಇನ್ನು ಮುಂದೆ ಕನ್ನಡದಲ್ಲಿ ಓದು ಹಾಗೂ ಬರೆಯುವುದನ್ನು ನಾನು ಕಲಿಯಲು ಪ್ರಯತ್ನಿಸುವೆ ಎಂದು ಸುರ್ಜೇವಾಲ್ ಅವರು ಕನ್ನಡದ ಮೇಲಿನ ಪ್ರೇಮವನ್ನು ಹೊರಹಾಕಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿಐ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ. ಪಾಟೀಲ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಜೇವರ್ಗಿ ಶಾಸಕ ಮತ್ತು ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್, ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಅಫಜಲಪುರ ಶಾಸಕ ಎಂ.ವೈ. ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here