ಕಲಬುರಗಿ, ಸೆ. 29:ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಸಿಐಡಿ ಪೋಲಿಸರು ವಶಕ್ಕೆ ಪಡೆದಿದ್ದಾರೆ. ರಾವುತಪ್ಪ ವಾಲೀಕಾರ್ ಎಂಬಾತನೇ ಬಂಧಿತ ಆರೋಪಿ. ಪಿಎಸ್‌ಐ ಪರೀಕ್ಷೆ ಅಕ್ರಮದ ರೂವಾರಿ ಆರ್.ಡಿ. ಪಾಟೀಲ್ ಸಹಚರನಾಗಿದ್ದು, ಈತ ಹಲವು ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ತಾಲ್ಲೂಕಿನ ಸೊನ್ನ ಗ್ರಾಮದ ನಿವಾಸಿಯಾಗಿರುವ ರಾವುತಪ್ಪ ವಾಲೀಕಾರನು ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಸತಿ ನಿಲಯದ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸುತ್ತಿದ್ದ. ಪಿಎಸ್‌ಐ ಅಕ್ರಮ ಪ್ರಕರಣ ಹೊರಬೀಳುತ್ತಿದ್ದಂತೆಯೇ ನಾಪತ್ತೆಯಾಗಿದ್ದ. ಈತನಿಗೆ ಪತ್ತೆ ಮಾಡಿ ಸಿಐಡಿ ಅಧಿಕಾರಿಗಳು ಈಗ ಬಂಧಿಸಿದ್ದಾರೆ.
ಆರ್.ಡಿ. ಪಾಟೀಲ್ ಹಾಗೂ ರಾವುತಪ್ಪ ಅವರಿಬ್ಬರೂ ಒಂದೇ ಊರಿನವರಾಗಿದ್ದು, ಪಾಟೀಲ್ ಜೊತೆ ಸೇರಿ ಅನೇಕ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಅಭ್ಯರ್ಥಿಗಳನ್ನು ಹುಡುಕಿ ತರುವುದು, ಅಭ್ಯರ್ಥಿಗಳಿಗೆ ಬ್ಲೂಟೂತ್‌ನಲ್ಲಿ ಉತ್ತರ ಹೇಳುವ ತಂಡ ತಯಾರಿಸುವುದು, ಕೆಲ ಸಂದರ್ಭಗಳಲ್ಲಿ ತಾನೇ ಉತ್ತರ ಹೇಳುವ ಕೆಲಸ ಕೂಡ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಕಲಬುರ್ಗಿ ನಗರದ ಜ್ಞಾನಜ್ಯೋತಿ ಇಂಗ್ಲೀಷ್ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ರಾವುತಪ್ಪ ಬ್ಲೂಟೂತ್ ಬಳಸಿ ಉತ್ತರ ಹೇಳುವ ಮೂಲಕ ಅಭ್ಯರ್ಥಿಗಳು ಪಾಸ್ ಆಗಲು ಸಹಕರಿಸಿದ್ದ. ಲೋಕೋಪಯೋಗಿ ಇಲಾಖೆಯ ಎಇಜೆಇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ಅಭ್ಯರ್ಥಿಗಳಿಗೆ ಅಕ್ರಮವಾಗಿ ಉತ್ತರಗಳನ್ನು ಹೇಳಿಸಿದ್ದನಂಗತೆ. ಇದೀಗ ಸಿಐಡಿ ಅಧಿಕಾರಿಗಳು ರಾವುತಪ್ಪನಿಗೆ ಬಂಧಿಸಿದ್ದು, ಇದರೊಂದಿಗೆ ಕಲಬುರ್ಗಿ ಜಿಲ್ಲೆಯಲ್ಲಿ ಬಂಧಿತರ ಸಂಖ್ಯೆಯು ಈಗ 53ಕ್ಕೆ ಹೆಚ್ಚಿದಂತಾಗಿದೆ.