ಅಸ್ತಂಗತರಾದ ಉದಯವಾಣಿಯ ಹಿರಿಯ ಚೇತನ ಮೋಹನದಾಸ್ ಪೈ

0
499

ಮಣಿಪಾಲ್, ಜುಲೈ, 31: ಮಣಿಪಾಲದ ಪೈ ಕುಟುಂಬದ ಹಿರಿಯರಾದ, ‘ಉದಯವಾಣಿ’ ಸಂಸ್ಥಾಪಕ ತೋನ್ಸೆ ಮೋಹನದಾಸ್ ಪೈ (89) ಇಂದು ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಮೂರು ಜನ ತಮ್ಮಿಂದರು, ನಾಲ್ಕು ಜನ ತಂಗಿಯರು ಮತ್ತು ಇಬ್ಬರು ಸಹೋದರರು ಸೇರಿದಂತೆ ಸಮಸ್ತ ಪೈ ಕುಟುಂಬದ ಸದಸ್ಯರನ್ನು ಬಿಟ್ಟು ಅಗಲಿದ್ದಾರೆ.
ಅವರು ಆಸ್ಪತ್ರೆಯಲ್ಲಿ ಇತ್ತೀಚಿಗೆ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಅವರ ಆರೈಕೆಯಲ್ಲಿ ಇಡೀ ಪೈ ಕುಟುಂಬದ ಎಲ್ಲ ಸದಸ್ಯರು, ತೊಡಗಿದ್ದರು.
ಪೈ ಅವರು ಕೇವಲ ಉದಯವಾಣಿ ಅಷ್ಟೆ ಅಲ್ಲ ಹಲವಾರು ವಿವಿಧ ಸಂಸ್ಥೆಗಳನ್ನು ತೆರೆಮರೆಯಲ್ಲಿ ಮಾರ್ಗದರ್ಶನ ನೀಡಿ, ಮುನ್ನೆಸುತ್ತಿದ್ದರು. ಆಧುನಿಕ ಮಣಿಪಾಲದ ಶಿಲ್ಪಿ ಡಾ. ಟಿ.ಎಂ.ಎ.ಪೈಯವರ ಹೆಸರು ಹೊತ್ತ ಡಾಟಿಎಂಎ ಪೈ ಪ್ರತಿಷ್ಠಾನ, ಡಾ. ಟಿಎಂಎ ಪೈಯವರು ಸ್ಥಾಪಿಸಿದ ಮೊದಲ ಕಾಲೇಜು ಶಿಕ್ಷಣ ಸಂಸ್ಥೆ ಎಂಜಿಎA ಕಾಲೇಜಿನ ಟ್ರಸ್ಟ್, ಸಿಂಡಿಕೇಟ್ ಬ್ಯಾಂಕ್ ನ ಪೂರ್ವ ರೂಪ ಐಸಿಡಿಎಸ್ ಲಿ., ‘ಉದಯವಾಣಿ’ಯನ್ನು ನಡೆಸುತ್ತಿರುವ ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಮೊದಲಾದ ಸಂಸ್ಥೆಗಳ ಅಧ್ಯಕ್ಷರಾಗಿ ಹೀಗೆ ಹಲವು ಸಂಸ್ಥೆಗಳ ಬೆಳವಣಿಗೆಗೆ ಕಾರಣರಾದವರು.
ಪೈ ಅವರ ಕುರಿತು :
1933ರ ಜೂ. 20ರಂದು ಜನಿಸಿದ ಮೋಹನದಾಸ್ ಪೈಯವರು ಡಾ.ಟಿಎಂಎ ಪೈಯವರ ಹಿರಿಯ ಪುತ್ರ. ಇವರಿಗೆ ಮೂರು ವರ್ಷ ಆಗಿರುವಾಗ ತಂದೆಯವರು ಉಡುಪಿಯಿಂದ ಮಣಿಪಾಲಕ್ಕೆ ಸ್ಥಳಾಂತರವಾದ ಕಾರಣ ಇವರೂ ಮಣಿಪಾಲದಲ್ಲಿ ಬೆಳೆದರು. ತಂದೆಯವರು ಆರಂಭಿಸಿದ ಹೊಸ ಶಾಲೆಯಲ್ಲಿ (ಮಣಿಪಾಲ ಅಕಾಡೆಮಿ ಶಾಲೆ), ಉಡುಪಿಯ ಮೋಡರ್ನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಬಳಿಕ ತಂದೆಯವರು ನೂತನವಾಗಿ ಆರಂಭಿಸಿದ ಎಂಜಿಎA ಕಾಲೇಜಿನಲ್ಲಿ (1949-51) ಇಂಟರ್‌ಮೀಡಿಯೆಟ್ ಶಿಕ್ಷಣ ಪಡೆದರು. ಎಂಜಿಎA ಕಾಲೇಜಿನ ಮೊದಲ ತಂಡದ ವಿದ್ಯಾರ್ಥಿ ಇವರು. ಕೊಲ್ಹಾಪುರದಲ್ಲಿ ಕಾನೂನು ಶಿಕ್ಷಣ ಪಡೆದ (1951-53) ಮೋಹನದಾಸ್ ಪೈಯವರು ಪುಣೆ ವಿ.ವಿ.ಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದರು. ಆಗ ಕಾನೂನು ಪದವಿ ಅಧ್ಯಯನ ನಡೆಸಲು ಇಲ್ಲಿ ಅವಕಾಶವಿರಲಿಲ್ಲ. ಕರಾವಳಿ ಪ್ರದೇಶ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ಕಾರಣ ಒಂದೋ ಮದ್ರಾಸ್‌ಗೆ ತೆರಳಬೇಕಿತ್ತು. ಇಲ್ಲವಾದರೆ ಮುಂಬಯಿ ಪ್ರಾಂತ್ಯಕ್ಕೆ ಹೋಗಬೇಕಿತ್ತು. ಕರಾವಳಿಯವರಿಗೆ ಮದ್ರಾಸ್‌ಗಿಂತ ಮುಂಬಯಿ ಪ್ರಾಂತ್ಯ ಹೆಚ್ಚು ಪರಿಚಿತವಾಗಿದ್ದರಿಂದ ಅವರು ಮುಂಬಯಿ ಪ್ರಾಂತ್ಯದ ಕೊಲ್ಹಾಪುರಕ್ಕೆ ಹೋದರು.
ವೃತ್ತಿ ಪ್ರವೇಶ :
ಶಿಕ್ಷಣದ ಬಳಿಕ ತಂದೆಯವರು ಆರಂಭಿಸಿದ ಸಂಸ್ಥೆಗಳಲ್ಲಿ ತೊಡಗಿದರು. ಅವರು ಮೊದಲಾಗಿ ಪ್ರವೇಶಿಸಿದ್ದು ಮಣಿಪಾಲದಲ್ಲಿ ಹೆಂಚಿನ ಕಾರ್ಖಾನೆ ನಡೆಸುತ್ತಿದ್ದ ಕೆನರಾ ಲ್ಯಾಂಡ್ ಇನ್‌ವೆಸ್ಟ್ಮೆಂಟ್ಸ್ನ ಜನರಲ್ ಮ್ಯಾನೇಜರ್ ಆಗಿ. ಇದರ ಜತೆ ಮಣಿಪಾಲ್ ಪವರ್ ಪ್ರೆಸ್‌ನ ಆಡಳಿತ ಪಾಲುದಾರರಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿಕೊಂಡರು.
ಆಡಳಿತ ತಜ್ಞ- ಯೋಜನ ತಜ್ಞ
ಪೈಯವರು ಆಡಳಿತ ಮತ್ತು ಹಣಕಾಸು ಯೋಜನೆಯ ಜವಾಬ್ದಾರಿಯನ್ನು ನೋಡಿಕೊಂಡಿದ್ದರೆ ಟಿ.ಸತೀಶ್ ಪೈಯವರು ಉತ್ಪಾದನೆಯ ಜವಾಬ್ದಾರಿಯನ್ನು ನೋಡಿಕೊಂಡಿರುತ್ತಿದ್ದರು. ಹೊಸ ರೀತಿ ಆಟೋಮೆಟಿಕ್ ಟೈಪ್ ಸೆಟ್ಟಿಂಗ್ ಮೆಶಿನ್ ಮತ್ತು ಮುದ್ರಣ ಯಂತ್ರವನ್ನು ಗುಣಮಟ್ಟದ ಮುದ್ರಣಕ್ಕಾಗಿ ಹೊರದೇಶದಿಂದ ತರಿಸಲಾಯಿತು.
ಪೈ ಅವರ ನಿಧನಕ್ಕೆ ಬೊಮ್ಮಾಯಿ ಸಂತಾಪ :
ಉದಯವಾಣಿಯ ಸಂಸ್ಥಾಪಕ ಹಿರಿಯ ಜೀವಿ ತೋನ್ಸೆ ಮೋಹನದಾಸ್ ಪೈ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅವರ ಸಂಪುಟದ ಹಲವಾರು ಸಚಿವರು, ಬಿಜೆಪಿ ಶಾಸಕರುಗಳು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ

LEAVE A REPLY

Please enter your comment!
Please enter your name here