ಕಲಬುರ್ಗಿಯಲ್ಲಿ ವರುಣಾರ್ಭಟ: ತುರ್ತು ಕಾರ್ಯಾಚರಣೆಗೆ 8 ರಕ್ಷಣಾ ತಂಡಗಳು ಸಜ್ಜು

0
605

ಕಲಬುರ್ಗಿ, ಜು.10- ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ, ಕಾಲೇಜು, ಅಂಗನವಾಡಿಗಳಿಗೆ ರಜೆ ನೀಡುವುದರೊಂದಿಗೆ ಮೂರು ದಿನಗಳವರೆಗೆ ಆಲರ್ಟ್ ಮತ್ತು ಚಿಂಚೋಳಿ ತಾಲ್ಲೂಕಿನಲ್ಲಿ ರೆಡ್ ಆಲರ್ಟ್ ಘೋಷಿಸಲಾಗಿದೆ. ಪ್ರವಾಹದ ಆತಂಕವಿದ್ದು, ತುರ್ತು ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಕಲ ತಯಾರಿ ಮಾಡಿಕೊಂಡು ಸನ್ನದ್ದವಾಗಿದೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ 8 ರಕ್ಷಣಾ ತಂಡಗಳನ್ನು ಕಾರ್ಯಾಚರಣೆಗೆ ಸಜ್ಜುಗೊಳಿಸಿದೆ.
ಅಗ್ನಿಶಾಮಕ, ಎಸ್‌ಡಿಆರ್‌ಎಫ್, ಹೋಂಗಾರ್ಡ್ ಸೇರಿದಂತೆ ಎಂಟು ರಕ್ಷಣಾ ತಂಡಗಳನ್ನು ಸಿದ್ಧ ಮಾಡಿಕೊಂಡು ಪ್ರಾಯೋಗಿಕ ರೆಸ್ಕೂ ಟ್ರಾಯಲ್ ಕೂಡ ನಡೆಸಲಾಗಿದೆ. ರಕ್ಷಣಾ ಕಾರ್ಯಕ್ಕೆ ಬೇಕಾಗುವ ಬೋಟ್, ಲೈಫ್ ಜಾಕೆಟ್, ರೋಫ್ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಅಲ್ಲದೇ ಪ್ರವಾಹ ಪರಿಸ್ಥಿತಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಲಾಗಿದೆ.
ಜೂನ್ ತಿಂಗಳಲ್ಲಿ ಮಳೆಯಾಗದಿದ್ದರೂ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ. ಎರಡು ದಿನಗಳಿಂದ ವರುಣ ಬಿಸಿಲೂರಿನಲ್ಲಿ ಎಡೆಬಿಡದೇ ಆರ್ಭಟಿಸುತ್ತಿದ್ದು, ಜೀವ ಹಾನಿ ಸೇರಿದಂತೆ ಆವಾಂತರಗಳನ್ನು ಸೃಷ್ಟಿಸುತ್ತಿದ್ದಾನೆ. ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆ ಹಿನ್ನೆಲೆಯಲ್ಲಿ ಆಯಾ ತಾಲ್ಲೂಕಿನ ತಹಸಿಲ್ದಾರ್ ಹಾಗೂ ನೋಡಲ್ ಅಧಿಕಾರಿಗಳು ತಾಲ್ಲೂಕು ಕೇಂದ್ರಗಳಲ್ಲಿಯೇ ಠಿಕಾಣಿ ಹೂಡಿ ಕಾರ್ಯಪ್ರವೃತ್ತರಾಗಲು ಜಿಲ್ಲಾಡಳಿತ ಸೂಚಿಸಿದೆ.

LEAVE A REPLY

Please enter your comment!
Please enter your name here