ಮುಂಬೈ, ಜೂನ್ 28: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದ ವಿಶ್ವಾಸಮತಯಾಚನೆ ಮಾಡುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಈ ಮೂಲಕ ಹಲವು ದಿನಗಳ ರಾಜ್ಯದ ರಾಜಕೀಯ ವಿದ್ಯಮಾನಗಳಿಗೆ ಮತ್ತೊಂದು ತಿರುವು ಸಿಕ್ಕಿದೆ.
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಜೂನ್ 30ರ ಗುರುವಾರ ಬೆಳಗ್ಗೆ 11 ಗಂಟೆಗೆ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಸೂಚನೆ ನೀಡಿದ್ದಾರೆ.
ನವದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮುಂಬೈಗೆ ಆಗಮಿಸುತ್ತಿದ್ದಂತೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಭೇಟಿ ಮಾಡಿದರು.
ಮಂಗಳವಾರ ಬಿಜೆಪಿಯ ರಾಜ್ಯಾಧ್ಯಕ್ಷ ಚಂದ್ರಕಾAತ್ ಪಾಟೀಲ್ ಮತ್ತು ಗಿರೀಶ್ ಮಹಾಜನ್ ಜೊತೆಗೂಡಿ ರಾಜಭವನಕ್ಕೆ ತೆರಳಿದ ದೇವೇಂದ್ರ ಫಡ್ನವೀಸ್, ಸರ್ಕಾರವು ಬಹುಮತವನ್ನು ಕಳೆದುಕೊಂಡಿದೆ. ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ವಿಶ್ವಾಸಮತಯಾಚನೆ ಸಾಬೀತುಪಡಿಸುವಂತೆ ಸೂಚಿಸಲು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ ಎಂದ ಫಡ್ನವೀಸ್: ತಕ್ಷಣವೇ ವಿಶ್ವಾಸಯಾಚನೆ ನಡೆಸುವಂತೆ ಒತ್ತಾಯಿಸಿ ನಾವು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಗೆ ಪತ್ರವನ್ನು ನೀಡಿದ್ದೇವೆ ಎಂದು ರಾಜ್ಯದ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
16 ಶಾಸಕರು ಮುಂಬೈಗೆ ವಾಪಸ್ಸಾಗುವ ಬಗ್ಗೆ ಉಲ್ಲೇಖ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕರೆದಿದ್ದ ಶಿವಸೇನೆಯ ತುರ್ತು ಸಭೆ ಮಾತೋಶ್ರೀಯಲ್ಲಿ ಮುಕ್ತಾಯವಾದ ಬೆನ್ನಲ್ಲೇ, ಸುಮಾರು 15 ರಿಂದ 16 ಬಂಡಾಯ ಶಾಸಕರು ಗುವಾಹಟಿಯಿಂದ ಮುಂಬೈಗೆ ವಾಪಸಾಗಲಿದ್ದಾರೆ ಎಂದು ಶಿವಸೇನೆಯ ರಾಹುಲ್ ಪಾಟೀಲ್ ಹೇಳಿದ್ದಾರೆ.
ದೆಹಲಿಯಲ್ಲಿ ದೇವೇಂದ್ರ ಫಡ್ನವೀಸ್-ಶಾ ಮಾತುಕತೆ: ದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು. ಬರೋಬ್ಬರಿ ಒಂದೂವರೆ ಗಂಟೆಗಳ ಸುದೀರ್ಘ ಚರ್ಚೆಯ ನಂತರದ ದೆಹಲಿಯಿಂದ ಮುಂಬೈಗೆ ವಾಪಸ್ಸಾದರು.
ಮುಂಬೈಗೆ ದೇವೇಂದ್ರ ಫಡ್ನವೀಸ್ ವಾಪಸ್ ಆಗುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಮೇಲಾಟ ಮತ್ತೆ ಶುರುವಾಯಿತು. ಅಂತಿಮವಾಗಿ ಸರ್ಕಾರದ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರಿಂದ ಕಟ್ಟಪ್ಪಣೆ ಹೊರ ಬಿದ್ದಿತು.
ಸರ್ಕಾರದಲ್ಲಿ ವಿಶ್ವಾಸ ಗಳಿಸುವುದಕ್ಕೆ ಲೆಕ್ಕಾಚಾರ:
ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಒಟ್ಟು 288 ಸ್ಥಾನಗಳಿದ್ದು, ಒಬ್ಬ ಶಾಸಕರು ವಿಧಿವಶವಾದ ಹಿನ್ನೆಲೆ ಈ ಸಂಖ್ಯೆಯು 287ಕ್ಕೆ ತಗ್ಗಿದೆ. ಹೀಗಾಗಿ ಸರ್ಕಾರದ ಬಹುಮತಕ್ಕೆ ಕನಿಷ್ಠ 144 ಸ್ಥಾನಗಳು ಬೇಕಾಗುತ್ತದೆ. ಬಿಜೆಪಿಯು 106 ಶಾಸಕರನ್ನು ಹೊಂದುವ ಮೂಲಕ ಅತಿದೊಡ್ಡ ಪಕ್ಷವಾಗಿದೆ. ಆದರೆ 55 ಶಾಸಕರನ್ನು ಹೊಂದಿರುವ ಶಿವಸೇನೆ, 53 ಶಾಸಕರನ್ನು ಹೊಂದಿರುವ ಎನ್ ಸಿಪಿ ಮತ್ತು 44 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಜೊತೆ ಮೂವರು ಶಾಸಕರನ್ನು ಹೊಂದಿರುವ ಬಹುಜನ ವಿಕಾಸ ಅಘಾಡಿ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಮಹಾ ವಿಕಾಸ ಅಘಾಡಿ ಎಂದ ಸಮ್ಮಿಶ್ರ ಸರ್ಕಾರವನ್ನು ರಚಿಸಿವೆ.
ಮಹಾ ವಿಕಾಸ ಅಘಾಡಿ ಮೈತ್ರಿಕೂಟಕ್ಕೆ 169 ಶಾಸಕರ ಬೆಂಬಲ: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಒಕ್ಕೂಟವು ಸರ್ಕಾರವನ್ನು ರಚಿಸಿದ ಸಂದರ್ಭದಲ್ಲಿ ಒಟ್ಟು 169 ಶಾಸಕರ ಬೆಂಬಲವನ್ನು ಪಡೆದುಕೊಂಡಿತ್ತು. ಇನ್ನೊಂದು ಮಗ್ಗಲಿನಲ್ಲಿ ಬಿಜೆಪಿಯು 106 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಇದರ ಜೊತೆಗೆ ಮಿತ್ರಪಕ್ಷಗಳು ಹಾಗೂ ಐದು ಇತರೆ ಶಾಸಕರು ಸೇರಿದಂತೆ ಒಟ್ಟು 113 ಶಾಸಕರ ಬೆಂಬಲವನ್ನು ಹೊಂದಿತ್ತು. ಈಗ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಶಿವಸೇನೆ ನಾಯಕ ಏಕನಾಥ್ ಶಿಂಧೆ ಜೊತೆಗೆ 50 ಮಂದಿ ಶಾಸಕರು ಬೆಂಬಲಕ್ಕೆ ನಿಂತಿದ್ದಾರೆ.