ಪಿಎಸ್‌ಐ ನೇಮಕಾತಿ ಅಕ್ರಮ: ಜೈಲಿನಲ್ಲಿರುವ ದಿವ್ಯಾ ಹಾಗರಗಿಗೆ ಎರಡೂ ಸರ್ಕಾರಿ ಹುದ್ದೆಗಳು ಅಭಾದಿತ..!

0
1090

ಕಲಬುರ್ಗಿ, ಮೇ.13- ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಬಿಜೆಪಿ ನಾಯಕಿ ಹಾಗೂ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಒಡತಿ ಶ್ರೀಮತಿ ದಿವ್ಯಾ ಹಾಗರಗಿಯವರು ಪತಿಯೊಂದಿಗೆ ಜೈಲು ಸೇರಿದರೂ ಸಹ ಆಕೆಗೆ ಬಿಜೆಪಿ ಪಕ್ಷ ನೀಡಿರುವ ನರ್ಸಿಂಗ್ ಕೌನ್ಸಿಲ್ ಸದಸ್ಯತ್ವ ಹಾಗೂ ದಿಶಾ ಸಮಿತಿ ಸದಸ್ಯ ಸ್ಥಾನಗಳು ಮಾತ್ರ ಯಥಾರೀತಿಯಲ್ಲಿಯೇ ಮುಂದುವರೆದಿವೆ. ಮಾತ್ರವಲ್ಲ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದಲೂ ಆಕೆಯನ್ನು ವಜಾಮಾಡಿಲ್ಲ.
ಇಂತಹ ಗಂಭೀರ ಪ್ರಕರಣದಲ್ಲಿ ದಿವ್ಯಾ ಹಾಗರಗಿಗೆ ಕೊಟ್ಟಿರುವ ಸ್ಥಾನಮಾನಗಳಲ್ಲಿ ಏನಾದರೂ ಏರುಪೇರಾದರೆ ದೊಡ್ಡವರ ಹೆಸರುಗಳು ಹೊರ ಬರುತ್ತವೆ ಎಂಬ ಭಯ ಮೂಡಿರಬಹುದೇ? ಎಂಬ ಪ್ರಶ್ನೆ ಹಾಗೂ ಭಯದ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ.
ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಶಾಮೀಲಾಗಿದ್ದ ದಿವ್ಯಾ ಹಾಗರಗಿ ಪ್ರಕರಣ ಹೊರಬರುತ್ತಿದ್ದಂತೆಯೇ ತಲೆ ಮರೆಸಿಕೊಂಡಿದ್ದಳು. ಪುಣೆಯ ಉದ್ಯಮಿ ಸುರೇಶ್ ಕಾಟೇಗಾಂವ್ ಮನೆಯಲ್ಲಿ ತಲೆ ಮರೆಸಿಕೊಂಡಿದ್ದ ಆಕೆಯನ್ನು ಸಿಐಡಿ ಪೋಲಿಸರು ಬಂಧಿಸಿದ್ದರು. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಪೋಲಿಸರ ವಿಚಾರಣೆ ಎದುರಿಸಿ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದಾಗ್ಯೂ, ದಿವ್ಯಾ ಹಾಗರಗಿಗೆ ಬಿಜೆಪಿ ಸರ್ಕಾರ ನೀಡಿದ್ದ ಎರಡೂ ಸ್ಥಾನಗಳಿಂದ ವಜಾ ಮಾಡುವ ಧೈರ್ಯ ಮಾಡಿಲ್ಲ.
ಸಾಮಾನ್ಯವಾಗಿ ಯಾರೇ ಆಗಿದ್ದರೂ ಭ್ರಷ್ಟಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದ ಕೂಡಲೇ ಅವರಿಗೆ ಕೊಟ್ಟಿರುವ ಎಲ್ಲ ಸ್ಥಾನಮಾನಗಳನ್ನು ರದ್ದು ಮಾಡಲಾಗುತ್ತದೆ. ಅಷ್ಟೇಕೆ? ಪಿಎಸ್‌ಐ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿರುವ ಪೋಲಿಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಆದಾಗ್ಯೂ, ದಿವ್ಯಾ ಹಾಗರಗಿ ವಿಚಾರದಲ್ಲಿ ಸರ್ಕಾರದ ಕ್ರಮ ಬೇರೆಯದ್ದೇ ಆಗಿದೆ.
ದಿವ್ಯಾ ಹಾಗರಗಿಯನ್ನು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಸದಸ್ಯೆಯನ್ನಾಗಿ ಬಿಜೆಪಿ ಸರ್ಕಾರ ನೇಮಿಸಿದೆ. ರಾಜ್ಯದ ವೈದ್ಯಕೀಯ ಶಿಕ್ಷಣ ಡಾ. ಕೆ. ಸುಧಾಕರ್ ಅವರು ಈ ಕುರಿತು ಮೌನವಹಿಸಿದ್ದಾರೆ. ಅದೇ ರೀತಿ ದಿಶಾ ಸಮಿತಿ ಸಭೆ ಸದಸ್ಯರಾಗಿಯೂ ದಿವ್ಯಾ ಹಾಗರಗಿ ನೇಮಕಗೊಂಡಿದ್ದಾರೆ. ಸಂಸದ ಡಾ. ಉಮೇಶ್ ಜಾಧವ್ ಅವರೇ ಹೆಸರು ಶಿಫಾರಸ್ಸು ಮಾಡಿರುವ ಕುರಿತು ಬಲವಾದ ಸಂದೇಹವಿದೆ. ಆದಾಗ್ಯೂ, ಸಂಸದ ಡಾ. ಉಮೇಶ್ ಜಾಧವ್ ಅವರು ಮಾತ್ರ ತಮಗೂ ಹಾಗೂ ದಿವ್ಯಾ ಹಾಗರಗಿ ಅವರ ನೇಮಕಕ್ಕೂ ಯಾವುದೇ ರೀತಿಯ ಸಂಬAಧ ಇಲ್ಲ ಎಂಬ ಹೇಳಿಕೆಯನ್ನು ನೀಡುತ್ತಿದ್ದಾರೆ. ಇನ್ನು ರಾಜ್ಯದ ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಪಿಎಸ್‌ಐ ಪ್ರಕರಣವು ಗಂಭೀರವಾಗಿದ್ದರೂ ಸಹ ಆ ಕುರಿತು ಹೇಳಿಕೆಯನ್ನು ನೀಡುವ ಗೋಜಿಗೆ ಹೋಗಿಲ್ಲ.
ಇನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದಲೂ ದಿವ್ಯಾ ಹಾಗರಿಗೆ ವಜಾಗೊಳಿಸಿಲ್ಲ. ಆದಾಗ್ಯೂ, ದಿವ್ಯಾ ಹಾಗರಗಿ ಹೆಸರು ಬಂದ ಕೂಡಲೇ ಆಕೆ ಬಿಜೆಪಿ ನಾಯಕಿ ಅಲ್ಲ ಎಂದು ಬಿಜೆಪಿ ಕರ್ನಾಟಕ ಘಟಕದಿಂದ ಪ್ರಕಟಣೆ ನೀಡಲಾಗಿತ್ತು. ಅದರ ಬೆನ್ನಲ್ಲಿಯೇ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಹಾಗೂ ಪ್ರಮುಖರ ಜೊತೆ ಇರುವ ಭಾವಚಿತ್ರಗಳು ವೈರಲ್ ಆಗಿದ್ದವು. ಮಾತ್ರವಲ್ಲ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಈಶ್ವರ್ ಖಂಡ್ರೆ, ಶಾಮನೂರು ಶಿವಶಂಕರಪ್ಪ ಅವರೊಂದಿಗೂ ಸಹ ದಿವ್ಯಾ ಹಾಗರಗಿ ಅವರ ಭಾವಚಿತ್ರಗಳು ರಾರಾಜಿಸಿದವು.
ದಿವ್ಯಾ ಹಾಗರಗಿಗೆ ಸರ್ಕಾರ ನೀಡಿರುವ ನರ್ಸಿಂಗ್ ಕೌನ್ಸಿಲ್ ಸದಸ್ಯ ಸ್ಥಾನದಿಂದ ಬಿಜೆಪಿ ಸರ್ಕಾರ ಯಾಕೆ ವಜಾ ಮಾಡಿಲ್ಲ? ಅವರನ್ನು ವಜಾ ಮಾಡಿದರೆ ದೊಡ್ಡವರ ಹೆಸರುಗಳು ಹೊರ ಬರುತ್ತವೆಯೇ? ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆಯವರು ಮೇಲಿಂದ ಮೇಲೆ ಪ್ರಶ್ನಿಸಿದರೂ ಸಹ ಆ ಕುರಿತು ಸರ್ಕಾರವಾಗಲಿ, ಬಿಜೆಪಿ ಪಕ್ಷದ ವರಿಷ್ಠರಾಗಲಿ ಪ್ರತಿಕ್ರಿಯಿಸುತ್ತಿಲ್ಲ.

LEAVE A REPLY

Please enter your comment!
Please enter your name here