ದೇಶದ ಸಂವಿಧಾನ ಗಟ್ಟಿಯಾಗಿದ್ದರಿಂದಲೇ ನೆಲದಲ್ಲಿ ಯಾವುದೇ ಸಮಸ್ಯೆವಿಲ:ಡಾ.ಎನ್.ವಿ.ಪ್ರಸಾದ

0
504

ಕಲಬುರಗಿ,ಏ.14:ಭಾರತವು ಇಂದು 140 ಕೋಟಿ ಜನಸಂಖ್ಯೆ ದಾಟಿದರು ಸಹ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನ ಗಟ್ಟಿಯಾಗಿರುವ ಕಾರಣ ದೇಶದಲ್ಲಿ ಯಾವುದೇ ಸಮಸ್ಯೆವಿಲ್ಲ ಎಂದು ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ ಅಭಿಪ್ರಾಯಪಟ್ಟರು.
ಗುರುವಾರ ನಗರದ ಜಗತ್ ವೃತ್ತದ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ.ಜಾ-ಪ.ಪಂಗಡ ಸರಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ನೆರೆಯ ರಾಷ್ಟ್ರಗಳಲ್ಲಿ ಆಗಾಗ ರಾಜಕೀಯ ಅಸ್ಥಿರತೆಯನ್ನು ನಾವು ಕಾಣುತ್ತಿದ್ದೇವೆ. ಆದರೆ ಅಂತಹ ಯಾವುದೇ ಪರಿಸ್ಥಿತಿ ಭಾರತದಲ್ಲಿ ಇದೂವರೆಗೆ ಕಂಡಿಲ್ಲ. ಅದಕ್ಕೆ ಕಾರಣ ಮಹಾನ್ ವಿಧ್ವಾನ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವರನ್ನು ಸಮನಾಗಿ ಕಾಣುವ, ಎಲ್ಲಾ ಧರ್ಮ, ಸಂಸ್ಕೃತಿ ಆಚಾರ ವಿಚಾರಗಳನ್ನು ಗೌರವಿಸುವ ಮತ್ತು ಸರ್ವರು ಒಪ್ಪುವ ಸಮಾನತೆಯ ಗಟ್ಟಿತನದ ಸಂವಿಧಾನ ಎಂದರು.
ಕಾರ್ಮಿಕ, ಮಹಿಳೆಯರ ಹಕ್ಕಿಗಾಗಿ ಹೋರಾಡಿದ ಮಹಾನ ಪುರುಷರು ಅಂಬೇಡ್ಕರರು. ಶೋಷಿತರ ಕಲ್ಯಾಣಕ್ಕಾಗಿ ಇಡೀ ಜೀವನವನ್ನು ಮುಡಿಪಿಟ್ಟ ಮಹಾ ಮಾನವತಾವಾದಿ ಅವರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದ ಡಾ. ಉಮೇಶ ಜಾಧವ ಅವರು ಮಾತನಾಡಿ ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯದವರಿಗೆ ಸೇರಿದವರಲ್ಲ. ಇಡೀ 135 ಕೋಟಿ ಜನರ ಆಸ್ತಿಯಾಗಿದ್ದಾರೆ. ಬಡವ-ಬಲ್ಲಿದ ಎನ್ನದೆ ಪ್ರತಿಯೊಬ್ಬರಿಗೂ ಒಂದೇ ಮತದ ಹಕ್ಕು ನೀಡಿ ಎಲ್ಲರನ್ನು ಸಮನಾಗಿ ಕಂಡವರಾಗಿದ್ದಾರೆ ಎಂದು ಸಂವಿಧಾನ ಶಿಲ್ಪಿಯನ್ನು ಗುಣಗಾನ ಮಾಡಿದರು.
ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ಜಾತಿ-ಧರ್ಮ-ಗಡಿ ಮೀರಿದ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರರು. ಅಂಬೇಡ್ಕರ್ ರಚಿಸಿದ ಸಂವಿಧಾನದ ಚೌಕಟ್ಟಿನಲ್ಲಿಯೇ ಇಂದು ಇಡೀ ದೇಶದ ಆಡಳಿತ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಕೇವಲ ಜಯಂತಿ, ಪುಣ್ಯತಿಥಿಯಂದು ಇವರನ್ನು ಸ್ಮರಿಸದೆ ಪ್ರತಿನಿತ್ಯ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರು ನಡೆಯಬೇಕಿದೆ. ಮಕ್ಕಳಿಗೆ ಅಂಬೇಡ್ಕರ್ ಅವರ ಬದುಕು-ಬರಹ ಬಗ್ಗೆ ತಿಳಿಹೇಳುವ ಅವಶ್ಯಕತೆವಿದೆ ಎಂದು ಪ್ರತಿಪಾದಿಸಿದರು.
ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ .ವೈ.ಎಸ್.ರವಿಕುಮಾರ ಮಾತನಾಡಿ, ದೇಶದ ಪ್ರತಿಯೊಂದು ಭೂಭಾಗವು ವೈವಿಧ್ಯಮಯ ಸಂಸ್ಕೃತಿ, ಆಚಾರ ವಿಚಾರಗಳನ್ನು ಹೊಂದಿದ್ದರೂ ಸಹ ನಾವೆಲ್ಲ ಒಂದೇ ಎಂಬುದನ್ನು ಸಂವಿಧಾನ ಸಾರುತ್ತದೆ. ಅಂಬೇಡ್ಕರ್ ರಚಿಸಿದ ಸಂವಿಧಾನದ ಹಾದಿಯಲ್ಲಿ ನಮ್ಮ ಉಸಿರು ಇರುವವರೆಗೂ ನಾವು ಸಾಗಬೇಕಿದೆ ಎಂದರು.
ವಿಧಾನ ಪರಿಷತ್ತಿನ ಶಾಸಕ ಶಶೀಲ ಜಿ. ನಮೋಶಿ ಮಾತನಾಡಿ ಅಂಬೇಡ್ಕರರು ದೊಡ್ಡ ವಿಧ್ವಾನರು. ಅದಕ್ಕಾಗಿ ಇವರ ಜನ್ಮ ದಿನವಾದ ಏಪ್ರಿಲ್ 14 ರಂದು ಇಡೀ ವಿಶ್ವ “ವಿಶ್ವ ಜ್ಞಾನ ದಿನ”ವನ್ನಾಗಿ ಆಚರಿಸುತ್ತಿದೆ. ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾಗಿದ್ದ ಇವರು ಜವಾಹರಲಾಲ್ ನೆಹರು ಅವರ ಸಂಪುಟದಲ್ಲಿ ಮಂತ್ರಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. ವಿದೇಶದ ವಿ.ವಿ.ಗಳಲ್ಲಿ ಅನೇಕ ಪದವಿಗಳನ್ನು ಪಡೆದ ಇವರು ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದಾರೆ. ಜೀವನದುದ್ದಕ್ಕೂ ಶೋಷಿತರ ಪರ, ಧ್ವನಿಯಿಲ್ಲದವರ ಧ್ವನಿಯಾಗಿ ಬದುಕಿದವರು ಎಂದರು.

LEAVE A REPLY

Please enter your comment!
Please enter your name here