

ಕಲಬುರಗಿ, ಮಾ. 24: ನೂತನ ರೇಲ್ವೆ ವಿಭಾಗ ಸ್ಥಾಪನೆ ಸೇರಿದಂತೆ ನೆನೆಗುದಿಗೆ ಬಿದ್ದಿರುವ ಇತರೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಆಗ್ರಹಿಸಿ ರಾಜ್ಯ ಸಭೆ ವಿರೋಧಪಕ್ಷದ ನಾಯಕರಾದ ಹಾಗೂ ಮಾಜಿ ರೇಲ್ವೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಪಡಿಸಿದ್ದಾರೆ.
ಈ ಕುರಿತು ಕೇಂದ್ರ ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಸುದೀರ್ಘ ಪತ್ರ ಬರೆದಿರುವ ಖರ್ಗೆ ಅವರು ನೆನೆಗುದಿಗೆ ಬಿದ್ದಿರುವ ಘೋಷಿತ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕರು ಕೇಂದ್ರ ರೇಲ್ವೆ ಸಚಿವರಿಗೆ ಬರೆದ ಪತ್ರದ ಸಾರಾಂಶ ಹೀಗಿದೆ…
ಗುಲಬರ್ಗಾ ರೇಲ್ವೆ ವಿಭಾಗ :
ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಕೇಂದ್ರ ರೇಲ್ವೆ ವಿಭಾಗ, ದಕ್ಷಿಣ ಮಧ್ಯೆ ರೇಲ್ವೆ ವಿಭಾಗ ಹಾಗೂ ನೈರುತ್ಯ ರೇಲ್ವೆ ವಿಭಾಗದೊಂದಿಗೆ ಬೆಸೆಯುವ ಉದ್ದೇಶದಿಂದ ಗುಲಬರ್ಗಾಕ್ಕೆ ಪ್ರತ್ಯೇಕ ರೇಲ್ವೆ ವಿಭಾಗವನ್ನು 2014 ರ ಬಜೆಟ್ ನಲ್ಲಿ ಘೋಷಿಸಲಾಗಿತ್ತು.
ರೇಲ್ವೆ ಬಳಕೆದಾರರಿಗೆ ಒಳ್ಳೆಯ ಸೌಲಭ್ಯ ಒದಗಿಸುವುದರ ಜೊತೆಗೆ ರೇಲ್ವೆ ಕಚೇರಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಉದ್ದೇಶ ಹೊಂದಲಾಗಿತ್ತು. ರೇಲ್ವೆ ವಿಭಾಗ ಸ್ಥಾಪನೆಗೆ ರೂ 5 ಕೋಟಿ ಅನುದಾನ ಒದಗಿಸಿರುವುದಲ್ಲದೇ, ಕಚೇರಿ ನಿರ್ಹವಣೆ ನೋಡಿಕೊಳ್ಳಲು ವಿಶೇಷ ಅಧಿಕಾರಿಯನ್ನೂ ಕೂಡಾ ನೇಮಿಸಲಾಗಿತ್ತು.
ಮುಂದುವರೆದು, ಈ ಯೋಜನೆಗೆ ರಾಜ್ಯ ಸರ್ಕಾರ ಉಚಿತವಾಗಿ 32 ಎಕರೆ ಭೂಮಿಯನ್ನು ಒದಗಿಸಿತ್ತು. ಈಗಲೂ ಕೂಡಾ ಆ ಭೂಮಿ ರೇಲ್ವೆ ಇಲಾಖೆ ಒಡೆತನದಲ್ಲಿದೆ. ಆದರೂ, ರೇಲ್ವೆ ಪ್ರಾಧಿಕಾರ ರೇಲ್ವೆ ವಿಭಾಗ ಸ್ಥಾಪನೆ, ಅಧಿಕಾರಿಗಳ ವಸತಿಗೃಹ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿಲ್ಲ.
ರೇಲ್ವೆ ಬೋಗಿ ಕಾರ್ಖಾನೆ:
ಯಾದಗಿರಿ ಜಿಲ್ಲೆ ಕಡೇಚೂರು ಗ್ರಾಮದ ಬಳಿಯ ಕೈಗಾರಿಕಾ ಪ್ರದೇಶದಲ್ಲಿ 2014 ರಲ್ಲಿ ಬೋಗಿ ಕಾರ್ಖಾನೆ ಮಂಜೂರಾಗಿತ್ತು. ಸಧ್ಯ ಅದೊಂದು ಸಣ್ಣ ಪ್ರಮಾಣದ ಉದ್ಯೆಮವಾಗಿ ಕಾರ್ಯನಿರ್ವಹಿಸುತ್ತಿದೆ. ಈಗಿರುವ ಕಾರ್ಖಾನೆಯನ್ನು ವಿಸ್ತರಿಸುವ ಉದ್ದೇಶದಿಂದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ ಸುಮಾರು 150 ಎಕರೆ ಜಮೀನನ್ನು ಒದಗಿಸಿತ್ತು.
7 ವರ್ಷ ಗತಿಸಿದರೂ ಕೂಡಾ ರೇಲ್ವೆ ಬೋಗಿ ಕಾರ್ಖಾನೆ ವಿಸ್ತರಣೆ ಕಾರ್ಯಕ್ಕೆ ಕ್ರಮ ಕೈಗೊಂಡಿಲ್ಲ. ಈ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸುವ ಮೂಲಕ ಕಾರ್ಖಾನೆ ವಿಸ್ತರಣೆ ಮಾಡುವುದು ಅಗತ್ಯವಾಗಿದೆ.
ಗದಗ – ವಾಡಿ ನೂತನ ರೇಲ್ವೆ ಮಾರ್ಗ :
ಬೆಂಗಳೂರು- ಮುಂಬೈ ರೇಲ್ವೆ ಮಾರ್ಗವನ್ನು ಹೈದರಾಬಾದ್ ( ದಕ್ಷಿಣ ಮಧ್ಯೆ ) ರೇಲ್ವೆ ಮಾರ್ಗದೊಂದಿಗೆ ಸೇರಿಸುವ ಉದ್ದೇಶದಿಂದ ನೂತನ ಗದಗ- ವಾಡಿ ರೇಲ್ವೆ ಮಾರ್ಗವನ್ನು ಮಂಜೂರು ಮಾಡಲಾಗಿತ್ತು.
ನೂತನ ಮಾರ್ಗದ ಕಾಮಗಾರಿ ತೀರಾ ಮಂದಗತಿಯಲ್ಲಿ ಸಾಗಿದ್ದು, ಯೋಜನೆಗೆ ಬೇಕಾಗುವ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ತೀವ್ರಗತಿಯಲ್ಲಿ ನಡೆಯಬೇಕಿದೆ. ಈ ಮಾರ್ಗದ ಸ್ಥಾಪನೆಗೆ ನಿಧಾನಗತಿ ಅನುಸರಿಸದೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಿದೆ.
ಪಿಟ್ ಲೈನ್ : ಕಲಬುರಗಿ ರೇಲ್ವೆ ನಿಲ್ದಾಣದ ದಕ್ಷಿಣ ಹಾಗೂ ಉತ್ತರ ಭಾಗಕ್ಕೆ ಪಿಟ್ ಲೈನ್ ಸ್ಥಾಪನೆ ಕಾಮಗಾರಿ 2014 ರಲ್ಲೇ ಮಂಜೂರಾಗಿತ್ತು. ದಕ್ಷಿಣ ಭಾಗದ ಪಿಟ್ ಲೈನ್ ಕಾಮಗಾರಿ ಈಗಾಗಲೇ ಮುಗಿದಿದ್ದು, ಕಾರ್ಯನಿರ್ವಹಿಸುತ್ತಿದೆ. ಆದರೆ, ಉತ್ತರ ಭಾಗದ ಪಿಟ್ ಲೈನ್ ನಿರ್ಮಾಣ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಈ ಕೂಡಲೇ ಸದರಿ ಕಾಮಗಾರಿ ಮುಗಿಸಿದರೆ, ಬೀದರ್ ಕಡೆಯಿಂದ ಬರುವ ರೇಲ್ವೆಗಳಿಗೆ ಸಹಕಾರಿಯಾಗಲಿದೆ.
ಭೀಮಾ ನದಿಯಿಂದ ನೀರು : ಕಲಬುರಗಿ ರೇಲ್ವೆ ನಿಲ್ದಾಣಕ್ಕೆ ಕುಡಿಯುವ ನೀರು ಒದಗಸುವುದರ ಜೊತೆಗೆ ರೇಲ್ವೆ ಬೋಗಿಗಳನ್ನು ತೊಳೆಯುವ ಉದ್ದೇಶದಿಂದ ಭೀಮಾ ನದಿಯಿಂದ ನೀರು ಒದಗಿಸುವ ಯೋಜನೆ ಹೊಂದಲಾಗಿತ್ತು. ಈ ಕೆಲಸ ಕೂಡಾ ಪ್ರಾರಂಭಿಸಿಲ್ಲ. ಇದನ್ನು ಆದ್ಯತೆ ಮೇರೆಗೆ ಪರಿಗಣಿಸ ಬೇಕು.