ಖಂಡೆರಾಯನಪಲ್ಲಿಯಲ್ಲಿ ಭತ್ತ ಖರೀದಿ ಕೇಂದ್ರ ಉದ್ಘಾಟನೆ: ರೈತರಿಗೆ ಸೋಲಾರ್ ಪಂಪ್‌ಸೆಟ್ ಯೋಜನೆ ಜಾರಿಗೆ -ರಾಜಕುಮಾರ ಪಾಟೀಲ ತೇಲ್ಕೂರ

0
1141

ಕಲಬುರಗಿ,ಮಾ.12:ಅನ್ನದಾತ ರೈತನಿಗೆ ದಿನದ 24 ಗಂಟೆ ಕಾಲ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರವು ಸೋಲಾರ್ ನೀರಾವರಿ ಪಂಪ್‌ಸೆಟ್ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.
ಶನಿವಾರ ಸೇಡಂ ತಾಲೂಕಿನ ಖಂಡೆರಾಯನಪಲ್ಲಿಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ನಾಡೆಪಲ್ಲಿ ಭತ್ತ ಖರೀದಿ ಕೇಂದ್ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ನೀರಾವರಿ ಸೋಲಾರ್ ಪಂಪ್‌ಸೆಟ್‌ಗೆ 3.5 ಲಕ್ಷ ರೂ. ತಗಲುತ್ತದೆ. 1.5 ಲಕ್ಷ ರೂ. ನಬಾರ್ಡ್ ನಿಂದ ಸಬ್ಸಿಡಿ ನೀಡುವುದಲ್ಲದೆ ಜೊತೆಗೆ ಶೇ.3ರ ಬಡ್ಡಿ ದರದಲ್ಲಿ 2 ಲಕ್ಷ ರೂ. ಸಾಲ ನೀಡುವ ಯೋಜನೆ ಇದಾಗಿದೆ. ಯೋಜನೆ ಜಾರಿಯಾದಲ್ಲಿ ವಿದ್ಯುತ್ ಸಮಸ್ಯೆ ಎಂದು ತಲೆ ಮೇಲೆ ಕೈ ಕಟ್ಟಿಕೊಂಡು ಕೂಡುವ ಅವಶ್ಯತೆ ಬೀಳಲ್ಲ. ವರ್ಷದ 12 ತಿಂಗಳು ರೈತರು ಯಾವುದೇ ತೊಂದರೆ ಇಲ್ಲದೆ ಕೃಷಿ ಬೆಳೆಗಳನ್ನು ಬೆಳೆಯಬಹುದು ಎಂದರು.
ಮಾರುಕಟ್ಟೆಯಲ್ಲಿ 1200-1300 ರೂ. ಗಳಿಗೆ ಭತ್ತ ಮಾರುವ ದುಸ್ಥಿತಿ ಕರ್ನಾಟಕದ ಕೊನೆ ಹಳ್ಳಿ ಖಂಡೆರಾಯನಪಲ್ಲಿ ಮತ್ತು ಸುತ್ತಮುತ್ತಲಿನ ರೈತರದ್ದಾಗಿತ್ತು. ಹೀಗಾಗಿ ಇಲ್ಲಿ ಭತ್ತ ಖರೀದಿ ಕೇಂದ್ರ ಸ್ಥಾಪನೆಯ ನಮ್ಮ ಬೇಡಿಕೆಗೆ ಸರ್ಕಾರ ಮಂಜೂರಾತಿ ನೀಡಿ ಇಂದು ಖರೀದಿ ಕೇಂದ್ರವನ್ನು ಆರಂಭಿಸಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ. ಪ್ರಸಕ್ತ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ 4, ಚಿತ್ತಾಪೂರ ಮತ್ತು ಜೇವರ್ಗಿ ತಾಲೂಕಿನ ತಲಾ 2 ರಂತೆ 8 ಭತ್ತ ಖರೀದಿ ಕೇಂದ್ರ ತೆರೆಯಲಾಗಿದೆ. ಪ್ರತಿ ರೈತರಿಂದ ಕ್ವಿಂಟಾಲ್‌ಗೆ 1940 ರೂ. ಗಳಂತೆ ಗರಿಷ್ಠ 40 ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗುತ್ತಿದೆ ಎಂದರು.
ಸಾರ್ವಜನಿಕರ ಅನಗತ್ಯ ಕಚೇರಿ ಅಲೆದಾಟ ತಪ್ಪಿಸಲು ಇಂದು ಜನರ ಬಾಗಿಲೆಗೆ ಬಸವರಾಜ ಬೊಮ್ಮಾಯಿ ಸರ್ಕಾರ ಬಂದಿದೆ. ಕಂದಾಯ ಇಲಾಖೆಯ ಸೇವೆಗಳನ್ನು ಉಚಿತವಾಗಿ ಒದಗಿಸುವ “ಕಂದಾಯ ದಾಖಲೆ ಮನೆ ಬಾಗಿಲಿಗೆ” ಯೋಜನೆ ಹಿನ್ನೆಲೆಯಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳೆ ನಿಮ್ಮ ಮನೆಗೆ ಬಂದು ನಿಮ್ಮ ಹಕ್ಕಿನ ಪಹಣಿ ದಾಖಲೆಗಳನ್ನು ನೀಡಿದ್ದಾರೆ ಎಂದರು.
ಕಲಬುರಗಿ ಕಲ್ಯಾಣಕ್ಕೆ ಡಿ.ಸಿ. ಕಟಿಬದ್ಧ: ಕಲಬುರಗಿಯ ಕಲ್ಯಾಣಕ್ಕೆ ದಕ್ಷ ಅಧಿಕಾರಿ ಡಿ.ಸಿ. ಯಶವಂತ ವಿ. ಗುರುಕರ್ ಕಟಿಬದ್ಧರಾಗಿದ್ದಾರೆ. ಅಧಿಕಾರ ವಹಿಸಿದ ಎರಡೇ ದಿನದಲ್ಲಿ 2 ವರ್ಷದಿಂದ ಅನುಕಂಪದ ನೌಕರಿಗೆ ಅಲೆಡಾಡುತ್ತಿದ್ದ ಮಹಿಳೆಗೆ ನೌಕರಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಹಲವಾರು ವರ್ಷಗಳಿಂದ ಧೂಳು ಹಿಡಿದಿದ್ದ ಭೂವಾಜ್ಯ ಕಡತಗಳಿಗೆ ಒಂದೇ ತಿಂಗಳಿನಲ್ಲಿ ಮುಕ್ತಿ ನೀಡಿದ್ದಾರೆ. ಭ್ರಷ್ಠರಿಗೆ ಸಿಂಹ ಸ್ವಪ್ನವಾಗಿರುವ ಇವರು ಕಚೇರಿಯಲ್ಲಿ ಕಡಿಮೆ ಜನರ ಬಳಿಯೆ ಹೆಚ್ಚು ಇರುತ್ತಾರೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಶೈಲಿಯನ್ನು ಕೊಂಡಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಡಾ.ಉಮೇಶ ಜಾಧವ ಅವರು ಮಾತನಾಡಿ, ತಿಂಗಳ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಲ್ಲಿಗೆ ಬಂದಾಗ ಸ್ಥಳೀಯ ಮುಖಂಡರು ಭತ್ತ ಖರೀದಿ ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದರು. ಕೇಂದ್ರ ತೆರೆಯುವ ಕುರಿತು ಅಂದು ನಾನು ಮತ್ತು ಶಾಸಕ ರಾಜಕುಮಾರ ತೇಲ್ಕೂರ ಅವರು ಭರವಸೆ ನೀಡಿದ್ದೇವು. ಅದರಂತೆ ಇಂದು ಖರೀದಿ ಕೇಂದ್ರ ಆರಂಭಿಸಲಾಗಿದೆ. ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದೆ. ಸರ್ಕಾರದ ಆಶಯದಂತೆ ಇಲ್ಲಿನ ಡಿ.ಸಿ. ಯಶವಂತ ವಿ. ಗುರುಕರ್ ಅವರು ಹಗಲು-ರಾತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಕೇAದ್ರ ಸರ್ಕಾರವು ವಿಶೇಷವಾಗಿ ರೈತಾಪಿ, ಶ್ರಮಿಕ, ಕೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಇ-ಶ್ರಮ್ ಕಾರ್ಡ್ ವಿತರಿಸಲಾಗುತ್ತಿದೆ. ಈ ಕಾರ್ಡ್ ಪಡೆಯುವ ಫಲಾನುಭವಿಗೆ ಅಕಾಲಿಕ ನಿಧನ ಹೊಂದಿದಲ್ಲಿ 2 ಲಕ್ಷ ರೂ. ಜೀವ ವಿಮೆ ಮತ್ತು ಭಾರಿ ಅಪಘಾತವಾದಲ್ಲಿ 1 ಲಕ್ಷ ರೂ. ವರೆಗೆ ಪರಿಹಾರ ನೀಡಲಾಗುತ್ತದೆ. ಈ ಭಾಗದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ತಾಲೂಕಿನ ಆಡಳಿತ ವರ್ಗವು ಈ ಬಗ್ಗೆ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾತನಾಡಿ ಭತ್ತ ಖರೀದಿ ಕೇಂದ್ರದಲ್ಲಿ ಇದುವರೆಗೂ 95 ಜನ ನೊಂದಾಯಿಸಿಕೊAಡಿದ್ದಾರೆ. 3000 ನೋಂದಣಿ ಗುರಿ ಹೊಂದಲಾಗಿದೆ. ಗರಿಷ್ಟ 40 ಕ್ವಿಂಟಾಲ್ ಭತ್ತ ಮಾರಾಟ ಮಾಡಬಹುದು. ನಾನು ರೈತಾಪಿ ಕುಟುಂಬದಿAದ ಬಂದಿದ್ದು, ನಿಮ್ಮ ಏನೇ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ. ಬಗೆಹರಿಸುವ ಪ್ರಯತ್ನ ಮಾಡುವೆ ಎಂದರು.
ಹಾಲು ಕರೆಯುವ ಯಂತ್ರ ವಿತರಣೆ: ಪಶುಸಂಗೋಪನಾ ಇಲಾಖೆಯಿಂದ ಶೇ.90 ಸಹಾಯಧನದೊಂದಿಗೆ ರೈತ ಮಹಿಳೆ ಸುಮಿತ್ರಮ್ಮ ಅಂಜಲಪ್ಪ ಮದಕಲ್ ಅವರಿಗೆ ಹಸು ಹಾಲು ಕರೆಯುವ ಯಂತ್ರವನ್ನು ಶಾಸಕ-ಸಂಸದರು ವಿತರಿಸಿದರು.
ಕಾರ್ಯಾದೇಶ ವಿತರಣೆ: ಸರ್ಕಾರದ ಸಹಾಯಧನ 18632 ರೂ. ಜೊತೆಗೆ ಫಲಾನುಭವಿಯ ವೆಚ್ಚ 2070 ರೂ. ಸೇರಿ ಪ್ರತಿಹೆಕ್ಟೇರ್‌ಗೆ 20702 ರೂ. ಗಳಂತೆ ಕೃಷಿ ಬೆಳೆಗಳಿಗೆ ಉಪಯೋಗಿಸುವ ತುಂತುರು ನೀರಾವರಿ ಘಟಕ ಅಳವಡಿಕೆಗೆ ಐದು ಜನ ರೈತರಿಗೆ ಸಾಂಕೇತಿಕವಾಗಿ ಕಾರ್ಯಾದೇಶವನ್ನು ವಿತರಿಸಲಾಯಿತು.
ರೈತರಿಂದ ಡಿ.ಸಿ.ಗೆ ಸನ್ಮಾನ: ಸ್ವಾತಂತ್ರ ಪಡೆದ 75 ವರ್ಷವಾದರೂ ಖಂಡೆರಾಯನಪಲ್ಲಿಗೆ ಜಿಲ್ಲಾಧಿಕಾಶರಿಗಳು ಬಂದಿಲ್ಲ. ಶನಿವಾರ ಮನೆ ಬಾಗಿಲಿಗೆ ಬಂದು ಕಂದಾಯ ದಾಖಲೆಗಳನ್ನು ನೀಡಿದ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರಿಗೆ ಗ್ರಾಮದ ರೈತರು ಆತ್ಮೀಯವಾಗಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಪ್ರಭಾರಿ ಸಹಾಯಕ ಆಯುಕ್ತೆ ಸುರೇಖಾ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಗುಣಕಿ, ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ಕೃಷಿ ಇಲಾಖೆಯ ಉಪನಿರ್ದೇಶಕ ಸಮದ್ ಪಟೇಲ್, ಸಹಾಯಕ ನಿರ್ದೇಶಕ ಹಂಪಣ್ಣ ಚವ್ಹಾಣ, ಸಹಕಾರ ಇಲಾಖೆಯ ಸಹಾಯಕ ನಿಬಂಧಕ ರವಿಂದ್ರ, ಸೇಡಂ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಮಾರುತಿ ನಾಯಕ್, ಮುಖಂಡರಾದ ಪರ್ವತರೆಡ್ಡಿ ಪಾಟೀಲ, ನಾಗರೆಡ್ಡಿ ದೇಶಮುಖ, ಸಿದ್ದಯ್ಯ ಸ್ವಾಮಿ ನಾಡೆಪಲ್ಲಿ, ನಾಗೇಂದ್ರಪ್ಪ ಸಾಹುಕಾರ, ಓಂಪ್ರಕಾಶ ಪಾಟೀಲ ಸೇರಿದಂತೆ ಇನ್ನಿತರ ಅಧಿಕಾರಿಗಳು, ಮುಖಂಡರು, ಸಾರ್ವಜನಿಕರು ಇದ್ದರು.

LEAVE A REPLY

Please enter your comment!
Please enter your name here