ಕಲಬುರಗಿ,ಮಾ.11:ಜನರ ಬಾಗಿಲೆಗೆ ಕಂದಾಯ ಇಲಾಖೆಯ ಸೇವೆಗಳನ್ನು ಉಚಿತವಾಗಿ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ “ಕಂದಾಯ ದಾಖಲೆ ಮನೆ ಬಾಗಿಲಿಗೆ” ಶನಿವಾರದಿಂದಲೆ (ಮಾರ್ಚ್ 12 ರಿಂದ) ಜಿಲ್ಲೆಯಾದ್ಯಂತ ಜಾರಿಗೆ ತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದರು.
ಅವರು ಇಂದು ಶುಕ್ರವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡುತ್ತ ಈ ಮಾಹಿತಿ ನೀಡಿದ್ದು ಅಲ್ಲದೇ “ಕಂದಾಯ ದಾಖಲೆ ಮನೆ ಬಾಗಿಲಿಗೆ” ಯೋಜನೆಗೆ ಶನಿವಾರ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಅವರು ಚಿಕ್ಕಬಳ್ಳಾಪೂರದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಗಡಿ ಭಾಗವಾದ ಸೇಡಂ ತಾಲೂಕಿನ ಮುಧೋಳ ಹೋಬಳಿಯ ಖಂಡೆರಾಯನಪಳ್ಳಿಯಲ್ಲಿ ಇದಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ 5 ಲಕ್ಷ ಪಹಣಿ ಹಕ್ಕುಳವರಿದ್ದು, ಈ ಪೈಕಿ ಪಿ.ಎಂ-ಕಿಸಾನ್ ಯೋಜನೆಯಡಿ ನೋಂದಾಯಿಸಿದ 1.5 ಲಕ್ಷ ಕುಟುಂಬಗಳಿಗೆ 277867 ಪಹಣಿ, 104264 ಅಟ್ಲಾಸ್ ಮ್ಯಾಪ್, 432746 ಜಾತಿ-ಆದಾಯ ಪ್ರಮಾಣ ಪತ್ರಗಳನ್ನು ವಿಳಾಸ ಲೇಬಲ್ ಸಂಖ್ಯೆ ಜೊತೆಗೆ ಪ್ಲಾಸ್ಟಿಕ್ ಕವರ್ ರಕ್ಷೆಯೊಂದಿಗೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಜಿಲ್ಲೆಯಾದ್ಯಂತ ಶನಿವಾರದಿಂದ ಮನೆ ಬಾಗಿಲಿಗೆ ಹೋಗಿ ವಿತರಿಸಲಿದ್ದಾರೆ ಎಂದರು.
ಈ ಎಲ್ಲಾ ದಾಖಲೆಗಳನ್ನು ಪಡೆಯಲು ಸಾಮಾನ್ಯವಾಗಿ ನೆಮ್ಮದಿ ಕಚೇರಿಯಲ್ಲಿ ಸುಮಾರು 100 ರೂ. ತಗುಲುತ್ತದೆ. ಅದರೆ ಸರ್ಕಾರ ಈ ಯೋಜನೆಯಡಿ ರೈತಾಪಿ ವರ್ಗಕ್ಕೆ ಇವುಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಕೆಲವೊಮ್ಮೆ ರೈತಾಪಿ ವರ್ಗಕ್ಕೆ ತಮ್ಮ ದಾಖಲೆಗಳ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದೆ ಅಸ್ತಿ ಮಾರಾಟ, ವರ್ಗಾವಣೆ ಸಂದರ್ಭದಲ್ಲಿ ಅನುಭವಿಸುವ ತೊಂದರೆಗಳನ್ನು ಇದು ನಿವಾರಿಸಲಿದೆ ಎಂದರು.
ಕುಡಿಯುವ ನೀರಿಗೆ 35 ಲಕ್ಷ ರೂ. ಬಿಡುಗಡೆ; ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಪ್ರದೇಶಗಳಿಗೆ ನೀರು ಸರಬರಾಜಿಗೆ 35 ಲಕ್ಷ ರೂ. ಅನುದಾನ ಜಿಲ್ಲೆಯ ಎಲ್ಲಾ ಪೌರ ಸಂಸ್ಥೆಗಳು ಮತ್ತು ತಾಲೂಕು ಪಂಚಾಯತಿಗಳಿಗೆ ಬಿಡುಗಡೆ ಮಾಡಿದೆ ಎಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.