ಕಲಬುರಗಿ,ಮಾ.10:ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೇ ಮಾ. 12 ರಿಂದ 16ರ ವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದ್ದು, ಜಿಲ್ಲೆಯಲ್ಲಿ 20760 ಜನ ಪರೀಕ್ಷೆ ಬರೆಯಲು ನೋಂದಾಯಿಸಿಕೊAಡಿದ್ದಾರೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದರು.
ಗುರುವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ನಗರದ 11 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನಕಲು ತಡೆಗಟ್ಟಲು ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ. ಪ್ರತಿ ಕೇಂದ್ರದಲ್ಲಿ ಓರ್ವ ಪ್ರಶ್ನೆ ಪತ್ರಿಕೆ ಪಾಲಕರು ಮತ್ತು ಇಬ್ಬರನ್ನು ಜಾಗೃತ ದಳದ ಸದಸ್ಯರಿರಲಿದ್ದಾರೆ. ಇದಲ್ಲದೆ ಪ್ರತಿ ಕೇಂದ್ರಕ್ಕೆ ಮೂವರಂತೆ 33 ಜನ ಪೊಲೀಸ್ ಸಿಬ್ಬಂದಿಯನ್ನು ತಪಾಸಣೆಗೆ ನಿಯೋಜಿಸಲಾಗಿದೆ. ಖಜಾನೆಯಿಂದ ಪರೀಕ್ಷಾ ಕೇಂದ್ರಕ್ಕೆ ಪಶ್ನೆ ಪತ್ರಿಕೆ ಕೊಂಡೊಯ್ಯುವಾಗ ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದರು.
ಮಾ.12 ರಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆ ವರೆಗೆ ಕಡ್ಡಾಯ ಪತ್ರಿಕೆ-3(ಸಾಮಾನ್ಯ ಜ್ಞಾನ) ಮತ್ತು ಮಾ.13 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ಗಂಟೆ ವರೆಗೆ ಕಡ್ಡಯಾ ಪತ್ರಿಕೆ-1(ಕನ್ನಡ) ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆ ವರೆಗೆ ಕಡ್ಡಾಯ ಪತ್ರಿಕೆ-2(ಇಂಗ್ಲೀಷ್) ವಿಷಯದ ಪರೀಕ್ಷೆ ನಡೆಯಲಿದೆ.
ಮಾ.14 ರಿಂದ 16ರ ವರೆಗೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆ ವರೆಗೆ ಐಚ್ಛಿಕ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಪರೀಕ್ಷೆಯ ವೇಳಾಪಟ್ಟಿ ಕುರಿತು ಜಿಲ್ಲಾಧಿಕಾರಿಗಳು ವಿವರಿಸಿದರು.
ಸಿ.ಸಿ.ಟಿ.ವಿ. ಕಣ್ಗಾವಲಿನಲ್ಲಿ ಪರೀಕ್ಷೆ;
11 ಕೇಂದ್ರಗಲ್ಲಿ ಸಿ.ಸಿ.ಟಿ.ವಿ. ಅಳವಡಿಸಲಾಗಿದೆ. ನಕಲು ಮಾಡಿರುವ ಬಗ್ಗೆ ವರದಿಯಾದರೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ. ಹೀಗಾಗಿ ನಕಲು ತಡೆಗೆ ಎಲ್ಲಾ ಕ್ರಮ ಕೈಗೊಂಡಿದೆ. ಹಿಂದಿನ ಎಫ್.ಡಿ.ಎ. ಸೇರಿದಂತೆ ಇತರೆ ಪರೀಕ್ಷೆಯಲ್ಲಿ ನಕಲು ಪ್ರಕರಣದಲ್ಲಿ ಭಾಗಿಯಾದವರನ್ನು ಗುರುತಿಸಲಾಗಿದ್ದು, ಮುನ್ನೆಚ್ಚರಿಕೆಯಾಗಿ ಇಂದಿನಿAದ ಅವರನ್ನು ಬಂಧಿಸಲಾಗುತ್ತಿದೆ ಎಂದು ಡಿ.ಸಿ. ಯಶವಂತ ವಿ.ಗುರುಕರ್ ತಿಳಿಸಿದರು.
ಹಾಲ್ ಟಿಕೇಟ್ ಜೊತೆಗೆ ಸರ್ಕಾರದಿಂದ ಮಾನ್ಯ ಮಾಡಿದ ಯಾವುದಾದರು ಒಂದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪರೀಕ್ಷೆಗೆ ತಂದಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಇದಲ್ಲದೆ ಅಭ್ಯರ್ಥಿಗಳು ಕಡ್ಡಾಯವಾಗಿ ಸರ್ಜಿಕಲ್ ಮಾಸ್ಕ್ ಮಾತ್ರ ಧರಿಸಿಕೊಂಡು ಪರೀಕ್ಷೆ ಬರೆಯಬೇಕು. ಎನ್.95 ಮತ್ತು ಕಾಟನ್ ಮಾಸ್ಕ್ ಹಾಕಿಕೊಂಡು ಬಂದಲ್ಲಿ ಪ್ರವೇಶ ನೀಡುವುದಿಲ್ಲ.
ಮೊಬೈಲ್ ಸೇರಿ ಎಲೆಕ್ಟ್ರಾನಿಕ್ ವಸ್ತು ನಿಷೇಧ;
ಮೋಬೈಲ್, ಇಯರ್ ಪೋನ್, ಕೈಗಡಿಯಾರ, ಬ್ಲೂಟೂಥ್, ಪೆನ್ ಡ್ರೈವ್, ಮೈಕ್ರೋಫೋನ್ ಸೇರಿದಂತೆ ಇತರೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೊಠಡಿಯಲ್ಲಿ ಕೊಂಡೊಯ್ಯವುದನ್ನು ನಿಷೇಧಿಸಲಾಗಿದೆ. ಇದಲ್ಲದೆ ಲೇಖನ ಸಾಮಗ್ರಿಗಳಾದ ಪೆನ್ಸಿಲ್, ಎರೇಸರ್, ಕ್ಯಾಲ್ಕುಲೇಟರ್, ಮಾಪಕ, ಜಾಮೇಟ್ರಿ ಬಾಕ್ಸ್, ಸ್ಟೇಷನರಿ, ಪೇಪರ್, ಲಾಗ್ ಟೇಬಲ್ ಗಳು ಸೇರಿದಂತೆ ಯಾವುದೇ ವೈಯಕ್ತಿಕ ವಸ್ತುಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ. ಕುಡಿಯುವ ನೀರಿನ ಬಾಟಲ್ ಮಾತ್ರ ಕೊಠಡಿಯೊಳಗೆ ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ.
ಪುರುಷರಿಗೆ ಡ್ರೆಸ್ ಕೋಡ್:
ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಡ್ರೆಸ್ ಕೋಡ್ ನಿಗದಿಪಡಿಸಿದೆ. ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್ಗಳು-ಟಿ.ಶರ್ಟ್ ಗಳನ್ನು ಧರಿಸಿಕೊಂಡು ಬರಬೇಕು. ಪೂರ್ಣ ತೋಳಿನ ಶರ್ಟ್ ಧರಿಸಿಕೊಂಡು ಬರಬಾರದು. ಧರಿಸುವ ಬಟ್ಟೆಗಳು ಹಗುರವಾಗಿರಬೇಕು. ಜಿಪ್ ಪಾಕೆಟ್ ಗಳು, ಪಾಕೆಟ್ ಗಳು, ದೊಡ್ಡ ಬಟನ್‌ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳು ಇರಬಾರದು. ಕುರ್ತಾ-ಪೈಜಾಮ ಹಾಕಿಕೊಳ್ಲುವಂತಿಲ್ಲ. ಶೂ ನಿಷೇಧಿಸಿದ್ದು, ತೆಳುವಾದ ಸ್ಯಾಂಡಲ್ ಅಥವಾ ಚಪ್ಪಲ್ ಧರಿಸಬೇಕು. ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣಗಳನ್ನು ಧರಿಸಬಾರದು. ಕಿವಿಯೋಲೆಗಳು, ಉಂಗುರಗಳು, ಕಡಗಗಳು ಹಾಕಿಕೊಳ್ಳುವಂತಿಲ್ಲ.
ಮಹಿಳೆಯರಿಗೆ ಡ್ರೆಸ್ ಕೋಡ್;
ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೊಗಳು, ಬ್ರೂಚ್ ಗಳು ಅಥವಾ ಬಟನ್ ಗಳನ್ನು ಹೊಂದಿರುವ ಡ್ರೆಸ್ ಗಳನ್ನು ಧರಿಸಬಾರದು. ಅರ್ಧ ತೋಳಿನ ಬಟ್ಟೆಗಳನ್ನು ಧರಿಸಬೇಕು. ಎತ್ತರದ ಹಿಮ್ಮಡಿಯ ಬೂಟುಗಳು ಮತ್ತು ದಪ್ಪವಾದ ಅಡಿಭಾಗ ಹೊಂದಿರದ ಬೂಟುಗಳನ್ನು ಹಾಕಬಾರದು. ಬದಲಿಗೆ ಸ್ಯಾಂಡಲ್ ಅಥವಾ ಚಪ್ಪಲಿಗಳನ್ನು ಬಳಸುವುದು. ಕಡಿಮೆ ಹಿಮ್ಮಡಿಯ ಪಾದರಕ್ಷೆಗಳನ್ನು ಅನುಮತಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು ಕಿವಿಯೋಲೆಗಳು, ಉಂಗುರಗಳು, ಪೆಂಟೆAಟ್ ಗಳು, ನೆಕ್ಲೇಸ್‌ಗಳು, ಬಳೆಗಳು ಸೇರಿದಂತೆ ಯಾವುದೇ ರೀತಿಯ ಲೋಹದ ಅಭರಣಗಳನ್ನು ಧರಿಸುವುದನ್ನು ನಿಷೇಧಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಇದ್ದರು
Home Featured Kalaburagi ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ; ಜಿಲ್ಲೆಯಲ್ಲಿ 20760 ಜನ ಅಭ್ಯರ್ಥಿಗಳ ನೋಂದಣಿ