ಗಂಭೀರ ಆರೋಪದ ವ್ಯಕ್ತಿ ಹತ್ಯೆ ಸರಕಾರ 25 ಲಕ್ಷ ಪರಿಹಾರ ಖರ್ಗೆ ಆಕ್ಷೇಪ

0
834

ಕಲಬುರಗಿ, ಮಾ. 09:ಇತ್ತೀಚಿಗೆ ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷನ ಕುಟುಂಬಕ್ಕೆ ಸರ್ಕಾರ ರೂ 25 ಲಕ್ಷ ಪರಿಹಾರ ನೀಡಿರುವುದರ ಹಿಂದಿನ ಅಜೆಂಡಾ ಏನು ? ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು ಹತ್ಯೆಯಾದ ಯುವಕನ ವಿರುದ್ದ ಹಲವಾರು ಗಂಭೀರ ಕೇಸುಗಳಿದ್ದವು. 2020 ರಲ್ಲಿ ಬಿಜೆಪಿ ಸರ್ಕಾರವೇ ಆತನನ್ನ ಜೈಲಿಗಟ್ಟಿತ್ತು. ಜೊತೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರೇ ಇದೊಂದು ವೈಯಕ್ತಿಕ ಕಾರಣಗಳಿಂದಾಗಿ ನಡೆದ ಕೊಲೆ ಎಂದಿದ್ದಾರೆ. ಆದರೂ ಕೂಡಾ ಪರಿಹಾರ ಹಣ ನೀಡಿದ್ದು ಯಾಕೆ? ಯಾವ ನಿಯಮಗಳ ಅಡಿಯಲ್ಲಿ ಸಾರ್ವಜನಿಕರ ಹಣವನ್ನು ನೀಡಲಾಗಿದೆ? ಹೀಗೆ ವೈಯಕ್ತಿಕ ದ್ವೇಷಕ್ಕೆ ಮೃತಪಟ್ಟವರಿಗೆ ಇದೇ ರೀತಿ ಸರ್ಕಾರ ಪರಿಹಾರ ನೀಡುತ್ತದೆಯೇ ? ಎಂದು ಪ್ರಶ್ನಿಸಿದ್ದಾರೆ.
ನೆರೆ ಸಂತ್ರಸ್ತರಿಗೆ, ಕೋವಿಡ್ ನಿಂದ ಮೃತರಾದವರಿಗೆ ಪರಿಹಾರ ನೀಡಲು ಸತಾಯಿಸುವ ಸರ್ಕಾರ ತಮ್ಮ ಪಕ್ಷದ ಕಾರ್ಯಕರ್ತನ ಕುಟುಂಬಕ್ಕೆ ಹೇಗೆ ರೂ 25 ಲಕ್ಷ ನೀಡಿದೆ ಎಂದು ಖರ್ಗೆ ಅಚ್ಚರಿ ಪಟ್ಟಿದ್ದಾರೆ.
ಪರಿಹಾರ ನೀಡುವಲ್ಲಿ ಸರ್ಕಾರದ ತಾರತಮ್ಯ ಧೋರಣೆಯನ್ನು ಕಟುವಾಗಿ ಟೀಕಿಸಿರುವ ಪ್ರಿಯಾಂಕ್ ಅವರು ಹೀಗೆ ಉದಾರ ಮನಸಿದ್ದರೆ ಧರ್ಮಸ್ಥಳದಲ್ಲಿ ಬಿಜೆಪಿ ಮುಖಂಡನಿAದ ಹತ್ಯೆ ಯಾದ ದಲಿತ ಯುವಕ ದಿನೇಶ್ ಕುಟುಂಬಕ್ಕೆ ಪರಿಹಾರ ಏಕೆ ನೀಡಿಲ್ಲ? ಕೊಡಗಿನ ಯೋಧನ ಕುಟುಂಬಕ್ಕೆ ಏಕಿಲ್ಲ? ಎಂದಿದ್ದಾರೆ.
ಅನಾರೋಗ್ಯ ಪೀಡಿತರಿಗೆ, ಬಡವರ ನೆರವಿಗೆ, ಯೋಧರ ಕುಟುಂಬಗಳಿಗೆ ಬಳಸಬಹುದಾದ ‘ ವಿವೇಚನೆ ‘ ಯನ್ನು ತಮ್ಮ ಪಕ್ಷದ ಕೆಡರ್ ಒಬ್ಬನಿಗೆ ಬಳಸಿದ್ದು ಸಿಎಂ ಯೋಚನೆ, ವಿವೇಚನೆ ಎಂತದ್ದು ಎಂದು ತಿಳಿಸುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಪಕ್ಷದ ಮೂಲಕ 25 ಲಕ್ಷವಲ್ಲ 25 ಕೋಟಿಯಾದರೂ ಕೊಡಲಿ, ಆದರೆ ಸರ್ಕಾರದ ಹಣ ದುರ್ಬಳಕೆಗೆ ಅಧಿಕಾರ ಕೊಟ್ಟವರು ಯಾರು ? ಗಾಂಧಿಯ ಕೊಲೆಗಾರ ಗೋಡ್ಸೆಯಲ್ಲಿ ದೇಶಭಕ್ತಿ ಕಾಣುವ ವ್ಯಕ್ತಿಯ ಸಾವಿಗೆ 25 ಲಕ್ಷ ನೀಡಿದ ಸರ್ಕಾರ, ದೇಶದ ಗಡಿ ಕಾಯುತ್ತ ವೀರಮರಣವನ್ನಪ್ಪಿದ ಯೋಧ ಅಲ್ತಾಫ್ ಅವರ ಕುಟುಂಬಕ್ಕೆ ಎಷ್ಟು ಪರಿಹಾರ ನೀಡಿದೆ?
ದೇಶಭಕ್ತಿಯ ವ್ಯಾಖ್ಯಾವನ್ನು ಬಿಜೆಪಿ ಸರ್ಕಾರ ಬದಲಿಸಿದೆಯೇ ? ಎಂದು ಪಶ್ನಿಸಿರುವ ಶಾಸಕರು, ಗೋಡ್ಸೆ ಆರಾಧಕನಿಗೆ ಹಣ ನೀಡುವ ಮೂಲಕ ಗಾಂಧಿ ಹತ್ಯೆಯನ್ನು ಬಿಜೆಪಿ ಅನುಮೋದಿಸುತ್ತದೆಯೇ? ಎಂದು ಕಟುವಾಗಿ ಟೀಕಿಸಿದ್ದಾರೆ.

LEAVE A REPLY

Please enter your comment!
Please enter your name here