ಖ್ಯಾತ ಗಾಯಕಿ, ಭಾರತದ ಕೋಗಿಲೆ `ಲತಾ ಮಂಗೇಶ್ಕರ್ ಇನ್ನಿಲ್ಲ

0
613

ಮುಂಬೈ , ಫೆ.6-: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (92) ಅವರು ಇಂದು ನಿಧನರಾಗಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಲತಾ ಮಂಗೇಶ್ವಕರ್ ಅವರಿಗೆ ಜನವರಿ 8ರಂದು ಕೊವಿಡ್ ಕಾಣಿಸಿಕೊಂಡಿತ್ತು. ನಂತರ ಅವರಿಗೆ ನ್ಯುಮೋನಿಯಾ ಕೂಡ ಕಾಣಿಸಿಕೊಂಡಿತ್ತು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.
ಶಾಸ್ತ್ರೀಯ-ಸಂಗೀತಕಾರ ಮತ್ತು ರಂಗ-ನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಅವರ ಪುತ್ರಿ, ಲತಾ ಮಧ್ಯಪ್ರದೇಶದ ಇಂದೋರಿನಲ್ಲಿ ಜನಿಸಿದರು. ತಾಯಿಯನ್ನು ‘ಮಾಯಿ,’ ಎಂದೇ ಎಲ್ಲರೂ ಕರೆಯುತ್ತಿದ್ದರು.
ತಾಯಿಯ ತವರಿನ ಹೆಸರು ಸೇವಂತಾ. ದೀನಾನಾಥರದು ಎರಡನೆಯ ಮದುವೆ. ಮೊದಲ ಮದುವೆ, ‘ನರ್ಮದಾ’ ಜೊತೆ. ಆಕೆಯ ಮರಣದ ನಂತರ ತಂಗಿ ಶೇವಂತಾರ ಜೊತೆಗೆ ಮದುವೆಯಾಯಿತು. ಈಕೆಯ ಹೆಸರನ್ನು ‘ಶುದ್ಧಮತಿ’ ಎಂದು ಹೆಸರಿಟ್ಟರು. ‘ಬಲವಂತ್ ಸಂಗೀತ್ ಮಂಡಳಿ’ ಎಂಬ ಸಂಸ್ಥೆಯನ್ನು ದೀನಾನಾಥ್ ಅವರು ನಡೆಸುತ್ತಿದ್ದರು.
ದೀನಾನಾಥ್ ಒಳ್ಳೆಯ ನಟ, ಗಾಯಕ, ಕೃತಿಶೀಲ ಸಮಾಜಸೇವಕ. ಕೆಲವು ಕಾರಣಗಳಿಂದ ಕಂಪೆನಿ ಮುಚ್ಚಿತು. ದಂಪತಿಗಳಿಗೆ ಲತಾ, ಆಶಾ, ಮೀನಾ, ಉಷಾ ಎಂಬ ನಾಲ್ಕು ಹೆಣ್ಣು ಮಕ್ಕಳಲ್ಲದೆ ಹೃದಯನಾಥ್ ಎಂಬ ಗಂಡುಮಗ. ದೀನಾನಾಥ್ ಮನೆಯಲ್ಲಿ ಕೆಲವು ಮಕ್ಕಳಿಗೆ ಸಂಗೀತ ಪಾಠ ಹೇಳುತ್ತಿದ್ದರು. ಒಂದು ದಿನ ಒಬ್ಬ ಹುಡುಗ ಸಂಗೀತಾಭ್ಯಾಸ ಮಾಡುವಾಗ ತಪ್ಪುತ್ತಿದ್ದುದನ್ನು ಎಳೆಯ ವಯಸ್ಸಿನ ಲತಾ ತಿದ್ದುವುದನ್ನು ಗಮನಿಸಿದ ದೀನಾನಾಥ್ ಮಗಳಲ್ಲಿ ಸಂಗೀತದ ಪ್ರತಿಭೆ ಇರುವುದನ್ನು ಮನಗಂಡರು. ಮರುದಿನದಿಂದಲೇ ಅವರು ಮಗಳಿಗೆ ಮನೆಯಲ್ಲಿ ಸಂಗೀತಪಾಠ ಪ್ರಾರಂಭಿಸಿದರು.
ಲತಾ ಅವರ ಮೊದಲ ಹೆಸರು “ಹೇಮಾ” ಎಂದು. ಹೇಮಾಳ ಬಹುಮುಖಪ್ರತಿಭೆಯನ್ನು ತಂದೆ ಗುರುತಿಸಿ, ಒಮ್ಮೊಮ್ಮೆ ‘ಹೃದಯಾ’, ‘ಟಾಟಾಬಾಬಾ,’ ಎನ್ನುತ್ತಿದ್ದರು. “ಭಾವ್ ಬಂಧನ್” ನಾಟಕದಲ್ಲಿ ಮಾಡಿದ ಅಭಿನಯನದ ನಂತರ ಅವರ ಹೆಸರು ಲತಾ ಎಂದಾಯಿತು. ಲತಾಗೆ ಔಪಚಾರಿಕ ಶಿಕ್ಷಣವೇನೂ ದೊರೆಯಲಿಲ್ಲ. ಒಂದು ದಿನ ಶಾಲೆಗೆ ಹೋಗಿದ್ದರು. ಮರುದಿನ ತಮ್ಮ ತಂಗಿ ಆಶಾಳ ಜೊತೆ ಶಾಲೆಗೆ ಹೋದಾಗ ಶಿಕ್ಷಕರು ಗದರಿದರಂತೆ. ಸರಿ. ಲತಾ ಮುಂದೆ ಎಂದೂ ಶಾಲೆಯ ಮೆಟ್ಟಿಲು ಹತ್ತುವುದಿಲ್ಲವೆಂದು ಪಣತೊಟ್ಟರು. ಸಣ್ಣ-ಪುಟ್ಟ ನಾಟಕಗಳಲ್ಲಿ ಕಾಣಿಸಿಕೊಂಡರು.
# ಸಂಗೀತದ ಬದುಕು
ಲತಾ ಅವರು ಬಹುಶಃ ಹಿಂದಿಯ ಪ್ರತಿಯೊಬ್ಬ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಇದಕ್ಕೆ ಒಂದೇ ಅಪವಾದವೆಂದರೆ ಓ.ಪಿ. ನಯ್ಯರ್. ಅದೇ ರೀತಿ ಅವರೊಂದಿಗೆ ಹಿಂದಿಯ ಪ್ರತಿಯೊಬ್ಬ ಗಾಯಕನ ಜೊತೆಯೂ ಹಾಡಿದ್ದಾರೆ. ಹಿಂದಿ ಚಿತ್ರರಂಗದ ಬಹುತೇಕ ನಟಿಯಾರಿಗಾಗಿ ಲತಾ ಹಾಡಿದ್ದಾರೆ.
ಐವತ್ತರ ದಶಕದಲ್ಲಿ ಮೇಲೇರಿದ ಅವರ ಕೀರ್ತಿ ಪತಾಕೆ ಕೆಳಕ್ಕೆ ಇಳಿಯಲೇ ಇಲ್ಲ. ಗಜಲ್, ಪ್ರೇಮಗೀತೆ, ಭಜನೆ, ಜನಪದ ಗೀತೆ, ಯುಗಳಗೀತೆ, ಕ್ಲಬ್ ಸಾಂಗ್ … ಹೀಗೆ ಪ್ರತಿಯೊಂದೂ ಬಗೆಯ ಹಾಡುಗಳನ್ನು ಲತಾ ಹಾಡಿದ್ದಾರೆ. ಹಿಂದಿಯಲ್ಲದೆ ಭಾರತದ ಪ್ರತಿಯೊಂದು ಭಾಷೆಯಲ್ಲೂ ಅವರು ಹಾಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅವರನ್ನು “ಲತಾ ದೀದಿ” ಎಂದೇ ಕರೆಯುತ್ತಾರೆ.
ಲತಾ ಅವರು ವಿವಾಹವಾಗಲಿಲ್ಲ. ತಮ್ಮ ಜೀವನವನ್ನು ಸಂಗೀತಕ್ಕೇ ಮುಡಿಪಾಗಿಟ್ಟರು. ಲತಾ ಅವರ ಕುಟುಂಬದಲ್ಲಿ ಪ್ರತಿಯೊಬ್ಬರೂ ಸಂಗೀತ ಕ್ಷೇತ್ರದಲ್ಲಿರುವುದು ಒಂದು ವಿಶೇಷ. ಆಶಾ ಮತ್ತು ಲತಾ, ಉಷಾ ಮತ್ತು ಲತಾ, ಮೀನಾ ಮತ್ತು ಲತಾ ಹಾಡಿರುವ ಕೆಲವು ಯುಗಳಗೀತೆಗಳೂ ಪ್ರಸಿದ್ಧವಾಗಿವೆ. ತಮ್ಮ ಹೃದಯನಾಥ್ ಮಂಗೇಷ್ಕರ್ ಸಂಗೀತ ನಿರ್ದೇಶನದಲ್ಲಿ ಲತಾ ಅನೇಕ ಗೀತೆಗಳನ್ನು ಹಾಡಿದ್ದಾರೆ – ಉದಾ. ಮೀರಾ ಭಜನೆಗಳು. ಲತಾ ಅವರು “ಲೇಕಿನ್” ಎಂಬ ಕಲಾತ್ಮಕ ಚಿತ್ರವನ್ನು ನಿರ್ಮಿಸಿದರು.
ಚೀನಾ-ಭಾರತ ಯುದ್ಧದಲ್ಲಿ ಭಾರತದ ಅನೇಕ ಸೈನಿಕರು ತಮ್ಮ ಪ್ರಾಣ ತೆತ್ತರು. ಇವರ ನೆನಪಿನಲ್ಲಿ ಒಂದು ವಿಶೇಷಗೀತೆಯನ್ನು ಪ್ರದೀಪ್ ಎಂಬ ಕವಿ ರಚಿಸಿದರು. ಈ ಗೀತೆಯನ್ನು ಸಿ. ರಾಮಚಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಅವರು 1963 ಜನವರಿ 27ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಹಾಡಿದರು.
“ಐ ಮೇರೆ ವತನ್ ಕೇ ಲೋಗೋಂ, ಜರಾ ಆಂಖ್ ಮೇ ಭರಲೋ ಪಾನಿ … ” ಎಂದು ಪ್ರಾರಂಭವಾಗುವ ಗೀತೆಯನ್ನು ಕೇಳಿ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಕಣ್ಣಿನಲ್ಲಿ ನೀರಾಡಿತು. ಅವರು ಲತಾ ಮಂಗೇಶ್ಕರ್ ಅವರೊಂದಿಗೆ ಕಾರ್ಯಕ್ರಮದ ನಂತರ ಮಾತಾಡಿ “ನೀನು ನನ್ನನ್ನು ಅಳಿಸಿಬಿಟ್ಟೆ,” ಎಂದು ಭಾವುಕರಾಗಿ ಹೇಳಿದರಂತೆ. ಈ ಹಾಡನ್ನು ನವದೆಹಲಿಯಲ್ಲಿ ಪ್ರತಿ ಜನವರಿ 26ರ ಸಮಾರಂಭದಲ್ಲಿ ಕೇಳಬಹುದು.
10,000ಕ್ಕೂ ಹೆಚ್ಚು ಹಾಡುಗಳನ್ನು 22 ಭಾಷೆಗಳಲ್ಲಿ ಹಾಡಿದ್ದಾರೆ. ಅಮೆರಿಕ, ಯೂರೊಪ್ ಸುತ್ತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಆಕೆಯ ಹಾಡುಗಳ ವಿಶೇಷವೆಂದರೆ, ಅಸಾಧಾರಣ ಸ್ಪಷ್ಟ ಶಬ್ದೋಚ್ಚಾರ, ಶಾಸ್ತ್ರೀಯ ಸಂಗೀತದ ಸ್ವರಬದ್ಧ ಸಂಸ್ಕಾರ, ಗೀತೆಗಳ ಗುಣಮಟ್ಟ, ಸನ್ನಿವೇಶಕ್ಕೆ ನಟಿಯರ ಕಂಠಕ್ಕೆ ಸರಿಯಾಗಿ ಅಳವಡಿಸಿಹಾಡುವ ಕಲೆ. “ಪುಲೆ ವೇಚಿತಾ”- ಲತಾರವರ ಆತ್ಮಚರಿತ್ರೆ.
# ಪ್ರಶಸ್ತಿಗಳು
# 6 ವಿಶ್ವವಿದ್ಯಾಲಯಗಳ ಗೌರವ ಡಾಕ್ಟೊರೇಟ್ (ನ್ಯೂಯಾರ್ಕ್ ವಿಶ್ವವಿದ್ಯಾಲಯವೂ ಸೇರಿದಂತೆ).

ಭಾರತರತ್ನ

ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು

ಶಾಂತಿನಿಕೇತನದಿAದ ದೇಶಿಕೋತ್ತಮ ಪ್ರಶಸ್ತಿ

ಆಸ್ಥಾನ ವಿದ್ವಾನ್, ತಿರುಪತಿ ದೇವಸ್ಥಾನಮ್

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಪದ್ಮಭೂಷಣ

ಫ್ರಾನ್ಸ್ ಸರ್ಕಾರ ನೀಡುವ ’ಆಫೀಸರ್ ಆಫ್ ದ ಲೀಜಿಯನ್ ಆಫ್ ಆನರ್’ ಪ್ರತಿಷ್ಠಿತ ಪ್ರಶಸ್ತಿ

LEAVE A REPLY

Please enter your comment!
Please enter your name here