ಕಲಬುರಗಿ,ಜ.13:ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯಲ್ಲಿ ಕಳೆದ 10 ವರ್ಷಗಳಿಂದ ಭರ್ತಿಯಾಗದೇ ಉಳಿದಿರುವ ಖಾಲಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಎಸ್. ಪಾಟೀಲ್ ತಿಳಿಸಿದರು.
ಬುಧವಾರ ನಗರದ ಕೋಟನೂರ (ಡಿ)ಯಲ್ಲಿ ಸಂಸ್ಥೆಯ ನೂತನ ಗುಣ ನಿಯಂತ್ರಣ ತರಬೇತಿ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಲಿ ಹುದ್ದೆಗಳಲ್ಲಿ ಹೊರ ಗುತ್ತಿಗೆ ಹಾಗೂ ಎರವಲು ಸೇವೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವುದರಿಂದ ಖಾಯಂ ನೇಮಕಾತಿ ಮಾಡಿಕೊಳ್ಳಲು ಮುಖ್ಯಮಂತ್ರಿಗಳ ಜತೆ ಚರ್ಚಿಸುವುದಾಗಿ ತಿಳಿಸಿದರು.
ಕೋವಿಡ್ ಸಂಕಷ್ಟದ ನಡುವೆಯೂ ಬಾಗಲಕೋಟೆ, ಗದಗ, ವಿಜಯಪುರ, ಹಾವೇರಿಯಲ್ಲಿ ಸಂಸ್ಥೆಯ ತರಬೇತಿ ಕೇಂದ್ರ ನಿರ್ಮಿಸಿದೆ. ಅದರಂತೆ ಇಂದು ಕಲಬುರಗಿಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕೇಂದ್ರವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಉದ್ಘಾಟಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ಬೆಳಗಾವಿ, ದಾವಣಗೆರೆ, ಮೈಸೂರು, ಬಳ್ಳಾರಿ ಹಾಗೂ ವಿಜಯಪುರ ಜಿಲ್ಲೆಯ ಆಲಮೇಲ್ ದಲ್ಲಿಯೂ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತದೆ ಎಂದರು.
ಸಿಂದಗಿಯಲ್ಲಿ ತಳಿ ಶುದ್ಧತಾ ಪರೀಕ್ಷಾ ಕೇಂದ್ರ;
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಲ್ ಮೇಲ್ ನಲ್ಲಿ 1.5 ಕೋಟಿ ರೂ. ವೆಚ್ಚದಿಂದ 5 ಎಕರೆ ಪ್ರದೇಶದಲ್ಲಿ ತಳಿ ಶುದ್ಧತಾ ಪರೀಕ್ಷಾ ಕೇಂದ್ರ ಸಹ ನಿರ್ಮಿಸಲಾಗುತ್ತಿದೆ ಎಂದು ವಿಜುಗೌಡ ಎಸ್. ಪಾಟೀಲ ತಿಳಿಸಿದರು.
ನಕಲಿ ಬೀಜ, ಕಠಿಣ ಕ್ರಮ;
ನಕಲಿ ಬೀಜ ಪೂರೈಸಿದ ಕಂಪನಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಈಗಾಗಲೇ ಚರ್ಚಿಸಲಾಗಿದೆಯಲ್ಲದೇ ನಿರಂತರ ದಾಳಿ ನಡೆಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕರಣಕರಶೆಟ್ಟಿ, ಜಂಟಿ ನಿರ್ದೇಶಕ ಲಕ್ಷ್ಮಣ ಇದ್ದರು.