ಅನ್ನದಾತ ರೈತರ ಸಂರಕ್ಷಣೆಗೆ ಬದ್ಧ-ಬಿ.ಸಿ.ಪಾಟೀಲ

0
793

ಕಲಬುರಗಿ,ಜ.12:ಅನ್ನದಾತ ರೈತರ ಸಂರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ರೈತರ ಆದಾಯ ದ್ವಿಗುಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಬುಧವಾರ ನಗರದ ಆಳಂದ ರಸ್ತೆಯಲ್ಲಿರುವ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ 5.45 ಕೋಟಿ ರೂ. ವೆಚ್ಚದಲ್ಲಿ ಮಹಾವಿದ್ಯಾಲಯದ ವಿಸ್ತರಣಾ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿದ ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಕದ ರೈತರ ಬಗ್ಗೆ ಸರ್ಕಾರಕ್ಕೆ ವಿಶೇಷ ಕಾಳಜಿ ಇದೆ. ವಿಧಾನಸೌಧದಲ್ಲಿ ಕೂತು ಕೆಲಸ ಮಾಡುವ ಸರ್ಕಾರ ಇದಲ್ಲ, ರೈತರ ಬಾಗಿಲಿಗೆ, ಹೊಲಗಳಿಗೆ ಸರ್ಕಾರ ಹೋಗಲಿದೆ ಎಂದ ಅವರು ಮುಂದಿನ ದಿನದಲ್ಲಿ ಕಲಬುರಗಿಗೆ ಬಂದು ಒಂದು ರೈತರೊಂದಿಗಿದ್ದು, ಅವರ ಸಂಕಷ್ಟಗಳನ್ನು ಆಲಿಸುವೆ ಎಂದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿದ ಕೂಡಲೆ ಜಾತಿ-ಧರ್ಮ ನೋಡದೆ ರೈತರ ಮಕ್ಕಳ ಉನ್ನತ ವ್ಯಾಸಂಗ ಮಾಡಬೇಕು ಎಂಬ ಕಾರಣದಿಂದ 2500 ರೂ. ಗಳಿಂದ 11500 ರೂ. ವರೆಗೆ ವಿದ್ಯಾರ್ಥಿ ವೇತನ ಘೋಷಿಸಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ 8 ರಿಂದ 10ನೇ ತರಗತಿ ಓದುವ ರೈತರ ಹೆಣ್ಣು ಮಕ್ಕಳಿಗೆ ವಾರ್ಷಿಕ 3000 ರೂ. ವಿದ್ಯಾರ್ಥಿ ವೇತನವು ಜಾತಿಗೊಳಿಸಲಾಗಿದೆ. ಒಟ್ಟಾರೆಯಾಗಿ ರೈತಾಪಿ ಕುಟುಂಬವನ್ನು ಮೇಲಕ್ಕೆತ್ತುವ ಸರ್ವ ಪ್ರಯತ್ನ ನಡೆದಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು ಮಾತನಾಡಿ ಕೃಷಿ ಮಹಾವಿದ್ಯಾಲಯಕ್ಕೆ ಮುಖ್ಯ ರಸ್ತೆಯಿಂದ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೆ.ಕೆ.ಅರ್.ಡಿ.ಬಿ. ಯಿಂದ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಂಸದ ಡಾ. ಉಮೇಶ ಜಿ. ಜಾಧವ, ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಉಮೇಶ ಜಾಧವ, ವಿಧಾನ ಪರಿಷತ್ ಶಾಸಕರಾದ ಡಾ. ಬಿ.ಜಿ.ಪಾಟೀಲ, ಶಶೀಲ ಜಿ. ನಮೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಭೀಮರಾಯನಗುಡಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕೃಷ್ಣ ಮೇಲ್ದಂಡೆ ಯೋಜನೆ (ಕಾಡಾ) ಅಧ್ಯಕ್ಷ ಶರಣಪ್ಪ ತಳವಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್,
ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ, ವಿ.ವಿ. ವ್ಯವಸ್ಥಾಪನಾ‌ ಮಂಡಳಿ ಸದಸ್ಯರಾದ ಕೊಟ್ರಪ್ಪ ಬಿ. ಕೋರೆರ, ತ್ರಿವಿಕ್ರಮ ಜೋಷಿ, ಸುನೀಲ ವರ್ಮಾ, ಕೃಷಿ ಸಚಿವರ ತಾಂತ್ರಿಕ ಸಲಹೆಗಾರ ಎ.ಬಿ.ಪಾಟೀಲ, ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರು, ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಸುರೇಶ ಎಸ್.ಪಾಟೀಲ ಸೇರಿದಂತೆ ನುರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು.

LEAVE A REPLY

Please enter your comment!
Please enter your name here