ಶತಪ್ರತಿಶತ ಲಸಿಕಾಕರಣರಕ್ಕೆ ಶಾಸಕ ರೇವೂರ ಕರೆ

0
826

ಕಲಬುರಗಿ,ಜ.10: ಎಲ್ಲಾ ಜನರು ಮುಂದೆ ಬಂದು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಶೇಕಡ 100 ರಷ್ಟು ಲಸಿಕಾಕರಣ ಸಾಧಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಶಾಸಕ ದತ್ತಾತ್ರೇಯ ಪಾಟೀಲ್ ಸಿ. ರೇವೂರ ಅವರು ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಅಶೋಕ ನಗರದ ನಗರ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಮುನ್ನೆಚ್ಚರಿಕಾ ಲಸಿಕೆ (ಬೂಸ್ಟರ್ ಡೋಸ್) ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಮೊದಲನೇ ಕೋವಿಡ್ ಲಸಿಕೆ ಶೇಕಡ 92ರಷ್ಟು ಹಾಗೂ 2ನೇ ಡೋಸ್ ಶೇಕಡ 70ರಷ್ಟು ಹಾಕಲಾಗಿದೆ. ಆದರೆ, ಎಲ್ಲರೂ ಹಾಕಿಸಿಕೊಂಡು ಶೇಕಡ 100 ಗುರಿ ಸಾಧಿಸಬೇಕಾಗಿದೆ. ಈ ಮೂಲಕ ಜಿಲ್ಲೆಯನ್ನು ಸುರಕ್ಷಿತವಾಗುಸುವುದಲ್ಲದೆ, ಹೆಚ್ಚು ಕೋವಿಡ್ ಲಸಿಕಾಕರಣವಾದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆ ನಮ್ಮದಾಗಬೇಕು ಎಂದು ಪ್ರತಿಪಾದಿಸಿದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 100 ಕೋಟಿಗೂ ಅಧಿಕ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ಹಾಕುವ ವಿಶ್ವದಲ್ಲೇ ಹೆಚ್ಚು ಲಸಿಕೆ ಹಾಕಿಸಿದ್ದಾರೆ ಎಂದು ಅವರು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಆರ್.ಸಿ.ಹೆಚ್. ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್ ಅವರು, ಒಂದು ಮತ್ತ ಎರಡನೇ ಕೋವಿಡ್ ಲಸಿಕೆ ಪಡೆದುಕೊಂಡವರ ಬಗ್ಗೆ ವಿವರ ನೀಡಿದರು.
ಆರೋಗ್ಯ ಕಾರ್ಯಕರ್ತರು ಶೇ 93, ಮಂಚೂಣಿ ಕಾರ್ಯಕರ್ತರು ಶೇ.84 ಹಾಗೂ ಹಿರಿಯ ನಾಗರಿಕರು ಶೇ 61ರಷ್ಟು ಮಂದಿ ಎರಡೂ ಡೋಸ್ ಗಳನ್ನು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. 2ನೇ ಕೋವಿಡ್ ಲಸಿಕೆ ಪಡೆದುಕೊಂಡ 39 ವಾರ ಅಥವಾ 9 ತಿಂಗಳು ಆದ ಆರೋಗ್ಯ ಕಾರ್ಯಕರ್ತರು, ಮಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ತುಂಬಿದ ಹಿರಿಯ ನಾಗರಿಕರು ಮುನ್ನೆಚ್ಚರಿಕಾ ಲಸಿಕೆ ಪಡೆಯಬಹುದು ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಓರ್ವ ಆರೋಗ್ಯ ಕಾರ್ಯಕರ್ತರು, ಓರ್ವ ಮಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ತುಂಬಿದ ಹಿರಿಯ ನಾಗರಿಕ ರೋರ್ವರಿಗೆ ಮುನ್ನೆಚ್ಚರಿಕಾ ಲಸಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರೇಣುಕಾ ಹೋಳ್ಕರ್, ಶೇಕ್ ಹುಸೇನ್ ಹಾಗೂ ಗುರುಪ್ರಸಾದ್, ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಶಂಕರಪ್ಪ ಮೈಲಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್, ಜಿಲ್ಲಾ ಸರ್ಜನ್ ಡಾ.ಅಂಬರಾಯ ಎಸ್. ರುದ್ರವಾಡಿ, ಆರ್.ಸಿ.ಹೆಚ್. ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಮಹಾನಗರಪಾಲಿಕೆಯ ಸದಸ್ಯರಾದ ರೇಣುಕಾ ಪರಶುರಾಮ ಹೋಳ್ಕರ್, ಹಿರಿಯ ಕವಿ ವಿಠ್ಠಲ ಜಮಾಳ, ಆರೋಗ್ಯ ಸಹಾಯಕ ಮಂಜುನಾಥ ಕಂಬಳಿಮಠ ಮುಂತಾದವರು ಹಾಜರಿದ್ದರು. ಅಶೋಕ್ ನಗರದ ನಗರ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ಬಾಬುರಾವ್ ಚವ್ಹಾಣ್ ಸ್ವಾಗತಿಸಿದರು

LEAVE A REPLY

Please enter your comment!
Please enter your name here