ಕಲಬುರಗಿ,ಡಿ.14: ಕರ್ನಾಟಕ ವಿಧಾನ ಪರಿಷತ್ ಚುನಾವಣೆ (ಸ್ಥಳೀಯ ಸಂಸ್ಥೆಗಳು) ಗುಲಬರ್ಗಾ ಕ್ಷೇತ್ರದಿಂದ ಓರ್ವ ಸದಸ್ಯ ಸ್ಥಾನ ಭರ್ತಿಗೆ ನಡೆದ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆದಿದ್ದು, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಿ.ಜಿ.ಪಾಟೀಲ ಅವರು ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿಯೇ 149 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಭಾಸ್ಕರ್ ಹಾಲ್ ನಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಂಡಿತ್ತು.
ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆ ಪೂರ್ಣಗೊಂಡ ನಂತರ ಚಲಾವಣೆಯಾದ 7070 ಮತಗಳಲ್ಲಿ ಮತಪೆಟ್ಟಿಗೆಯಲ್ಲಿ ಲಭ್ಯವಾದ ಮತಗಳ ಸಂಖ್ಯೆ 7069. ಇದರಲ್ಲಿ 6771 ಮತಗಳು ಪುರಸ್ಕೃತಗೊಂಡು ಬಿ.ಜೆ.ಪಿ ಅಭ್ಯರ್ಥಿ ಬಿ.ಜಿ.ಪಾಟೀಲ-3452, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಭ್ಯರ್ಥಿ ಶಿವಾನಂದ ಪಾಟೀಲ-3303 ಹಾಗೂ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಕೋಡ್ಲಿ ಅವರು 16 ಮತಗಳನ್ನು ಪಡೆದುಕೊಂಡರು. ಉಳಿದಂತೆ 298 ಮತಗಳು ತಿರಸ್ಕೃತಗೊಂಡವು.
ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆ ನಂತರ ಪುರಸ್ಕೃತ 6771 ಮತಗಳ ಪೈಕಿ ಗೆಲುವಿಗಾಗಿ 3386 ಮತಗಳು ಪಡೆದಿರಬೇಕು ಎಂಬ ಗೆಲುವಿನ ಸೂತ್ರ ನಿಗದಿಪಡಿಸಲಾಯಿತು. ಪ್ರಥಮ ಪ್ರಾಶಸ್ತ್ಯದ ಎಣಿಕೆಯಲ್ಲಿ ಗೆಲುವಿಗೆ ನಿಗದಿಪಡಿಸಿದ ಮತಗಿಂತ ಹೆಚ್ಚಿನ ಮತ ಪಡೆದ ಕಾರಣ ಬಿ.ಜಿ.ಪಾಟೀಲ ಅವರು ವಿಜಯಶಾಲಿಯಾಗಿದ್ದಾರೆ ಎಂದು ಘೋಷಿಸಿ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಪ್ರಮಾಣ ಪತ್ರ ನೀಡಿದರು.
ಇದಕ್ಕೂ ಮುನ್ನ ಬೆಳಿಗ್ಗೆ 8 ಗಂಟೆಗೆ ಅಭ್ಯರ್ಥಿಗಳ ಉಪಸ್ಥಿತಿಯಲ್ಲಿ ಮತ ಪೆಟ್ಟಿಗೆಗಳನ್ನು ಇರಿಸಲಾದ ಭದ್ರತಾ ಕೊಠಡಿಗಳನ್ನು ಒಡೆದು ಎಣಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಮತ ಎಣಿಕೆ ಶಾಂತಿಯುತವಾಗಿ ನಡೆಯಲು ಎಣಿಕೆ ಕೇಂದ್ರದ ಸುತ್ತಮುತ್ತ 144 ನಿಷೇಧಾಜ್ಞೆ ಜಾರಿಗೊಳಿಸಿ ಸೂಕ್ತ ಪೊಲೀಸ್ ಬಂದೋಬಸ್ತ್
ಏರ್ಪಡಿಸಲಾಗಿತ್ತು.
ಸಾಮಾನ್ಯ ಚುನಾವಣಾ ವೀಕ್ಷಕರಾಗಿರುವ ಆರ್ಥಿಕ ಇಲಾಖೆಯ (ವೆಚ್ಚ) ಸರ್ಕಾರದ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ ಅವರ ಮೇಲುಸ್ತುವಾರಿಯಲ್ಲಿ ಎಣಿಕೆ ಪ್ರಕ್ರಿಯೆ ನಡೆಯಿತು.
ಯಾದಗಿರಿ ಜಿಲ್ಲಾಧಿಕಾರಿ ಆರ್. ರಾಗಪ್ರಿಯಾ, ಜಿ.ಪಂ. ಸಿ.ಇ.ಓ ಡಾ.ದಿಲೀಷ್ ಶಶಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಕೆ.ಆರ್.ದುರಗೇಶ, ಯಾದಗಿರಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಅಯುಕ್ತೆ ಮೋನಾ ರೋಟ್, ಬಿ.ಅಶ್ವಿಜಾ, ಎಣಿಕೆ ಸಿಬ್ಬಂದಿಗಳು ಎಣಿಕೆ ಪ್ರಕ್ರಿಯೆಯಲ್ಲಿದ್ದರು.