ಕಲಬುರಗಿ, ಅ.21: ಮಹಾರಾಷ್ಟ್ರದ ಪರಭಣಿಯಲ್ಲಿ ಇದೇ ಅಕ್ಟೋಬರ್ 24ರಂದು ಹಮ್ಮಿಕೊಂಡಿರುವ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿನ ಬೃಹತ್ ರ್ಯಾಲಿಯಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತರು ಭಾಗವಹಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಪ್ರಭುಲಿಂಗ್ ಮಹಾಗಾಂವಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಗಾರ್ ಅವರು ಇಲ್ಲಿ ಕರೆ ನೀಡಿದರು.
ಗುರುವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರಿಂದ ಪ್ರಾರಂಭವಾಗಿರುವ ಲಿಂಗಾಯತ ರ್ಯಾಲಿಗಳು ಮಹಾರಾಷ್ಟ್ರ ರಾಜ್ಯದಲ್ಲಿ 12 ಜಿಲ್ಲೆಗಳಲ್ಲಿ ಯಶಸ್ವಿಯಾಗಿವೆ. 13ನೇ ಲಿಂಗಾಯತ ರ್ಯಾಲಿ ಪರಭಣಿಯಲ್ಲಿ ಅಕ್ಟೋಬರ್ 24ರಂದು ಜರುಗಲಿದೆ ಎಂದರು.
ಮಹಾರಾಷ್ಟ್ರದ ಪರಭಣಿಯಲ್ಲಿ ಜರುಗಲಿರುವ ಲಿಂಗಾಯತ ರ್ಯಾಲಿಯ ಯಶಸ್ವಿಗಾಗಿ ಅಕ್ಟೋಬರ್ 22ರಂದು ಲಿಂಗಾಯತ ಸಮನ್ವಯ ಸಮಿತಿಯ ಅವಿನಾಶ್ ಭೋಸಿಕರ್ ಅವರ ಸಂಚಾಲಕತ್ವದಲ್ಲಿ ನೂತನ ಹೈಸ್ಕೂಲ್ ಮೈದಾನದಿಂದ ಶನಿವಾರ್ ಬಜಾರ್ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಸಮಾವೇಶವಾಗಿ ಪರಿವರ್ತನೆಗೊಳ್ಳಲಿದೆ. ಮಹಾರಾಷ್ಟ್ರ ರಾಜ್ಯದ ಗಣ್ಯರಾದ ವಿನಯ್ ಕೋರೆ, ಜಯದತ್ತ ಸಿರಸಾಗರ್, ಕರ್ನಾಟಕ ರಾಜ್ಯದಿಂದ ಜಗದ್ಗುರು ಮಾತೆ ಗಂಗಾದೇವಿ, ಬಸವನಂದ್ ಸ್ವಾಮಿ ಕುಂಬಳಗೋಡು, ಬಸವಕಲ್ಯಾಣದ ಬಸವ ಪ್ರಭು ಸ್ವಾಮಿಗಳು, ಬಸವ ಸಮಿತಿಯ ಅಧ್ಯಕ್ಷ ಅರವಿಂದ್ ಜತ್ತಿ ಮುಂತಾದವರು ಅಕ್ಟೋಬರ್ 22ರಂದು ಪರಭಣಿಯಲ್ಲಿನ ಏಳು ತಾಲ್ಲೂಕಿನಲ್ಲಿ 100 ಕಾರುಗಳ ರ್ಯಾಲಿಯನ್ನು ಹಮ್ಮಿಕೊಂಡಿದ್ದಾರೆ ಎಂದು ಅವರು ಹೇಳಿದರು.
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ. 900 ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ. ಕ್ರೈಸ್ತ, ಇಸ್ಲಾಂ, ಬೌದ್ಧ, ಜೈನ್, ಸಿಖ್ ಮುಂತಾದ ಧರ್ಮಗಳಿಗೆ ಯಾವ ರೀತಿ ಕೇಂದ್ರ ಸರ್ಕಾರ ಸಾಂವಿಧಾನಿಕ ಮಾನ್ಯತೆಯನ್ನು ನೀಡಿದೆಯೋ, ಅದೇ ರೀತಿಯಲ್ಲಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಅನೇಕ ದಶಕಗಳಿಂದ ಹೋರಾಟ ಮುಂದುವರೆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.
ಕರ್ನಾಟಕ ರಾಜ್ಯದ ಬೀದರ್, ಕಲಬುರ್ಗಿ, ಬೆಳಗಾವಿ, ಹುಬ್ಬಳ್ಳಿ, ವಿಜಯಪುರ, ಬಸವಕಲ್ಯಾಣ, ಬೆಂಗಳೂರು, ಚಿತ್ರದುರ್ಗ, ಕೊಪ್ಪಳ್ ಜಿಲ್ಲೆಗಳಲ್ಲಿಯೂ ಸಹ ಲಿಂಗಾಯತರ ಬೃಹತ್ ರ್ಯಾಲಿಗಳು ಆಗಿವೆ. ಕೂಡಲೇ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಪರಭಣಿಯ ರ್ಯಾಲಿಗೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ನೂರಾರು ವಾಹನಗಳ ಮೂಲಕ ಸಹಸ್ರಾರು ಜನರು ಭಾಗವಹಿಸುವರು. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ, ಹಣಮಂತರಾವ್ ಪಾಟೀಲ್ ಕುಸನೂರ್, ಶಿವಶರಣಪ್ಪ ದೇಗಾಂವ್ ಮುಂತಾದವರು ಉಪಸ್ಥಿತರಿದ್ದರು.