ಕಲಬುರಗಿ, ಪ್ರತಿಯೊಂದು ಛಾಯಾಚಿತ್ರಕ್ಕೂ ರೂಪವಿದ್ದರೂ, ಅದರಲ್ಲಿನ ಸೌಂದರ್ಯ ಜೀವಾಳವಾಗಿ ಪರಿಣಮಿಸುತ್ತದೆ ಎಂದು ದಿ ಐಡಿಯಲ್ ಫೈನ್ ಆರ್ಟ ಸೊಸೈಟಿಯ ಕಾರ್ಯದರ್ಶಿ ಪ್ರೊ.ವಿ.ಜಿ.ಅಂದಾನಿ ಅಭಿಪ್ರಾಯಪಟ್ಟರು.
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗುರುವಾರ ಏರ್ಪಡಿಸಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿನ ಛಾಯಾಚಿತ್ರ ಪ್ರದರ್ಶನ ಮತ್ತು ಪತ್ರಿಕಾ ಛಾಯಾಗ್ರಾಹಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮಾನ ಎಂದು ಅವರು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಭವಾನಿಸಿಂಗ ಠಾಕೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಛಾಯಾಗ್ರಾಹಕರು ಕಷ್ಟದಲ್ಲಿ ಬೆಂದವರು, ಅವರ ಶ್ರಮ ವ್ಯರ್ಥವಾಗಬಾರದು. ಛಾಯಾಗ್ರಾಹಕರನ್ನು ಕೀಳಾಗಿ ನೋಡುವ ಪರಿಸ್ಥಿತಿ ತಂದುಕೊಳ್ಳಬಾರದು. ಕೊರೊನಾ ಕಾಲಘಟ್ಟದಲ್ಲಿ ಛಾಯಾಗ್ರಾಹಕರಿಗೆ ಆಹಾರ ಧಾನ್ಯದ ಕಿಟ್‌ನ್ನು ಸಂಘ ಕೊಡಮಾಡುವ ಮೂಲಕ ಆರ್ಥಿಕ ಸುಧಾರಣೆಗೆ ಸಹಕರಿಸಿದೆ. ಉತ್ತಮ ಛಾಯಾಗ್ರಾಹಕರನ್ನು ಗುರುತಿಸಿ ಪ್ರೋತ್ಸಾಹಿಸಲು ಸನ್ಮಾನಿಸಿ ಗೌರವಿಸುವ ಕೆಲಸ ಸಂಘ ಮಾಡುತ್ತ ಬಂದಿದೆ ಎಂದು ಅವರು ವಿವರಿಸಿದರು.