ಬಹುದಿನಗಳಿಂದ ಬಾಕಿಯಿರುವ ಪ್ರಕರಣಗಳ ಇತ್ಯರ್ಥಕ್ಕೆ ಆಗಸ್ಟ 14ರಂದು ಮೆಗಾ ಲೋಕ್ ಅದಾಲತ್:ನ್ಯಾ. ಕೆ. ಸುಬ್ರಹ್ಮಣ್ಯ

0
1038

ಕಲಬುರಗಿ, ಜು.16- ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಹು ವರ್ಷಗಳಿಂದ ಇತ್ಯರ್ಥವಾಗದೇ ಬಾಕಿ ಉಳಿದಿರುವ ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಲು ಬರುವ ಆಗಸ್ಟ್ 14ರಂದು ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮೆಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಸುಬ್ರಹ್ಮಣ್ಯ ತಿಳಿಸಿದರು.
ಜಿಲ್ಲಾ ಕೋರ್ಟ್ ಆವರಣದಲ್ಲಿರುವ ಪ್ರಾಧಿಕಾರದ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡುತ್ತ, ಈಗಾಗಲೇ ನ್ಯಾಯಾಲಯಗಳಲ್ಲಿ ಚಾಲ್ತಿ ಇರುವ ಪ್ರಕರಣಗಳನ್ನು ವಿಚಾರಣೆಗೆ ಪರಿಗಣಿಸಲಾಗುವುದು. ಇದರ ಜೊತೆಗೆ, ಇನ್ನೂ ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣ ಎಂದು ಪರಿಗಣಿಸಿ ಆದಷ್ಟು ಶೀಘ್ರಗತಿಯಲ್ಲಿ ಇತ್ಯರ್ಥಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಮೋಟಾರು ವಾಹನ ಅಪಘಾತ ಪ್ರಕರಣಗಳು, ಅಸಲು ದಾವೆಗಳು, ಬ್ಯಾಂಕುಗಳಿಗೆ ಸಂಬAಧಿಸಿದ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವೈವಾಹಿಕ ಹಾಗೂ ಜೀವನಾಂಶ ಕೋರುವ ಪ್ರಕರಣಗಳು, ಚೆಕ್‌ಬೌನ್ಸ್ ಪ್ರಕರಣಗಳು ಸೇರಿದಂತೆ ಕಾನೂನಿಗೆ ಅನುಗುಣವಾಗಿ ರಾಜಿಗೆ ಅರ್ಹ ಎನಿಸುವ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ವಿಚಾರಣೆ ಬಳಿಕ ಇತ್ಯರ್ಥಪಡಿಸಲಾಗುವುದು ಎಂದು ಅವರು ವಿವರಿಸಿದರು.
ಆನ್‌ಲೈನ್ ಮಾಧ್ಯಮಗಳಾದ ವಿಡಿಯೋ ಕಾನ್ಫರೆನ್ಸ್, ವಾಟ್ಸಾಪ್, ಇ-ಮೇಲ್, ಎಸ್‌ಎಂಎಸ್ ಮೂಲಕ ವರ್ಚುವಲ್ ಮಾಧ್ಯಮ ಬಳಸಿಕೊಂಡು ಅಥವಾ ಖುದ್ದಾಗಿ ಪಾಲ್ಗೊಳ್ಳುವ ಮೂಲಕ ಕಕ್ಷಿದಾರರು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ನ್ಯಾ.ಸುಬ್ರಹ್ಮಣ್ಯ ಅವರು ಹೇಳಿದರು.
ಈ ನಿಟ್ಟಿನಲ್ಲಿ ಕಕ್ಷಿದಾರರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಆಯಾ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಬಹುದು. ಮೇಲಾಗಿ, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08472-253370ಕ್ಕೆ ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದಾಗಿದೆ ಎಂದರು.
ಮೆಗಾ ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಂಡ ಪ್ರಕರಣಗಳಲ್ಲಿ ಕಕ್ಷಿದಾರರು ಈ ಹಿಂದೆ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನು ಕಾಯ್ದೆಗೆ ಅನುಸಾರವಾಗಿ ಹಿಂದಿರುಗಿಸಲಾಗುವುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಶಾಂತ್ ಎಂ.ಚೌಗಲೆ ಹೇಳಿದರು.
ಲೋಕ್ ಅದಾಲತ್ ಮೂಲಕ ರಾಜೀ ಸಂಧಾನ ಮಾಡಿಕೊಳ್ಳುವುದರಿಂದ ಕಕ್ಷಿದಾರರ ಮಹತ್ವದ ಸಮಯ ಉಳಿತಾಯ ಆಗುತ್ತದೆ. ಮೇಲಾಗಿ, ಅನಗತ್ಯವಾಗಿ ಹಣ ಖರ್ಚಾಗುವುದು ಸಹ ತಪ್ಪುವುದಲ್ಲದೆ, ಕಕ್ಷಿದಾರರ ಮಧ್ಯೆ ಪಾರಸ್ಪರಿಕ ಸಾಮರಸ್ಯ ಮುಂದುವರೆಯುತ್ತದೆ. ಹಾಗಾಗಿ, ಮೆಗಾ ಲೋಕ್ ಅದಾಲತ್ ಪ್ರಯೋಜನ ಪಡೆಯಬೇಕೆಂದು ಅವರು ಮನವಿ ಮಾಡಿದರು.
ಕಳೆದ ಮಾರ್ಚ್ 27ರಂದು ಹಮ್ಮಿಕೊಳ್ಳಲಾಗಿದ್ದ ಲೋಕ್ ಅದಾಲತ್‌ನಲ್ಲಿ ಆನ್‌ಲೈನ್ ಮೂಲಕ ಪಾಲ್ಗೊಳ್ಳಲಾಗದೆ ಬಹಳಷ್ಟು ಗ್ರಾಮೀಣ ಭಾಗದ ಕಕ್ಷಿದಾರರು ತೊಂದರೆ ಅನುಭವಿಸಿದ್ದಾರೆ. ತಂತ್ರಜ್ಞಾನದ ಕೊರತೆ ಮತ್ತು ನೆಟ್‌ವರ್ಕ್ ಸಮಸ್ಯೆಯ ಕಾರಣಕ್ಕಾಗಿ ಹೀಗಾಗುವ ಸಾಧ್ಯತೆ ಇರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ವರ್ಚುವಲ್ ಉಪಸ್ಥಿತಿಯ ಜೊತೆಗೆ ಖುದ್ದು ಭೌತಿಕ ಪಾಲ್ಗೊಳ್ಳುವಿಕೆಗೂ ಅವಕಾಶ ಕಲ್ಪಿಸಲಾಗುತ್ತಿದೆ ಅವರು ಹೇಳಿದರು.

LEAVE A REPLY

Please enter your comment!
Please enter your name here