ತೊಗರಿ ಕಣಜದಲ್ಲಿನ ನಾಫೆಡ್ ಹುಚ್ಚಾಟಕ್ಕೆ ಬಿಜೆಪಿ ಜಾಣ ಕುರುಡು: ಡಾ. ಅಜಯ್ ಸಿಂಗ್ ಕಳವಳ

0
806

ಬೆಂಗಳೂರು/ ಕಲಬುರಗಿ:ಕೋವಿಡ್ ಲಾಕ್ಡೌನ್, ಮಳೆ, ಹೊಳೆ ಎಂದು ಕಲಬುರಗಿಯ ತೊಗರಿ ರೈತರು ಫಸಲು ಹಾಳಾಗಿ ಅಳಿದುಳಿದ ಅಲ್ಪ ಬೆಳೆಯನ್ನೇ ರಾಶಿ ಮಾಡಿ ಮಾರುಕಟ್ಟೆಗೆ ಬಂದಿರುವ ತೊಗರಿ ರೈತರಿಗೆ ಕೇಂದ್ರ ಸರಕಾರ ನಿಯಂತ್ರಿತ ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಒಕ್ಕೂಟ `ನಾಫೆಡ್’ ಸಂಸ್ಥೆಯ ಏಕಾಏಕಿ ತಾನು ಸಂಗ್ರಹಿಸಿಟ್ಟ ಲಕ್ಷಾಂತರ ಟನ್ ಹಳೆ ತೊಗರಿ ಮಾರಾಟಕ್ಕೆ ಮುಂದಾಗಿ ಭಾರಿ ಸಂಕಷ್ಟಕ್ಕೆ ದೂಡಿದೆ ಎಂದು ನಾಫೆಡ್ ನೀತಿಯನ್ನು ಖಂಡಿಸಿರುವ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ರೈತರ ಸಂಕಷ್ಟಕ್ಕೆ ಕಾರಣವಾದ ನಾಫೆಡ್ ನೀತಿಯನ್ನು ಕಂಡೂ ಕಾಣದಂತೆ ರಾಜ್ಯ ಬಿಜೆಪಿಯ ಶಾಸಕರು, ಸಂಸದರು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆಂದು ಕೇಸರಿ ಪಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಿಂದ ದಿಲ್ಲಿಗೆ 25 ಸಂಸದರು ಹೋಗಿದ್ದರೂ ಕೇಂದ್ರ ಪ್ರಾಯೋಜಿತ ಇಂತಹ ಕುತಂತ್ರಗಳನ್ನು ನಿಯಂತ್ರಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ನಮ್ಮಸಂಸದರಿಗೆ ರೈತರನ್ನೇ ಸಂಕಷ್ಟಕ್ಕೆ ದೂಡುವ ಇಂತಹ ತಂತ್ರಗಳು ಗೊತ್ತಾಗೋದು ಯಾವಾಗ? ಮಾಧ್ಯಮಗಳಲ್ಲಿ ವ್ಯಾಪಕವಾಗಿ ಈ ಬಗ್ಗೆ ಕಳೆದೊಂದು ವಾರದಿಂದ ಚರ್ಚೆ ಸಾಗಿದ್ದರೂ ಇನ್ನೂ ಬಿಜೆಪಿ ನಾಯಕರು ಬಾಯಿಗೆ ಬೀಗ ಹಾಕಿಕೊಂಡೋ ಕುಲಿತಿದ್ದಾರೆ ಯಾಕೆ? ಇವರಿಗೆ ರೈತರು, ಅವರ ಫಸಲಿಗೆ ಉತ್ತಮ ಬೆಲೆ ದೊರಕುವುದು ಬೇಡವೆ? ಎಂದು ರೈತರ ಪರವಾಗಿ ಧ್ವನಿ ಎತ್ತುವ ಮೂಲಕ ಬಿಜೆಪಿಗರ ಕೇಂದ್ರದ ವಿರುದ್ಧ ಧ್ವನಿ ಎತ್ತದ ಧೋರಮೆ ವಿರುದ್ಧ ತೀವ್ರ ಕಳವಳ- ಆತಂಕ ಹೊರಹಾಕಿದ್ದಾರೆ.
ಹೊಸ ತೊಗರಿ ಮಾರುಕಟ್ಟೆಗೆ ಬರುತ್ತಿರುವ ಹೊತ್ತಿನಲ್ಲಿ ನಾಫೆಡ್ ಹಿಂದೆ ಖರೀದಿಸಿದ ತೊಗರಿಯನ್ನು ಕಡಿಮೆ ಬೆಲೆಯಲ್ಲಿ ಹರಾಜು ಮೂಲಕ ಮಾರಾಟ ಮಾಡುತ್ತಿರುವುದರಿಂದ ತೊಗರಿ ಬೆಲೆ ಇಳಿಯಲಿದೆ. ನಾಲ್ಕು ತಿಂಗಳ ಹಿಂದಷ್ಟೇ ತೊಗರಿ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 7 ಸಾವಿರು ತಲುಪಿದ್ದಾಗ ನಾಫೆಡ್ ತನ್ನಲ್ಲಿನ ಹಳೆಯ ದಾಸ್ತಾನು ಮಾರಾಟ ಮಾಡದೆ ಸುಮ್ಮನಿದ್ದು, ಇದೀಗ ಏಕಾಏಕಿ ಮಾರಾಟಕ್ಕೆ ಹೊರಟಿರುವುದು ಯಾಕೆಂದು ಡಾ. ಅಜಯ್ ಪ್ರಶ್ನಿಸಿದ್ದಾರೆ.
ನಾಫೆಡ್ ಕಳೆದ ವರ್ಷ ಬೆಂಬಲ ಬೆಲೆಯಡಿ ಖರೀದಿಸಿದ್ದ ಸುಮಾರು 1.60 ಲಕ್ಷÀ ಮೆಟ್ರಿಕ್ ಟನ್ ತೊಗರಿಯನ್ನು ಆನ್‌ಲೈನ್ ಮೂಲಕ ಹರಾಜು ಪ್ರಕ್ರಿಯೆ ಆರಂಭಿಸಿದೆ. ಆನ್‌ಲೈನ್‌ನಲ್ಲಿ ಪ್ರತಿ ಕ್ವಿಂಟಲ್‌ಗೆ 5,300ರಿಂದ 5,400ರವರೆಗೆ ಹರಾಜು ಹಾಕುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಬಿದ್ದು ಹೋಗುತ್ತಿದೆ. ರೈತರು ಮರಗುವಂತಾಗಿದೆ. ಇದನ್ನೆಲ್ಲ ಗಮನಿಸಿಯೂ ಬಿಜೆಪಿ ಧ್ವನಿ ಎತ್ತದೆ ಜನ ಸೇವಕರ ಸಮಾವೇಶ ಮಾಡುತ್ತ ಬೇರುಮಟ್ಟದಲ್ಲಿಯೂ ರಾಜಕೀಯ ಮಾಡುತ್ತ ಸಾಗಿದೆ. ರೈತರ ಹಿತಕ್ಕಿಂತ ರಾಜಕೀಯವೇ ಬಿಜೆಪಿಗೆ ಮುಖ್ಯವಾಗಿದೆ ಎಂದು ಡಾ. ಅಜಯ್ ದೂರಿದ್ದಾರೆ.
ಖರೀದಿ ಕೇಂದ್ರ ಗುರುತಿಸಿ ತಿಂಗಳಾದರೂ ತೊಗರಿ ಖರೀದಿ ಶುರುವಾಗಿಲ್ಲ, ರೈತರು 30 ಸಾವಿರಕ್ಕೂ ಹೆಚ್ಚು ಮಂದಿ ಹೆಸರು ನೋಂದಮಿ ಮಾಡಿ ಕಾಯುತ್ತಿದ್ದರೂ ಕೇಳೋರಿಲ್ಲ. ಇತ್ತ ನಾಫೆಡ್ ಹುಚ್ಚಾಟದಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುತ್ತಿದೆ. ಹೀಗಾಗಿ ತೊಗರಿ ರೈತರ ಗೋಳು ಹೆಚ್ಚುತ್ತ ಸಾಗಿದೆ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತು ತೊಗರಿ ಖರೀದಿ ಪ್ರಕ್ರಿಯೆ ಆರಂಭಿಸಿ ರೈತರ ನೆರವಿಗೆ ಬರಬೇಕೆಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here