ಸಿಡ್ನಿ, ಜ.11- ಭಾರತದ ಯುವ ವಿಕೆಟ್ ಕೀಪರ್ ರಿಷಭ್‍ಪಂತ್ (97 ರನ್, 12 ಬೌಂಡರಿ, 3 ಸಿಕ್ಸರ್) ಹಾಗೂ ಪೂಜಾರ (77 ರನ್, 12 ಬೌಂಡರಿ)ರ ಆಕರ್ಷಕ ಅರ್ಧಶತಕಗಳ ಬಲದಿಂದಾಗಿ ಸಿಡ್ನಿ ಟೆಸ್ಟ್ ಅನ್ನು ಭಾರತ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಾರ್ಡರ್- ಗವಾಸ್ಕರ್ ಸರಣಿಯ 4 ಪಂದ್ಯಗಳಲ್ಲಿ ಎರಡು ತಂಡಗಳು 1-1ರಿಂದ ಸಮಬಲಗೊಳಿಸಿಕೊಂಡಿರುವುದರಿಂದ 4ನೇ ಟೆಸ್ಟ್ ಕುತೂಹಲ ಮೂಡಿಸಿದೆ.
ಪಂದ್ಯ ಗೆಲ್ಲಲು 407 ರನ್‍ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡವು ಅಂತಿಮ ದಿನದ ಆರಂಭದಲ್ಲೇ ನಾಯಕ ರಹಾನೆ (4 ರನ್) ಕಳೆದುಕೊಂಡು ಆಘಾತ ಅನುಭವಿಸಿತು.
#ಪೂಜಾರ- ಪಂತ್ ಆರ್ಭಟ:
ನಾಯಕ ರಹಾನೆ ಔಟಾದರೂ ಕೂಡ ತಂಡವನ್ನು ಗೆಲ್ಲಿಸುವ ಹೊಣೆ ಹೊತ್ತ ರಿಷಭ್ ಪಂತ್ ಹಾಗೂ ಪೂಜಾರ ಆಸೀಸ್ ಬೌಲರ್‍ಗಳನ್ನು ದಂಡಿಸಿದರು. ಏಕದಿನ ಮಾದರಿಯಲ್ಲಿ ಬ್ಯಾಟಿಂಗ್ ಮಾಡಿದ ಪಂತ್ 118 ಎಸೆತಗಳಲ್ಲೇ 97 ರನ್ ಗಳಿಸಿ ಶತಕ ಗಳಿಸುವ ಹೊಸ್ತಿಲಲ್ಲಿ ಲಿಯಾನ್ ಬೌಲಿಂಗ್‍ನಲ್ಲಿ ಕುಮ್ಮಿನ್ಸ್ ಹಿಡಿದ ಕ್ಯಾಚ್‍ಗೆ ಬಲಿಯಾದರು. ಪೂಜಾರ ಹಾಗೂ ಪಂತ್ ಜೋಡಿಯು ನಾಲ್ಕನೇ ವಿಕೆಟ್‍ಗೆ 148 ರನ್‍ಗಳ ಜೊತೆಯಾಟ ನೀಡಿದರು. ರಿಷಭ್ ಔಟಾದ ನಂತರ ತಾಳ್ಮೆಯುತ ಆಟಕ್ಕೆ ಮುಂದಾದ ಪೂಜಾರ ಟೆಸ್ಟ್‍ನಲ್ಲಿ 6 ಸಾವಿರ ರನ್‍ಗಳನ್ನು ಪೂರೈಸಿದರು. ಪೂಜಾರ 77 ರನ್ ಗಳಿಸಿದ್ದಾಗ ಹೆಜಲ್‍ವುಡ್ ಬೌಲಿಂಗ್‍ನಲ್ಲಿ ಕ್ಲೀನ್ ಬೌಲ್ಡ್ ಆದರು.
ಡ್ರಾ ಮಾಡುವಲ್ಲಿ ಅಶ್ವಿನ್- ಹನುಮ ಸಕ್ಸಸ್:
ಚೇತೇಶ್ವರ್ ಪೂಜಾರ ಔಟಾದ ನಂತರ ರಭಸದ ಒಡೆತಗಳಿಗೆ ಕೈ ಹಾಕದೆ ಪಂದ್ಯವನ್ನು ಡ್ರಾ ಮಾಡಿಕೊಳ್ಳುವತ್ತ ಭಾರತ ತಂಡ ಗಮನ ಹರಿಸಿತು. 6ನೇ ವಿಕೆಟ್‍ಗೆ ಜೊತೆಗೂಡಿದ ಅಶ್ವಿನ್ ಹಾಗೂ ಹನುಮ ವಿಹಾರಿ ಆಸೀಸ್ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸಿ ಪಂದ್ಯ ಡ್ರಾಗೊಳಿಸುವಲ್ಲಿ ಸಕ್ಸಸ್ ಕಂಡರು. ಹನುಮ ವಿಹಾರಿ (23 ರನ್, 4 ಬೌಂಡರಿ) ಹಾಗೂ ರವಿಚಂದ್ರನ್ ಅಶ್ವಿನ್(39 ರನ್, 7 ಬೌಂಡರಿ) ಜೋಡಿಯು 6ನೇ ವಿಕೆಟ್‍ಗೆ 62 ರನ್‍ಗಳ ಜೊತೆಯಾಟ ನೀಡುವ ಮೂಲಕ ತಂಡವನ್ನು 334 ರನ್‍ಗಳಿಗೆ ಮುಟ್ಟಿಸಿದಾಗ ಅಂಪೈರ್‍ಗಳು ಪಂದ್ಯ ಡ್ರಾ ಎಂದು ಘೋಷಿಸಿದರು.
ಆಸ್ಟ್ರೇಲಿಯಾ ಪರ ಜೋಶ್ ಹೇಜಲ್‍ವುಡ್ ಹಾಗೂ ಲಾಯನ್ ತಲಾ 2 ಮತ್ತು ಪ್ಯಾಟ್ ಕುಮ್ಮಿನ್ಸ್ ಹಾಗೂ ಲಬುಸ್ಟಂಗ್ನೆ ತಲಾ 1 ವಿಕೆಟ್ ಕಬಳಿಸಿದರು.ಎರಡು ಇನ್ನಿಂಗ್ಸ್‍ನಲ್ಲೂ ಅದ್ಭುತ ಪ್ರದರ್ಶನ ತೋರಿದ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ (131 ರನ್, 81 ರನ್) ಪಂದ್ಯಪುರುಷೋತ್ತಮರಾದರು.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್ 338/10 ವಿಕೆಟ್
ದ್ವಿತೀಯ ಇನ್ನಿಂಗ್ಸ್ 312/6 ವಿಕೆಟ್
ಭಾರತ ಪ್ರಥಮ ಇನ್ನಿಂಗ್ಸ್ 244/10 ವಿಕೆಟ್
ದ್ವಿತೀಯ ಇನ್ನಿಂಗ್ಸ್ 334/5 ವಿಕೆಟ್