ಕಲಬುರಗಿ, ಡಿ. 21: ಕೋವಿಡ್ 19 ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯತಗಳಿಗೆ ಚುನಾವಣೆ ನಡೆಯಲಿದ್ದು, ಮೊದಲನೇ ಹಂತವಾಗಿ ನಾಳೆ ಮಂಗಳವಾರ 22ರಂದು 126 ಗ್ರಾಮ ಪಂಚಾಯತ್‌ಗಳಿಗೆ ಮತದಾನ ನಡೆಯಲಿದೆ.
ಮೊದಲನೆ ಹಂತವಾಗಿ ಕಲಬುರಗಿ 28, ಆಳಂದ 36, ಅಫಜಲಪೂರ 28, ಕಮಲಾಪೂರ, 16, ಕಾಳಗಿ 14, ಹಾಗೂ ಶಹಾಬಾದ 04, ಸೇರಿದಂತೆ 126 ಗ್ರಾಮ ಪಂಚಾಯತಗಳಿಗೆ ಮತದಾನ ನಡೆಯಲಿದೆ.
ಬೀದರ ಹೊರತುಪಡಿಸಿ ರಾಜ್ಯದ ಎಲ್ಲ ಗ್ರಾಮ ಪಂಚಾಯತಗಳಿಗೆ ಚುನಾವಣೆಯಲ್ಲಿ ಮತಪತ್ರ ಮೂಲಕ ಮತದಾನ ನಡೆಯಲಿದ್ದು, ಬೀದರ ಜಿಲ್ಲೆಯಲ್ಲಿ ಮಾತ್ರ ಎವಿಎಮ್ ಯಂತ್ರವನ್ನು ಬಳಸಲಾಗುತ್ತಿದೆ.
ಈಗಾಗಲೇ ನಾಳೆ ನಡೆಯಲಿರುವ ಮತದಾನಕ್ಕಾಗಿ ಚುನಾವಣಾ ಸಿಬ್ಬಂದಿಗಳು ಆಯಾ ಮತಕೇಂದ್ರಗಳಿಗೆ ತೆರಳಿದ್ದಾರೆ.
ಎರಡನೇ ಹಂತವಾಗಿ ಈ ತಿಂಗಳು 27ರಂದು ಯಡ್ರಾಮಿ 15, ಜೇವರ್ಗಿ 23, ಚಿತ್ತಾಪೂರ 24, ಚಿಂಚೋಳಿ 27 ಮತ್ತು ಸೇಡಂ 27 ಪಂಚಾಯತಗಳು ಸೇರಿದಂತೆ ಒಟ್ಟು 116 ಗ್ರಾಮ ಪಂಚಾಯತಗಳಿಗೆ ಮತದಾನ ನಡೆಯಲಿದ್ದು, ಒಟ್ಟು ಜಿಲ್ಲೆಯಲ್ಲಿ ಮೊದಲನೇ ಹಾಗೂ ಎರಡನೇ ಹಂತ ಸೇರಿ ಒಟ್ಟು 242 ಗ್ರಾಮ ಪಂಚಾಯತಗಳಿಗೆ ಚುನಾವಣೆ ನಡೆಯಲಿದೆ.
ಚಿತ್ತಾಪೂರ ತಾಲೂಕಿನ ರಾವೂರ ಗ್ರಾಮ ಪಂಚಾಯತ್‌ನ ಎಲ್ಲ 16 ಸ್ಥಾನಗಳಿಗೆ ಅವಿರೋಧ ಆಯ್ಕೆಮಾಡಲಾಗಿದ್ದು ಜಿಲ್ಲೆಯಲ್ಲಿಯೇ ವಿಶೇಷವಾಗಿದೆ.
ಕಲಬುರಗಿ ಜಿಲ್ಲೆಯ ಒಟ್ಟು 11 ತಾಲೂಕುಗಳ 261 ಗ್ರಾಮ ಪಂಚಾಯತ ಕ್ಷೇತ್ರಗಳ ಪೈಕಿ 242 ಗ್ರಾಮ ಪಂಚಾಯತಗಳಿಗೆ ಚುನಾವಣೆ ನಡೆಯಲಿದ್ದು, ವಿವಿಧ ಕಾರಣಗಳಿಂದ ಹಾಗೂ ಅವಧಿ ಪೂರ್ಣಗೊಳ್ಳದ ಒಟ್ಟು 19 ಗ್ರಾಮ ಪಂಚಾಯತಗಳಿಗೆ ಚುನಾವಣೆ ನಡೆಯುತ್ತಿಲ್ಲ
ಚುನಾವಣೆ ನಡೆಯದ ಗ್ರಾಮ ಪಂಚಾಯತಗಳು ಎಂದರೆ ಹಾಳತಡಕಲ, ಢಣ್ಣೂರ, ನಿರಗುಡಿ, ಭೂಸನೂರ, ಹಿತ್ತಲಶಿರೂರ, ದುತ್ತರಗಾಂವ, ಮದರಿ, ರಂಜಣಗಿ, ಡೋಣಗಾಂವ, ಕೊಲ್ಲೂರ, ರಾಂಪೂರಹಳ್ಳಿ, ಕರ್ಚಖೇಡ, ಗರಕಪಳ್ಳಿ, ಮರಗುತ್ತಿ, ಮುದ್ದಡಗಾ, ಶೆಳ್ಳಗಿ, ಮೋಘಾ, ರುಮ್ಮನಗೂಡ ಮತ್ತು ಕರಕಹಳ್ಳಿ ಸೇರಿವೆ.
ಎರಡು ಹಂತಗಳಲ್ಲಿ ನಡೆಯುವ ಚುನಾವಣೆಯಲ್ಲಿ ಒಟ್ಟು 1326400 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.