ಕಲಬುರಗಿ, ಡಿ. 6: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನಿಧನರಾಗಿ ಇಂದಿಗೆ 64 ವರ್ಷಗಳು (6ನೇ ಡಿಸೆಂಬರ್, 1956) ಗತಿಸಿದವು. ಈ ದಿನವನ್ನು ದೇಶಾದ್ಯಂತ ಮಹಾ ಪರಿ ನಿರ್ವಾಣ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ರವಿವಾರ ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಘ ಟನೆ ಕ್ಷೇತ್ರಿಯ ಕಾರ್ಯಾಲಯದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಮರ್ಪಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ವಿಠ್ಠಲ ಮರಗುತ್ತಿ ಅವರು ತಮ್ಮ ಜೀವನದುದ್ದಕ್ಕೂ ಅಸ್ಪೃಶ್ಯತೆ, ಜಾತಿ ಪದ್ಧತಿ, ಲಿಂಗಭೇದ, ಅಸಮಾನತೆ ವಿರುದ್ಧ ಹೋರಾಡಿ ಶೋಷಿತ ಸಮುದಾಯದ ಏಳ್ಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಭೌತಿಕ ಶರೀರವನ್ನು ತ್ಯಜಿಸಿ ಮಹಾಪರಿನಿರ್ವಾಣ ಹೊಂದಿದ ಈ ದಿನದಂದು ಅವರಿಗೆ ನನ್ನ ಭಾವಪೂರ್ಣ ನಮನಗಳು ಎಂದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಭವಿಷ್ಯ ನಿಧಿ ನೌಕರರ ಸಂಘದ ಕಾರ್ಯದರ್ಶಿ ಬಸವ ರಾಜ ಹೆಳವರ ಯಾಳಗಿ ಮಾತನಾಡಿ ನಮಗೆ ಸ್ವಾಭಿಮಾನದ ಸ್ವತಂತ್ರ ತಂದು ಕೊಟ್ಟಿರುವ ಡಾ. ಅಂಬೇಡ್ಕರ್ ಅವರಿಗೆ ಕೇವಲ ಪೂಜೆ ಸಲ್ಲಿಸಿದರೆ ಸಾಲದು, ನಾವು ಅವರ ತತ್ವಾದರ್ಶಗಳನ್ನು, ಸಿದ್ಧಾಂತ ಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಇಂದು ಆಚರಿಸುತ್ತಿರುವ ಮಹಾಪರಿನಿರ್ವಾಣ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.