ಖ್ಯಾತ ಪತ್ರಕರ್ತ, ಸಾಹಿತಿ ರವಿ ಬೆಳಗೆರೆ ಹೃದಯಾಘಾತದಿಂದ ನಿಧನ

0
959

ಬೆಂಗಳೂರು, ನ. 13: ಕನ್ನಡದ ಖ್ಯಾತ ಪತ್ರಕರ್ತ ಹಾಗೂ ಸಾಹಿತಿ ರವಿ ಬೆಳಗೆರೆ ನಿನ್ನೆ ಮಧ್ಯರಾತ್ರಿ 1 ಗಂಟೆಗೆ ವಿಧಿವಶರಾಗಿದ್ದಾರೆ.
62 ವರ್ಷದ ರವಿ ಬೆಳಗೆರೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ಹಾಯ್ ಬೆಂಗಳೂರು ಕಚೇರಿಯಲ್ಲಿ ರಾತ್ರಿ ಊಟ ಮುಗಿಸಿ, ನಿದ್ರೆ ಮಾಡುತ್ತಿದ್ದಾಗ ಅಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಸದ್ಯ ಕನಕಪುರ ಮುಖ್ಯ ರಸ್ತೆಯ ಗುಬ್ಳಾಳದ ಕರಿಶ್ಮಾ ಹಿಲ್ಸ್ನ ರವಿ ಬೆಳಗೆರೆಯವರ ನಿವಾಸದಲ್ಲಿ ಮೃತದೇಹವನ್ನು ಇರಿಸಲಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ರವಿ ಬೆಳಗೆರೆಯವರ ಕನಸಿನ ಕೂಸಾಗಿದ್ದ ಪದ್ಮನಾಭನಗರದ ಪ್ರಾರ್ಥನಾ ಶಾಲೆಯ ಅವರಣಕ್ಕೆ ಮೃತದೇಹವನ್ನು ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗಿದೆ.
ಇಂದು ಬನಶಂಕರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿದೆ. ಬ್ರಾಹ್ಮಣ ವಿಧಿವಿಧಾನದ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು. ರವಿ ಬೆಳಗೆರೆಯವರು ಮೊದಲ ಪತ್ನಿ ಲಲಿತಾ, ಎರಡನೇ ಪತ್ನಿ ಯಶೋಮತಿ, ನಾಲ್ವರು ಮಕ್ಕಳಾದ ಕರ್ಣ, ಭಾವನಾ ಬೆಳಗೆರೆ, ಚೇತನಾ ಬೆಳಗೆರೆ, ಹಿಮವಂತ ಬೆಳಗೆರೆ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು, ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದಾರೆ. ಪ್ರಾರ್ಥನಾ ಸ್ಕೂಲ್ ಮೈದಾನದಲ್ಲಿ ಬೆಳಗ್ಗೆ 9 ಗಂಟೆಯಿAದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
1958ರ ಮಾರ್ಚ್ 15ರಂದು ಬಳ್ಳಾರಿಯಲ್ಲಿ ಜನಿಸಿದ ರವಿ ಬೆಳಗೆರೆ ಲಂಕೇಶ್ ಪತ್ರಿಕೆ, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದರು. ಬಳಿಕ ಹಾಯ್ ಬೆಂಗಳೂರು ಪತ್ರಿಕೆ, ಓ ಮನಸೇ ಮ್ಯಾಗಜಿನ್ ಪ್ರಕಟಿಸಿದ್ದರು. ಅನೇಕ ಪ್ರಸಿದ್ಧ ಕಾದಂಬರಿಗಳು, ಕತೆಗಳು, ಅನುವಾದಿಗಳು, ಜೀವನಚರಿತ್ರೆಗಳನ್ನು ರವಿ ಬೆಳಗೆರೆ ಬರೆದಿದ್ದರು. ತಮ್ಮ ವಿಶೇಷವಾದ ಬರಹ ಶೈಲಿಯ ಮೂಲಕ ವಿಶೇಷವಾದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು.

LEAVE A REPLY

Please enter your comment!
Please enter your name here