ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಆರೋಗ್ಯ ಸ್ಥಿತಿ ಗಂಭೀರ

0
1478

ಕಲಬುರಗಿ, ಸೆ. ೧೭: ಈಗಾಗಲೇ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರ ಆರೋಗ್ಯದ ಕುರಿತಾದ ಹಲವಾರು ಸುದ್ದಿಗಳು ವಿದ್ಯುತ್ಮಾನ ವಾಹಿನಿಗಳಲ್ಲಿ ಮತ್ತು ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿರುವುದಕ್ಕೆ ಗಸ್ತಿ ಅವರ ಕುಟುಂಬದ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.
ಅವರು ಈ ಬಗ್ಗೆ ಸ್ಪಷ್ಟೀಕರಣವೊಂದನ್ನು ನೀಡಿ, ಅಶೋಕ ಗಸ್ತಿ ಅವರಿಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಐಸಿಯುನಲ್ಲಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ, ವೈದ್ಯರು ನಿರಂತರ ಪ್ರಯತ್ನದಲ್ಲಿದ್ದಾರೆ, ಅವರ ಚಿಕಿತ್ಸೆ ಫಲಕಾರಿಯಾಗಿ, ಅವರು ಗುಣಮುಖರಾಗಲೀ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದೇವೆ ಎಂದಿದ್ದಾರೆ.
ಅಲ್ಲದೇ ಸವಿತಾ ಸಮಾಜದ ಮುಖಂಡರು ಕೂಡಾ ಹೇಳಿಕೆಯೊಂದನ್ನು ಹೊರಡಿಸಿದ್ದು, ದಯಮಾಡಿ ಯಾವುದೇ ಮಾಧ್ಯಮವಾಗಲಿ ಸುಳ್ಳಿ ಸುದ್ದಿಗಳನ್ನು ಪ್ರಕಟಿಸದೇ, ನಿಜಾಂಶ ಪ್ರಕಟಿಸಬೇಕೆಂದು ಕೋರುತ್ತ, ಅಶೋಕ ಗಸ್ತಿ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಅಲ್ಲದೇ ಅಶೋಕ ಗಸ್ತಿ ಅವರ ಆರೋಗ್ಯ ಕುರಿತ ಮಾಹಿತಿಯನ್ನು ಸವಿತಾ ಸಮಾಜದಿಂದ ತಿಳಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ಅವರು ದೂರವಾಣಿಯಲ್ಲಿ ಮಾತನಾಡಿ, ನಮ್ಮ ಪಕ್ಷದ ರಾಜ್ಯಸಭಾ ಸದಸ್ಯರಾದ ಅಶೋಕ ಗಸ್ತಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯ ವೈದ್ಯರ ಪ್ರಕಾರ ಅವರನ್ನು ತುರ್ತು ನಿಗಾ ಘಟಕದಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಅವರ ಆರೋಗ್ಯ ಸ್ಥಿತಿ ತೀರ ಶೋಚನೀಯವಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here