ಕಲಬುರಗಿ, ಆಗಸ್ಟ. 28: ನಗರದ ಗೋದುತಾಯಿ ನಿವಾಸಿ ಹಾಗೂ ಜೇವರ್ಗಿ ಕ್ರಾಸ್ ಹತ್ತಿರ ಟೈಲ್ಸ್ ಮತ್ತು ಪಿಓಪಿ ಅಂಗಡಿಯ ಮಾಲಿಕ ನೋರ್ವನನ್ನು ಗೋದುತಾಯಿ ನಗರದ ಶಿವಮಂದಿರ ಹತ್ತಿರ ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣ ನಿನ್ನೆ ಸಂಜೆ ವರದಿಯಾಗಿದೆ.
ಹತ್ಯೆಗೀಡಾದ ವ್ಯಕ್ತಿ ರಾಜಸ್ಥಾನ ಮೂಲದ 42 ವರ್ಷ ವಯಸ್ಸಿನ ಸುನೀಲ್ ಎಸ್. ರಾಂಕ್ ಎಂದು ಹೇಳಲಾಗಿದೆ.
ಎಸ್.ಎಸ್.ಟ್ರೇರ‍್ಸ್ ಎಂಬ ಅಂಗಡಿಯ ಮಾಲೀಕನಾದ ಹತ್ಯೆಗೀಡಾದ ಈ ವ್ಯಕ್ತಿ ಗುರುವಾರ ಸಂಜೆ ಅಂಗಡಿ ಮುಚ್ಚಿಕೊಂಡು ಮನೆಗೆ ಹೋಗಿ ಮನೆಯ ಹೊರಗಡೆ ನಿಂತ ಸಮಯದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಏಕಾಏಕಿಯಾಗಿ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಗೋದುತಾಯಿ ನಗರದ ಶಿವ ಮಂದಿರ ಹತ್ತಿರ ಬಸವರಾಜ ಪಾಟೀಲ್ ಎಂಬುವವರ ಮನೆಯಲ್ಲಿ ಕಳೆದ 15 ವರ್ಷದಿಂದ ಇವರು ಬಾಡಿಗೆಗಿದ್ದು, ಒಬ್ಬರೇ ವಾಸವಾಗಿದ್ದರು.
ಘಟನೆಯ ಬಗ್ಗೆ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಪೋಲಿಸ್ ಆಯುಕ್ತ ಸತೀಷಕುಮಾರ, ಉಪಾಯುಕ್ತ ಕಿಶೋರ ಬಾಬು ಸೇರಿದಂತೆ ಅಶೋಕ ನಗರ ಠಾಣೆಯ ಪಿಐ ಪಂಡೀತ ಸಗರ ಅವರು ಸ್ಥಳಕ್ಕೆ ಧಾವಿಸಿದ್ದು, ಅಶೋಕ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಪರಾಧಿಗಳ ಶೋಧಕ್ಕಾಗಿ ಪೋಲಿಸರು ಮುಂದಿನ ತನಿಖೆ ನಡೆಸಿದ್ದಾರೆ.