ಕಲಬುರಗಿ, ಜು.22- ಕಲಬುರಗಿ ನಗರ ಸೇರಿದಂತೆ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ 9 ದಿನದಿಂದ ಜಾರಿಯಲ್ಲಿದ್ದ ಲಾಕ್‌ಡೌನ್ ಇಂದು ಸಡಿಲಿಕೆಯಾಗುತ್ತಿದ್ದಂತೆ ಕಲಬುರಗಿ ಮತ್ತೆ ಸಹಜ ಸ್ಥಿತಿಗೆ ಮರಳಿದೆ.
ಲಾಕ್‌ಡೌನ್‌ನಿಂದ ಬಹುತೇಕ ಸ್ತಬ್ದಗೊಂಡಿದ್ದ ವ್ಯಾಪಾರ ವಹಿವಾಟು, ಸಾರಿಗೆ, ಆಟೋ, ಟ್ಯಾಕ್ಸಿ, ಬಾರ್, ರೆಸ್ಟೋರೆಂಟ್, ಮಾರುಕಟ್ಟೆಗಳು, ವಾಣಿಜ್ಯ ಕೇಂದ್ರಗಳು, ಖಾಸಗಿ ಹಾಗೂ ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲ ಕಡೆ ದೈನಂದಿನ ಚಟುವಟಿಕೆಗಳು ಆರಂಭವಾಗಿವೆ.
ನಗರದ ಪ್ರಮುಖ ರಸ್ತೆಗಳು, ಮುಖ್ಯರಸ್ತೆ, ಸ್ಟೇಷನ್ ರಸ್ತೆ, ದರ್ಗಾ ರಸ್ತೆ, ಸೇಡಂ ರಸ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣದ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಇಂದು ಬೆಳಗ್ಗಿನಿಂದಲೇ ವಾಹನಗಳ ಸದ್ದು ಮತ್ತೆ ಕಿವಿಗಡಚ್ಚಿಕ್ಕುವಂತಿತ್ತು.
ಕಲಬುರಗಿ ನಗರ ಸೇರಿದಂತೆ ತಾಲೂಕು ಪ್ರದೇಶಗಳಲ್ಲಿ ಬಹುತೇಕ ಎಲ್ಲ ಕಡೆ ದೈನಂದಿನ ಜನಜೀವನ ಪುನಃರರಾಭಗೊಂಡಿತು. ಜನರು ಹೊರಗಡೆ ಬರಬೇಕಾದರೆ ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿ ಧರಿಸಿದ ದೃಶ್ಯ ಬಹುತೇಕ ನಗರದ ಎಲ್ಲ ಕಡೆ ಗಮನ ಸೇಳೆಯಿತು.
ಇನ್ನು ಎಂದಿನAತೆ ಜನರು ಮುಗಿಬಿದ್ದು ಅಗತ್ಯವಸ್ತುಗಳನ್ನು ಖರೀದಿ ಮಾಡುತ್ತಿದ್ದ ದೃಶ್ಯಗಳು ವಿರಳವಾಗಿದ್ದವು. ತರಕಾರಿ, ಹಾಲುಹಣ್ಣು, ಔಷಧಿ ಅಂಗಡಿಗಳಲ್ಲಿ ಸಹಜ ಸ್ಥಿತಿಯಿತ್ತು.
ಬಹುತೇಕ ಎಲ್ಲಾ ಕಡೆ ರೈತರು ಬಿತ್ತನೆಯತ್ತ ಗಮನಹರಿಸಿದ್ದಾರೆ. ಅಗತ್ಯವಿರುವ ಗೊಬ್ಬರ, ಬೀಜ ಖರೀದಿಸುವುದರಲ್ಲಿ ಮಗ್ನರಾಗಿದ್ದಾರೆ. ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್‌ಡೌನ್ ಜಾರಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಹೀಗಾಗಿ ವ್ಯಾಪಾರಸ್ಥರು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಸೇರಿದಂತೆ ಎಲ್ಲರಲ್ಲೂ ಮಂದಹಾಸ ಮೂಡಿದೆ.
ಅದರಲ್ಲೂ ಬೀದಿ ಬದಿಯ ವ್ಯಾಪಾರಿಗಳಿಗಂತೂ ಮತ್ತೆ ತಮ್ಮ ಜೀವನ ಹಳಿಗೆ ಮರಳುವ ಕನಸಿನೊಂದಿಗೆ ಖುಷಿಯಿಂದ ಬೆಳಿಗ್ಗೆಯೇ ವ್ಯಾಪಾರ ಪ್ರಾರಂಭಿಸಿದರು.
(ಸುದ್ದಿ ಚಿತ್ರಗಳು : ಮಂಜುನಾಥ ಜಮಾದಾರ)