ಕಲಬುರಗಿ.ಜು.18- ಕಲಬುರಗಿ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಹಂದಿಗಳ ಕಾಟದ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಗೊಂಡ ಹಿನ್ನೆಲೆಯಲ್ಲಿ ಶನಿವಾರ ಆಸ್ಪತ್ರೆಗೆ ದಿಢೀರ ಭೇಟಿ ನೀಡಿದ ಜಿಲ್ಲಾಧಿಕಾರಿ ಶರತ್ ಬಿ. ಅವರು ಸ್ಥಳದಲ್ಲಿದ್ದ ಹಂದಿ ಮಾಲೀಕನಿಗೆ ಕೂಡಲೆ ಆಸ್ಪತ್ರೆ ಆವರಣದಲ್ಲಿರುವ ಎಲ್ಲಾ ಹಂದಿಗಳನ್ನು ಸ್ಥಳಾಂತರಗೊಳಿಸುವAತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಡಿ.ಸಿ.ಭೇಟಿ ನೀಡಿದ ಸಂದರ್ಭದಲ್ಲಿಯೆ ಹಂದಿ ಮಾಲೀಕರು ಮತ್ತು ಅವರ ತಂಡ ಸುಮಾರು 50 ಹಂದಿಗಳನ್ನು ಹಿಡಿದು ಸ್ಥಳಾಂತರಕ್ಕೆ ಕ್ರಮ ಕೈಗೊಂಡರು. ಇನ್ನೂ ಅಂದಾಜು 150 ಹಂದಿಗಳಿದ್ದು, ಸಾಯಂಕಾಲದೊಳಗೆ ಎಲ್ಲವು ಸ್ಥಳಾಂತರಿಸವುದಾಗಿ ಹೇಳಿದರು.
ಆಸ್ಪತ್ರೆ ಆವರಣದಲ್ಲಿ ಹಂದಿಗಳಿದ್ದರು ಇದರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳದ ಜಿಮ್ಸ್ ಅಧಿಕಾರಿಗಳ ಕಾರ್ಯಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆ ಸುತ್ತಮುತ್ತ ಸ್ವಚ್ಛತೆ, ಗುಣಮಟ್ಟದ ಪರಿಸರ ಕಾಪಾಡುವುದು ಆಸ್ಪತ್ರೆಯ ಜವಾಬ್ದಾರಿಯಾಗಿದೆ. ದಿನನಿತ್ಯ ಸಾವಿರಾರು ರೋಗಿಗಳು ಆಸ್ಪತ್ರೆಗೆ ಭೇಟಿ ನಿಡುತ್ತಾರೆ. ಹೀಗಾಗಿ ಇಲ್ಲಿ ಆರೋಗ್ಯ ನೈರ್ಮಲ್ಯ ಕಾಪಾಡುವತ್ತ ಹೆಚ್ಚಿನ ಗಮನಹರಿಸಬೇಕು ಎಂದರು.
ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಆಸ್ಪತ್ರೆ ಆವರಣದಲ್ಲಿ ಹಂದಿ ಸಾಕಾಣಿಕೆ ಸಹಿಸುವುದಿಲ್ಲ. ಇಲ್ಲಿ ಹಂದಿ ಸಾಕಾಣಿಕೆಗೆ ಬಿಟ್ಟಿರುವ ಮಾಲೀಕನ ಮೇಲೆ ಕೂಡಲೆ ಎಫ್.ಐ.ಆರ್. ದಾಖಲಿಸುವಂತೆ ಜಿಮ್ಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆ ಸುತ್ತಮುತ್ತ ಗೋಡೆಗಳ ಭದ್ರತೆ ಪರಿಶೀಲಿಸಿ ಹಂದಿಗಳು ಬರಲು ಸಣ್ಣ-ಪುಟ್ಟ ದಾರಿಗಳಿದ್ದಲ್ಲಿ ಎಲ್ಲವನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡುವಂತೆ ಪಾಲಿಕೆ ಆಯುಕ್ತ ರಾಹುಲ ಪಾಂಡ್ವೆ ಅವರಿಗೆ ಸೂಚಿಸಿದರು.
ಭದ್ರತಾ ಸಿಬ್ಬಂದಿ ಮೇಲೆ ಗರಂ: ಆಸ್ಪತ್ರೆ ಕಾವಲಿಗೆ ಇರುವ ಭದ್ರತಾ ಸಿಬ್ಬಂದಿಗಳ ಮೇಲೆ ಜಿಲ್ಲಾಧಿಕಾರಿಗಳು ಗರಂ ಆದರು. ಆಸ್ಪತ್ರೆ ಸಂಪೂರ್ಣ ಆವರಣದ ಮೇಲೆ ನಿಮ್ಮ ಕಣ್ಗಾವಲು ಇರಬೇಕು. ಮುಂದೆ ಈ ರೀತಿ ಆಸ್ಪತ್ರೆ ಆವರಣದಲ್ಲಿ ಹಂದಿಗಳ ಸಾಕಾಣಿಕೆಯಾಗಲಿ ಅಥವಾ ಹೋಟೆಲ್‌ಗಳಿಂದ ತ್ಯಾಜ್ಯ ಆಹಾರವಾಗಲಿ ಆವರಣದಲ್ಲಿ ಇರದಂತೆ ನಿಗಾ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ಶಫಿಯೂದ್ದಿನ್, ಜಿಲ್ಲಾ ಆಸ್ಪತ್ರೆಯ ಶಸ್ತçಜ್ಞ ಹಾಗೂ ಅಧೀಕ್ಷಕ ಡಾ.ಅಂಬಾರಾಯ ರುದ್ರವಾಡಿ, ಪಾಲಿಕೆಯ ಆರೋಗ್ಯ ನಿರೀಕ್ಷಕ ಧನರಾಜ ಇದ್ದರು.