ಕಲಬುರಗಿ ಪಾಲಿಕೆ ಚುನಾವಣೆ ನ್ಯಾಯಾಲಯದಲ್ಲಿ ಇಂದು ವಿಚಾರಚಣೆ

0
857

ಕಲಬುರಗಿ, ಫೆ. 04: ಕಲಬುರಗಿ ಮಹಾನಗರಪಾಲಿಕೆಯ ಮತದಾರರ ಪಟ್ಟಿಗೆ ಐವರು ವಿಧಾನ ಪರಿಷತ್ ಸದಸ್ಯರ ಹೆಸರು ಸೇರ್ಪಡೆಯನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸಲ್ಲಿಸಿದ್ದ ಆಕ್ಷೇಪನಾ ಅರ್ಜಿಯ ವಿಚಾರಣೆಯು ಸ್ಥಳೀಯ ಉಚ್ಛ ನ್ಯಾಯಾಲಯವು ಶುಕ್ರವಾರಕ್ಕೆ ಮುಂದೂಡಿದೆ.
ಐವರು ಬಿಜೆಪಿ ವಿಧಾನ ಪರಿಷತ್ ಸದಸ್ಯರನ್ನು ಮಹಾನಗರಪಾಲಿಕೆಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆಮಾಡಿರುವುದನ್ನು ಪ್ರಶ್ನಸಿ ಕಾಂಗ್ರೆಸ್ ನ್ಯಾಯಾಲಯದ ಮೊರೆಹೊಗಿತ್ತು.
ಪರಿಷತ್ ಸದಸ್ಯರ ಹೆಸರು ಸೇರ್ಪಡೆ ಕುರಿತು ಉಚ್ಛ ನ್ಯಾಯಾಲಯದಲ್ಲಿ ಗುರುವಾರ ವಿಚಾರಣೆಗೆ ಬಂದಾಗ ಸರ್ಕಾರಿ ಅಭಿಯೋಜಕರು ಒಂದು ದಿನ ಕಾಲಾವಕಾಶ ಕೊಡಲು ಕೋರಿದ್ದರಿಂದ ಉಚ್ಛ ನ್ಯಾಯಾಲಯವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಕಲಬುರಗಿ: ಫೆ.3: ಫೆಬ್ರವರಿ 5ರಂದು ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಚುನಾವಣೆ ಜರುಗುವ ಕುರಿತು ಈಗಾಗಲೇ ಪ್ರಾದೇಶಿಕ ಆಯುಕ್ತರು ಚುನಾವಣಾ ಅಧಿಸೂಚನೆ ಹೊರಡಿಸಿದ್ದಾರೆ.
ಅಲ್ಲದೇ ಈ ಬಾರಿ ಮೀಸಲಾತಿಯನ್ನೂ ಸಹ ಬದಲಾವಣೆ ಮಾಡಲಾಗಿದೆ. ಈ ಮೊದಲಿದ್ದ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಮೇಯರ್ ಸ್ಥಾನವನ್ನು ಈಗ ಎಸ್‌ಸಿ ವರ್ಗಕ್ಕೆ ಹಾಗೂ ಬಿಸಿಬಿಗೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಮಧ್ಯೆ, ಅತಂತ್ರ ಪಾಲಿಕೆಯ ಹಿನ್ನೆಲೆಯಲ್ಲಿ ಜಾತ್ಯಾತೀತ ಜನತಾದಳದ ಬೆಂಬಲವನ್ನು ಪಡೆಯಲು ಯತ್ನಿಸುತ್ತಿರುವ ಬಿಜೆಪಿಯು ಏಕಾಂಗಿಯಾಗಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಲು ತನ್ನ ಏಳು ಜನ ವಿಧಾನ ಪರಿಷತ್ ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಮುಂದಾಗಿತ್ತು. ಅದನ್ನು ಪ್ರಶ್ನಿಸಿ ಕಾಂಗ್ರೆಸ್ ಜಿಲ್ಲಾಧಿಕಾರಿಗಳಿಗೆ ತಕರಾರು ಅರ್ಜಿಯನ್ನೂ ಸಹ ಈಗಾಗಲೇ ಸಲ್ಲಿಸಿದ್ದಲ್ಲದೇ 63 ಸದಸ್ಯರ ಪಟ್ಟಿಯಂತೆ ಚುನಾವಣೆ ಮಾಡಬೇಕು. 68 ಸದಸ್ಯರ ಪಟ್ಟಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆಯನ್ನೂ ಸಹ ಮಾಡಿದೆ.
ಅಥಣಿಯ ಲಕ್ಷ್ಮಣ್ ಸವದಿ, ಬೆಂಗಳೂರಿನ ತುಳಸಿ ಮುನಿರಾಜುಗೌಡ, ಉಜಿರೆಯ ಪ್ರತಾಪಸಿಂಹ ನಾಯಕ್, ಬೆಂಗಳೂರಿನ ಲೆಹರಸಿಂಗ್, ಬೆಂಗಳೂರಿನ ಭಾರತಿ ಶೆಟ್ಟಿ, ಬೆಳಗಾವಿಯ ಡಾ. ಸಾಬಣ್ಣ ತಳವಾರ್, ಬೀದರನ ರಘುನಾಥರಾವ್ ಮಲ್ಕಾಪುರೆ ಅವರುಗಳು ತಮ್ಮ ನೋಡೆಲ್ ಜಿಲ್ಲೆಯನ್ನಾಗಿ ಕಲಬುರ್ಗಿ ಆಯ್ಕೆ ಮಾಡಿಕೊಂಡಿದ್ದಾಗಿ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಏಳು ಜನರ ದಾಖಲೆಗಳನ್ನು ಪರಿಶೀಲನೆ ಮಾಡಿದ ಸಹಾಯಕ ಆಯುಕ್ತೆ ಮೋನಾ ರೋತ್ ಅವರು ಡಾ. ತಳವಾರ್ ಸಾಬಣ್ಣ ಹಾಗೂ ಪ್ರತಾಪ್ ಸಿಂಹ ನಾಯಕ್ ಅವರ ಮನವಿ ತಿರಸ್ಕಾರ ಮಾಡಿದ್ದಾರೆ. ಉಳಿದ ಐವರು ಪರಿಷತ್ ಸದಸ್ಯರ ಮನವಿಗಳನ್ನು ಪುರಸ್ಕರಿಸಿದ್ದು, ಅವರ ಹೆಸರು ಮತದಾರರ ಪಟ್ಟಿಗೆ ಸೇರಲಿವೆ. ಇದರಿಂದಾಗಿ ಲಕ್ಷ್ಮಣ್ ಸವದಿ, ತುಳಸಿ ಮುನಿರಾಜಗೌಡ, ಲೆಹರಸಿಂಗ್, ಭಾರತಿ ಶೆಟ್ಟಿ, ರಘುನಾಥರಾವ್ ಮಲ್ಕಾಪುರೆ ಅವರು ಮತದಾರರ ಪಟ್ಟಿಗೆ ಸೇರುವುದು ಖಚಿತವಾಗಿದ್ದರಿಂದ ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾದಳ ಎರಡೂ ಪಕ್ಷಗಳು ತೀವ್ರ ಅಸಮಾಧಾನ ಹೊರಹಾಕಿವೆ.
ಮಹಾನಗರ ಪಾಲಿಕೆಯಲ್ಲಿ 55 ವಾರ್ಡಗಳಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ಸ್ಥಾನಗಳಲ್ಲಿ ಜಯಗಳಿಸಿವೆ. ಓರ್ವ ಪಕ್ಷೇತರ ಆಯ್ಕೆಯಾಗಿದ್ದರೂ ಸಹ ಅವರು ಬಿಜೆಪಿಗೆ ಸೇರಿದ್ದಾರೆ.
ಏನೇ ಆದರೂ ಸಹ ಪಾಲಿಕೆಯಲ್ಲಿ ಯಾವುದೇ ಪಕ್ಷ ಅಧಿಕಾರ ಹಿಡಿಯಲು 28 ಸದಸ್ಯ ಬಲದ ಅಗತ್ಯವಿದೆ. ಮೂರು ಪಕ್ಷಗಳಲ್ಲಿಯೂ ರಾಜಕೀಯ ಚಟುವಟಿಕೆ ಆರಂಭವಾಗಿದೆ. ಇಲ್ಲಿಯವರೆಗೆ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ದೂರ ಇರುವುದಾಗಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನಿರ್ಧಾರದಂತೆ ನಿರ್ಧಾರ ಕೈಗೊಳ್ಳುವುದಾಗಿ ಮಹಾನಗರ ಪಾಲಿಕೆಯ ನಾಲ್ವರು ಜಾತ್ಯಾತೀತ ಜನತಾದಳದ ಸದಸ್ಯರು ಹೇಳುತ್ತಿದ್ದರು. ಈಗ ಆ ಪಕ್ಷದ ಮುಖಂಡ ಕೃಷ್ಣಾರೆಡ್ಡಿ ಅವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಆದಾಗ್ಯೂ, ಆ ಪಕ್ಷದ ವರಿಷ್ಠರು ಹಾಗೂ ಜಿಲ್ಲಾ ವರಿಷ್ಠರು ಈ ಕುರಿತು ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ.
ಐವರು ಪರಿಷತ್ ಸದಸ್ಯರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿದ್ದು ಅಕ್ರಮವಲ್ಲ. ಸಹಾಯಕ ಆಯುಕ್ತರು ಪರಿಶೀಲಿಸಿ ಹೆಸರು ಸೇರ್ಪಡೆಗೆ ಶಿಫಾರಸ್ಸು ಮಾಡಿದ್ದಾರೆ ಎಂದು ನಗರ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಅವರು ಸಮರ್ಥಿಸಿಕೊಂಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಪಕ್ಷವೂ ಸಹ ಇದೇ ರೀತಿ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಿತ್ತು. ಅದೇ ರೀತಿ ಬಿಜೆಪಿಯು ಸಹ ಅನುಸರಿಸಿದೆ. ಆಗ ಅಕ್ರಮ ಆಗದ್ದು, ಈಗ ಅಕ್ರಮ ಆಗುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ಮಧ್ಯೆ, ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಫೆಬ್ರವರಿ 5ಕ್ಕೆ ನಿಗದಿಯಾಗಿದ್ದು, ಅಧಿಕಾರಕ್ಕೆ ಬರುವ ಆತುರ ಬಿಜೆಪಿಗೆ ಇದೆ. ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾದಳಕ್ಕೆ ಇದು ನುಂಗಲಾಗದ ಬಿಸಿ ತುಪ್ಪವಾಗಿದೆ. ಹೀಗಾಗಿ ಶುಕ್ರವಾರದಂದು ಉಚ್ಛ ನ್ಯಾಯಾಲಯದ ವಿಚಾರಣೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

LEAVE A REPLY

Please enter your comment!
Please enter your name here