ಅಬ್ದುಲ್ ನಜೀರ್ ಸಾಬ್ ಪ್ರಾದೇಶಿಕ ತರಬೇತಿ ಕೇಂದ್ರ ಗ್ರಾಪo, ತಾಪಂ ಜನ ಪ್ರತಿನಿಧಿಗಳಿಗೆ ಸಹಕಾರಿ:ಸಚಿವ ಈಶ್ವರಪ್ಪ

0
655

ಕಲಬುರಗಿ.ಅ.4:ನೂತನವಾಗಿ ಚುನಾಯಿತರಾಗುವ ಕಲ್ಯಾಣ ಕರ್ನಾಟಕ ಭಾಗದ ಪಂಚಾಯತ್ ರಾಜ್ ಸ್ಥರದ ಜನ ಪ್ರತಿನಿಧಿಗಳು, ವಿಶೇಷವಾಗಿ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಪ್ರತಿನಿಧಿಗಳಿಗೆ ತರಬೇತಿ ನೀಡಲು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರವು ಸಹಕಾರಿಯಾಗಲಿದೆ ಎಂದು ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರು ತಿಳಿಸಿದರು.
ಸೋಮವಾರ ಕಲಬುರಗಿ ತಾಲೂಕಿನ ಕೆಸರಟಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರವನ್ನು ರಿಬ್ಬನ್ ಕತ್ತರಿಸುವ ಮೂಲಕ ಔಪಚಾರಿಕವಾಗಿ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂಸ್ಥೆಯ ಮುಖ್ಯ ಉದ್ದೇಶ ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಪಂಚಾಯತ್ ರಾಜ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಅವರ ಜವಾಬ್ದಾರಿ ಹಾಗೂ ಕಾರ್ಯವ್ಯಾಪ್ತಿ ಕುರಿತು ಸೂಕ್ತ ತರಬೇತಿ ನೀಡಲಾಗುತ್ತದೆ ಎಂದರು.
ಇದಕ್ಕೂ ಮೊದಲು ಈ ಪ್ರಾದೇಶಿಕ ತರಬೇತಿ ಕೇಂದ್ರದ ಎಲ್ಲಾ ಕೋಣೆಗಳನ್ನು ಸಚಿವರು ವೀಕ್ಷಿಸಿದರಲ್ಲದೆ, ಬಾಗಿಲು, ಕಿಟಕಿ ಇನ್ನಿತರ ಸಾಮಗ್ರಿಗಳ ಗುಣಮಟ್ಟ ಪರೀಕ್ಷಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್ ಐಡಿಎಲ್) ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಶಶಿ, ಕೆಆರ್ ಐಡಿಎಲ್ ಮುಖ್ಯ ಅಭಿಯಂತರರಾದ ಮಹೇಶ್, ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತರಬೇತಿ ಕೇಂದ್ರದ ಉಪನಿರ್ದೇಶಕ ಕೆ.ಎಸ್. ಮನೋಜ್ ಕುಮಾರ್, ಕಲಬುರಗಿ ಕೇಂದ್ರದ ಉಪ ನಿರ್ದೇಶಕ ಚನ್ನಪ್ಪ, ಕಲಬುರಗಿ ಕೆಆರ್ ಐಡಿಎಲ್ ಹಿರಿಯ ಇಂಜಿನಿಯರ್ ಶೇಖ್ ಸಲಿಮುದ್ದೀನ್ ಸೇರಿದಂತೆ ಇನ್ನಿತರರು ಇದ್ದರು.
ತರಬೇತಿ ಕೇಂದ್ರದ ವಿಶೇಷತೆ: 3.05 ಎಕರೆ ಪ್ರದೇಶದಲ್ಲಿ 855 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡವು, ನೆಲ ಮಹಡಿ,ಮೊದಲ ಮಹಡಿ ಹಾಗೂ ಎರಡನೇ ಮಹಡಿ ಒಳಗೊಂಡಿದ್ದು, ಒಟ್ಟು ತರಬೇತಿ ಕೇಂದ್ರದ ಕಟ್ಟಡದಲ್ಲಿ 29 ಕೋಣೆಗಳು ಇವೆ. 2 ಡಾರ್ಮೇಟರಿ ಸೌಲಭ್ಯವಿದೆ. ಏಕಕಾಲದಲ್ಲಿ 100 ಜನರಿಗೆ ವಸತಿ ಸಹಿತ ತರಬೇತಿ ನೀಡುವ ಸಾಮರ್ಥ್ಯವಿದ್ದು, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ ಹಾಗೂ ಅಡುಗೆ ಕೋಣೆಗಳನ್ನು ಒಳಗೊಂಡಿದೆ. ಈ ಕಟ್ಟಡವನ್ನು
ಕಳೆದ ಸೆ. 23ರಂದು ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಬಾಂಕ್ವೆಟ್ ಹಾಲ್ ನಿಂದ ವರ್ಚುವಲ್ ಮೂಲಕ ಉದ್ಘಾಟಿಸಿದ್ದರು.

LEAVE A REPLY

Please enter your comment!
Please enter your name here