ವೈದ್ಯರ ನಿರ್ಲಕ್ಷದ ಆರೋಪ: ತಾಯಿ-ನವಜಾತ ಶಿಶು ಸಾವು

0
1371

ಕಲಬುರಗಿ,ಸೆ.25-ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮತ್ತೆ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಹೆರಿಗೆ ವೇಳೆ ನವಜಾತ ಶಿಶು ಸಾವನ್ನಪ್ಪಿದ್ದು, ಅರ್ಧ ಗಂಟೆಯಲ್ಲಿ ತಾಯಿ ಕೂಡಾ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ತಾಲೂಕಿನ ನಡುವಿನಗಳ್ಳಿ ಗ್ರಾಮದ ನಿವಾಸಿ ಕನ್ಯಾಕುಮಾರಿ (23) ಹಾಗೂ ಆಕೆಯ ನವಜಾತ ಶಿಶು ಮೃತರು. ಕಳೆದ ರಾತ್ರಿ ಕನ್ಯಾಕುಮಾರಿ ಅವರಿಗೆ ಹೆರಿಗೆ ನೋವು ಪ್ರಾರಂಭವಾಗಿತ್ತು. ಕುಟುಂಬದವರು ರಾತ್ರಿ 9 ಗಂಟೆಗೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ನಂತರ ಮಧ್ಯರಾತ್ರಿ ಒಂದು ಗಂಟೆ ಸಮಯದಲ್ಲಿ ಹೆರಿಗೆ ಮಾಡಿಸಲಾಗಿದ್ದು, ಹೆರಿಗೆ ಸಮಯದಲ್ಲೇ ಕೂಸು ಮೃತಪಟ್ಟಿದೆ.
ಹೆರಿಗೆ ನಂತರ ಅರ್ಧ ಗಂಟೆಯಲ್ಲಿ ತಾಯಿ ಕೂಡಾ ಸಾವನ್ನಪ್ಪಿದ್ದಾಳೆ. ಹೆರಿಗೆ ನಂತರ ಹೊಟ್ಟೆ ನೋವು ಎಂದಿದಕ್ಕೆ ಕನ್ಯಾಕುಮಾರಿಗೆ ನರ್ಸ್ ಗಳು ಮಾತ್ರೆ ನೀಡಿದ್ದರು. ಮಾತ್ರ ಸೇವಿಸಿದ್ದ ಕೆಲವೇ ನಿಮಿಷಗಳಲ್ಲಿ ತಾಯಿಯೂ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ತಾಯಿ-ಮಗು ಸಾವಿಗೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯ ತೋರಿದ ಆರೋಗ್ಯ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆಸ್ಪತ್ರೆ ಎದುರಿಗೆ ಪ್ರತಿಭಟನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here