ದೇವಲ್ ಗಾಣಗಾಪುರ, ಜು. 24: ಭೀಮಾ ತೀರದ ದೇವಲ್ ಗಾಣಗಾಪುರದಲ್ಲಿ ಯುವ ಟಂ-ಟA ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ನಸುಕಿನ ಜಾವ ನಡೆದಿದ್ದು, ಯುವಕ ಗಂಭೀರ ಗಾಯಗೊಂಡು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗಾಯಗೊಂಡ ಯುವಕನನ್ನು ದತ್ತು (19) ತಂದೆ ಯಶವಂತ ಎಂದು ಗುರುತಿಸಲಾಗಿದ್ದು, ಅವರು ವೃತ್ತಿಯಲ್ಲಿ ಟಂ-ಟA ಚಾಲಕರಾಗಿದ್ದಾರೆ. ಶುಕ್ರವಾರ ನಸುಕಿನ ಜಾವ ಸುಮಾರು 2.17ರ ವೇಳೆಗೆ ಸಂಗಮ ರಸ್ತೆಯ ಅವಧೂತ ಆಶ್ರಮದ ಸಮೀಪ ಈ ಘಟನೆ ನಡೆದಿದೆ.

ಪೊಲೀಸ್ ಮಾಹಿತಿಯಂತೆ, ಅದೇ ಗ್ರಾಮದ ಪ್ರಜ್ವಲ್ ತಂದೆ ಮಲ್ಕಪ್ಪ ಹೊಸಮನಿ ಹಾಗೂ ಪ್ರೀತಮ್ ತಂದೆ ಹಾಜಿ ಹೊಸಮನಿ ದ್ವಿಚಕ್ರ ವಾಹನದಲ್ಲಿ ಬಂದು ದತ್ತು ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡ ದತ್ತು ಅವರನ್ನು ಸ್ಥಳೀಯರು ತಕ್ಷಣ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.ಪ್ರಾಥಮಿಕ ವಿಚಾರಣೆಯಲ್ಲಿ, “ದಿಟ್ಟಿಸಿ ನೋಡಿದ ವಿಚಾರ”ವನ್ನು ನೆಪವನ್ನಾಗಿ ಮಾಡಿಕೊಂಡು ಆರೋಪಿಗಳು ಹಲ್ಲೆ ನಡೆಸಿರುವುದಾಗಿ ಗಾಯಾಳು ಯುವಕ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ಘಟನೆಯ ನಿಖರ ಕಾರಣ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

ಘಟನೆಯಿಂದ ದೇವಲ್ ಗಾಣಗಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ದೇವಲ್ ಗಾಣಗಾಪುರ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.





