ಇಸಾಳಿ ಪೈಪಿನಲ್ಲಿ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿ ಕುಟುಂಬ ಸದಸ್ಯರೊಂದಿಗೆ ಪೋಸ್ ನೀಡಿದ ಬೀಳಗಿ ಅಗ್ನಿಶಾಮಕ ಸಿಬ್ಬಂದಿ.
ಬೀಳಗಿ, ಜೂನ್ 15: ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಾಂಧಿನಗರ ವರ‍್ಡ್ ನಂ.2ರಲ್ಲಿ ಮನೋಹರ ಪತ್ತಾರ್ ಅವರ ಮನೆಯಲ್ಲಿ ಅಡುಗೆ ಕೊಠಡಿಯ ಹೊಗೆ ಹೊರಹಾಕುವ ಇಸಾಳಿ ಪೈಪಿನಲ್ಲಿ ಬೆಕ್ಕಿನ ಮರಿ ಸಿಲುಕಿಕೊಂಡ ಘಟನೆ ನಡೆದಿದೆ.
ತಾಯಿ ಬೆಕ್ಕು ತನ್ನ ಮರಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಸಾಗುವ ವೇಳೆ ಆಯತಪ್ಪಿ ಜಾರಿದ ಪರಿಣಾಮ ಮರಿ ಪೈಪಿನೊಳಗೆ ಸಿಲುಕಿಕೊಂಡಿತ್ತು. ಮನೆಯವರು ಬೆಳಗ್ಗೆಯಿಂದ ಸಂಜೆವರೆಗೆ ಸಾಕಷ್ಟು ಪ್ರಯತ್ನ ನಡೆಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಬಳಿಕ ಬೀಳಗಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಯಿತು.
ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಜಲವಾಹನದೊಂದಿಗೆ ಸ್ಥಳಕ್ಕೆ ಧಾವಿಸಿ ಸುಮಾರು ಒಂದು ಗಂಟೆಗಳ ಕಾಲ ಕರ‍್ಯಾಚರಣೆ ನಡೆಸಿ ಬೆಕ್ಕಿನ ಮರಿಯನ್ನು ಸುರಕ್ಷಿತವಾಗಿ ಜೀವಂತವಾಗಿ ರಕ್ಷಿಸಿದರು. ನಂತರ ಮರಿಯನ್ನು ಮನೆಯ ಮಾಲೀಕರಿಗೆ ಹಸ್ತಾಂತರಿಸಲಾಯಿತು.
ಮೂಕ ಪ್ರಾಣಿಯ ಜೀವ ಉಳಿಸಿದ ಅಗ್ನಿಶಾಮಕ ಸಿಬ್ಬಂದಿಗೆ ಮನೆಯವರು ಹೃತ್ಪರ‍್ವಕ ಧನ್ಯವಾದ ಸಲ್ಲಿಸಿ ಇಲಾಖೆಯ ಸೇವಾ ಮನೋಭಾವವನ್ನು ಶ್ಲಾಘಿಸಿದರು.
ಈ ಕರ‍್ಯಾಚರಣೆಯಲ್ಲಿ ಅಗ್ನಿಶಾಮಕ ಅಧಿಕಾರಿ ಆನಂದ್ ಚಿನಗುಂಡಿ ಅವರ ನೇತೃತ್ವದಲ್ಲಿ ಮಕ್ತುಮ್ ನದಾಫ್, ಮುತ್ತಪ್ಪ ದೊಡ್ಡಮನಿ, ಫಾರೂಕ್ ಹುಡೇದ್, ಮಾಂತೇಶ್ ವಡ್ಡರ್, ಅಶ್ಪಾಕ್ ಮುಲ್ಲಾ, ಸಿಕಂದರ್ ಸಾಬ್ ಹಾಗೂ ಲಿಂಗರೂಡ ಹಳ್ಳೂರು ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.



